ಕಲಬುರಗಿ: ಸಾಕ್ಷರತಾ ಕಾರ್ಯಕ್ರಮಗಳನ್ನು ನೀಡುವ ಸಂಯೋಜಕರ ಗುರುತಿಗಾಗಿ ಅವರಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪ್ರತಿಯನ್ನು ಅಧಿಕಾರಿಗಳು ಪಡೆಯಬೇಕು ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಡಾ| ಎಂ.ಟಿ. ರೇಜು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕ ಶಿಕ್ಷಣ ಇಲಾಖೆಯ 2018-19ನೇ ಮತ್ತು 2019-20ನೇ ಸಾಲಿನಲ್ಲಿ ವಿವಿಧ ಮೂಲ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದ್ದು, ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ಅನುಷ್ಠಾನ ಮಾಡುವ ಮೂಲಕ ಸಾಕ್ಷರತೆಯನ್ನು ಪ್ರತಿಶತ ಹೆಚ್ಚಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.
ಡಾ| ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಇಲಾಖೆಯು ಹೆಚ್ಚಿನ ಒತ್ತು ನೀಡುತ್ತಿದೆ. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಲು ಮುಂದೆ ಬರುತ್ತಿರುವುದು ಆಶಾದಾಯಕವಾಗಿದೆ ಎಂದರು. ಲೋಕ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಕೆ.ಎನ್. ವಿಜಯ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕಿ ಅರ್ಚನಾ ಎಸ್. ಮಾಡ್ಯಾಳಕರ್, ಸುನೀತಾ ರಾಠೊಡ, ಅಜೀತ್ ಅಹ್ಮದ್ ಹಾಗೂ ಜಿಲ್ಲೆಯ ತಾಲೂಕು ಸಂಯೋಜಕರು, ಸಾಕ್ಷರತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.