Advertisement

ಹಿಜಾಬ್‌ ಧರಿಸದ ಮಹಿಳೆಯರು ಕೆಲಸದಿಂದ ವಜಾ,ಕಾರು ಜಪ್ತಿ: ಹೊಸ ನಿಯಮ ಜಾರಿಗೆ ಮುಂದಾದ ಇರಾನ್

01:08 PM Jul 31, 2023 | Team Udayavani |

ಟೆಹ್ರಾನ್: ಇರಾನ್‌ನಲ್ಲಿ ಹಿಜಾಬ್‌ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕ್ರಮಗಳನ್ನು ಅನುಸರಿಸುವ ಕಾನೂನು ಜಾರಿಗೆ ಬಂದಿದೆ ಎಂದು ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ತನ್ನ ವರದಿಯಲ್ಲಿ ತಿಳಿಸಿದೆ.

Advertisement

ಹಿಜಾಬ್‌ ಧರಿಸದ ಮಹಿಳೆಯರಿಗೆ ಸಾವಿರಾರು ಪೊಲೀಸರು ಎಸ್‌ ಎಂಎಸ್‌ ಮೂಲಕ, ಕಾರುಗಳನ್ನು ಜಪ್ತಿ ಮಾಡಲಾಗುವುದು, ಕೆಲಸದಿಂದ ತೆಗೆದು ಹಾಕಲಾಗುತ್ತದೆ ಹಾಗೂ ಕಾನೂನಿನ ಮೂಲಕ ಕಠಿಣ ಕ್ರಮಗೊಳ್ಳಲಾಗುತ್ತದೆ ಎನ್ನುವ ಸಂದೇಶ ರವಾನಿಸಿದ್ದಾರೆ ಎಂದು ʼದಿ ಇಂಡಿಪೆಂಡೆಂಟ್ʼ ವರದಿ ಮಾಡಿದೆ.

ಪೊಲೀಸರು 133,100ಕ್ಕೂ ಹೆಚ್ಚು ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಜೊತೆಗೆ ನಿಗದಿತ ಅವಧಿಯವರೆಗೆ ಕಾರನ್ನು ಬಳಸಬಾರದೆಂದು 2,000 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಇತ್ತೀಚೆಗೆ ಹಿಜಾಬ್‌ ಧರಿಸದ ಮಹಿಳೆಯೊಬ್ಬರಿಗೆ ಒಂದು ಪ್ರಕರಣದಲ್ಲಿ ಶಿಕ್ಷೆಯ ಭಾಗವಾಗಿ ಶವಗಳನ್ನು ತೊಳೆಯುವಂತೆ ನ್ಯಾಯಾಲಯ ಆದೇಶಿಸಿತ್ತು ಎಂದು ಅಮ್ನೆಸ್ಟಿ ತನ್ನ ವರದಿಯಲ್ಲಿ ತಿಳಿಸಿದೆ.

ಇದಲ್ಲದೇ ಹಲವಾರು ಮಹಿಳೆಯರನ್ನು ವಿಶ್ವವಿದ್ಯಾಲಯಗಳಿಂದ ಅಮಾನತುಗೊಳಿಸಲಾಗಿದೆ.  ಪರೀಕ್ಷೆಗಳನ್ನು ಬರೆಯದಂತೆ ನಿರ್ಬಂಧಿಸಲಾಗಿದೆ. ಬ್ಯಾಂಕಿಂಗ್ ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಡ್ಡಾಯ ಹಿಜಾಬ್‌ ಧರಿಸುವ ನಿಯಮವನ್ನು ಪಾಲಿಸದ ನೂರಾರು ವ್ಯಾಪಾರಗಳನ್ನು ಬಲವಂತವಾಗಿ ಮುಚ್ಚಲಾಗಿದೆ ಎಂದು ವರದಿಯಲ್ಲಿ ಅಮ್ನೆಸ್ಟಿ ಹೇಳಿದೆ.

Advertisement

“ಇರಾನ್‌ನಲ್ಲಿ ನೈತಿಕ ಪೊಲೀಸ್‌ ಗಿರಿ ಮರಳಿದೆ. ಸಾಮೂಹಿಕ ಕಣ್ಗಾವಲು ತಂತ್ರಜ್ಞಾನವನ್ನು ಬಳಸಿ, ಹಿಜಾಬ್‌ ಧರಿಸದ ಮಹಿಳೆರನ್ನು ಗುರುತಿಸಲಾಗುತ್ತಿದೆ. ಇಂದಿನ ಈ ದಬ್ಬಾಳಿಕೆ ಅತ್ಯಂತ ಕಠಿಣವಾಗಿದೆ. ಇದನ್ನು ನೋಡಿ ಅಂತರರಾಷ್ಟ್ರೀಯ ಸಮುದಾಯವು ಸುಮ್ಮನೆ ಕೂರಬಾರದೆಂದು” ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸೆಕ್ರೆಟರಿ ಜನರಲ್ ಆಗ್ನೆಸ್ ಕ್ಯಾಲಮರ್ಡ್ ಹೇಳುತ್ತಾರೆ.

ಹೊಸ ಹಿಜಾಬ್‌ ಕಾನೂನು: ಮೂರು ದಿನಗಳ ಹಿಂದಷ್ಟೇ, ಇರಾನ್‌ ನಲ್ಲಿ ಹೊಸ ಹಿಜಾಬ್‌ ಕಾನೂನು ಜಾರಿಗೆ ತರಲಾಗಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸದ ಮಹಿಳೆಯರನ್ನು ಬಂಧಿಸುವ ಮತ್ತು ದಂಡ ವಿಧಿಸುವ ಉದ್ದೇಶದಿಂದ ಇರಾನ್ ಸಂಸತ್ತು ವಿವಾದಾತ್ಮಕ ಹಿಜಾಬ್ ಮತ್ತು ಪರಿಶುದ್ಧತೆಯ ಮಸೂದೆಯನ್ನು ಜಾರಿಗೆ ತಂದಿದೆ ಎಂದು ರೇಡಿಯೊ ಫ್ರೀ ಯುರೋಪ್ ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next