Advertisement

ಕಾರ್ನಾಡಗೆ ಭಾವಪೂರ್ಣ ಶ್ರದ್ಧಾಂಜಲಿ

01:15 PM Jun 11, 2019 | Suhan S |

ಕಲಬುರಗಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ ಕಾರ್ನಾಡ್‌ ನಿಧನಕ್ಕೆ ಸೋಮವಾರ ಜಿಲ್ಲೆಯಲ್ಲಿ ಸಂತಾಪ ಸೂಚಿಸಲಾಯಿತು. ಗಿರೀಶ ಕಾರ್ನಾಡ್‌ ಅಗಲಿಕೆಗೆ ಗಣ್ಯರು, ಸಾಹಿತಿಗಳು ಶೋಕ ವ್ಯಕ್ತಪಡಿಸಿದರೆ ಸಂಘ-ಸಂಸ್ಥೆಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪಾ, ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ, ಸಂಸದ ಡಾ| ಉಮೇಶ ಜಾಧವ್‌, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಬಸವರಾಜ ಮತ್ತಿಮಡು, ಬಸವರಾಜ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಎಂ.ವೈ. ಪಾಟೀಲ, ಖನೀಜ್‌ ಫಾತೀಮಾ, ದತ್ತಾತ್ರೇಯ ಪಾಟೀಲ ರೇವೂರ, ಅವಿನಾಶ ಜಾಧವ್‌, ಮಾಜಿ ಶಾಸಕ ಬಿ.ಆರ್‌. ಪಾಟೀಲ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಹಲವರು ಸಂತಾಪ ಸೂಚಿಸಿದರು.

ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಮಧ್ಯಾಹ್ನದ ವೇಳೆ ಶಾಲೆಗಳನ್ನು ಬಿಡುವ ಮುನ್ನ ಎಲ್ಲ ಶಾಲೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಶರಣಬಸವ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದಲ್ಲೂ ಕುಲಪತಿಗಳು, ಉಪನ್ಯಾಸಕರು ಸಂತಾಪ ವ್ಯಕ್ತಪಡಿಸಿದರು.

ಗಿರೀಶ ಕಾರ್ನಾಡ್‌ ಒಬ್ಬ ಬುದ್ಧಿವಂತ, ಶ್ರೇಷ್ಠ ನಾಟಕಕಾರ, ಲೇಖಕ, ನಿರ್ದೇಶಕನನ್ನು ನಾವು ಕಳೆದುಕೊಂಡಿದ್ದೇವೆ. ಕುಟುಂಬಸ್ಥರಿಗೆ ಅಗಲಿಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಾರ್ಥಿಸಿದರು.

ಹಿರಿಯ ಸಾಹಿತಿ ಗಿರೀಶ ಕಾರ್ನಾಡ್‌ ನಿಧನದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಭಾಷೆಯನ್ನು ಅತ್ಯಂತ ಶ್ರೀಮಂತಗೊಳಿಸಿದವರಲ್ಲಿ ಅವರು ಪ್ರಮುಖರಾಗಿದ್ದರು ಎಂದು ಸಂಸದ ಡಾ| ಉಮೇಶ ಜಾಧವ್‌ ಸ್ಮರಿಸಿದ್ದಾರೆ.

Advertisement

ಗಿರೀಶ ಕಾರ್ನಾಡ್‌ ಅವರು ಬಹುಮಖ ಪ್ರತಿಭೆಯ ಅವರ ನಿಧನದಿಂದಾಗಿ ಶ್ರೇಷ್ಠ ಚಿಂತಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಗಿರೀಶ ಕಾರ್ನಾಡ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಇಕ್ಬಾಲ ಆಳಂದ, ಕುಮಾರ ಕವಡೆ, ಮಂಜುಳಾ, ಅಶೋಕ ಭೀಮಳ್ಳಿ, ಚಂದ್ರಕಾಂತ ಗುತ್ತೇದಾರ, ಖಣದಾಳ ಇದ್ದರು.

ನಾಟಕಕ್ಕೆ ವಿಶ್ವಮಾನ್ಯತೆ ಕೊಟ್ಟಿದ್ದ ಕಾರ್ನಾಡ್‌: ಹೊಸ ಮತ್ತು ಹಳೆ ತಲೆಮಾರಿನ ಲೇಖಕರಿಗೆ ಸಾಹಿತಿ, ನಾಟಕಕಾರ ಗಿರೀಶ್‌ ಕಾರ್ನಾಡ್‌ ಸಾಕ್ಷಿಪ್ರಜ್ಷೆಯಂತಿದ್ದರು ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಎಂ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು. ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ, ಕನ್ನಡ ಮತ್ತು ಆಂಗ್ಲ ವಿಭಾಗಗಳ ಸಹಯೋಗದೊಂದಿಗೆ ವಿಭಾಗದ ಅನುಭವ ಮಂಟಪದಲ್ಲಿ ನಡೆದ ಸಂತಾಪ ಸಭೆಯಲ್ಲಿ ಅಗಲಿದ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರಿಗೆ ನುಡಿ ನಮನ ಸಲ್ಲಿಸಿದರು. ಕನ್ನಡ ನಾಟಕ ಪ್ರಕಾರವನ್ನು ವಿಶ್ವದರ್ಜೆಮಟ್ಟಿಗೆ ಏರಿಸಿ ಅದನ್ನು ನಿರಂತರವಾಗಿ ಒಂದು ಪ್ರಕ್ರಿಯೆಯನ್ನಾಗಿ ಮಾಡಿದ ಶ್ರೇಯಸ್ಸು ಕಾರ್ನಾಡರಿಗೆ ಸಲ್ಲುತ್ತದೆ. ಅವರ ನಿಧನದಿಂದ ನಾಡಿನ ಸಾಹಿತ್ಯ ಲೋಕ ಬಡವಾಗಿದೆ ಎಂದು ಹೇಳಿದರು.

ಪತ್ರಿಕೋದ್ಯಮದ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್‌ ಮಾತನಾಡಿ, ಕಾರ್ನಾಡರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿ ಸೈಎನಿಸಿಕೊಂಡಿದ್ದರು. ಅದರ ಜತೆಗೆ ಅವರು ಸಾಮಾಜಿಕ ಸಮಸ್ಯೆಗಳಿಗೂ ಧ್ವನಿಯಾಗುತ್ತಿದ್ದರು. ಅನ್ಯಾಯದ ವಿರುದ್ಧ ಮಾತನಾಡುವ ಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.

ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ| ಗೀತಮಾಲಾ ಎಲಿನೋರ್‌ ಮಾತನಾಡಿದರು. ಸಭೆಯಲ್ಲಿ ಎರಡು ನಿಮಿಷ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next