Advertisement

ಎರಡು ನದಿಗಳ ಜಲಮಾರ್ಗದಲ್ಲಿ ಸರಕು ಸಾಗಾಟಕ್ಕೆ ಬ್ರೇಕ್‌!

11:46 PM Mar 09, 2021 | Team Udayavani |

ಮಹಾನಗರ: ನೇತ್ರಾವತಿ ಹಾಗೂ ಗುರುಪುರ ನದಿ ಸಹಿತ ರಾಜ್ಯದ 5 ಜಲ ಮಾರ್ಗಗಳಲ್ಲಿ ಸರಕು ಸಾಗಾಣಿಕೆ ಮಾಡುವ ಮಹತ್ವದ ಯೋಜನೆಗೆ “ಆರ್ಥಿಕವಾಗಿ ಲಾಭದಾಯಕವಾಗಿಲ್ಲ’ ಎಂಬ ವರದಿ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ!

Advertisement

ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ, ಜಲ ಮಾರ್ಗದಲ್ಲಿ ಸರಕು ಸಾಗಾಟ ಯೋಜನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟು ಅದರ ಬದಲು ಅಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ 11 ರಾಷ್ಟ್ರೀಯ ಒಳನಾಡು ಜಲಮಾರ್ಗಗಳನ್ನು ಈಗಾಗಲೇ ಘೋಷಿಸಿದೆ.ಈ 11 ಜಲಮಾರ್ಗಗಳ ಪೈಕಿ 5 ರಾಷ್ಟ್ರೀಯ ಒಳನಾಡು ಜಲಮಾರ್ಗಗಳಾದ ಗುರುಪುರ, ನೇತ್ರಾವತಿ ಸಹಿತ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಾಣಿಕೆಗಾಗಿ ಅಭಿವೃದ್ಧಿಪಡಿಸಲು 2016-17ನೇ ಸಾಲಿನಲ್ಲಿ “ಇನ್‌ ಲ್ಯಾಂಡ್‌ ವಾಟರ್‌ವೆಯ್ಸ ಅಥಾರಿಟಿ ಆಫ್‌ ಇಂಡಿಯಾ (ಐಡಬ್ಲ್ಯುಎಐ)’ ವಿಸ್ತೃತ ಯೋಜನ ವರದಿ ಸಲ್ಲಿಸಿದೆ. ಆದರೆ ಸರಕು ಸಾಗಾಣೆಗೆ ಗುರುಪುರ, ನೇತ್ರಾವತಿ ಸಹಿತ 5 ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು ಆರ್ಥಿಕ ವಾಗಿ ಲಾಭದಾಯಕವಾಗಿಲ್ಲ ಎಂಬ ವರದಿಯನ್ನು ಸಂಸ್ಥೆ ನೀಡಿದೆ.

ಹೀಗಾಗಿ, ಸರಕು ಸಾಗಾಟ ಯೋಜನೆ ಕೈಬಿಟ್ಟು ಈ ಜಲಮಾರ್ಗಗಳಲ್ಲಿ ಪ್ರವಾ ಸೋ ದ್ಯಮ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರಕಾರ ತೀರ್ಮಾನಿಸಿದೆ. ಇದಕ್ಕೆ ಒಟ್ಟು 59.90 ಕೋ.ರೂ. ವೆಚ್ಚದಲ್ಲಿ ಯೋಜನೆ ರೂಪಿಸಲು ಉದ್ದೇಶಿಸಿದೆ. ಇದನ್ನು ಯಾವ ರೀತಿಯಲ್ಲಿ ಬಳಕೆ ಮಾಡಬಹುದು ಎಂಬ ಕುರಿತ ಅಂತಿಮ ವರದಿ ಇನ್ನಷ್ಟೇ ಆಗಬೇಕಿದೆ.

ಏನಿದು ಜಲಮಾರ್ಗಗಳು?
ಒಳನಾಡು ಜಲಸಾರಿಗೆ ಮೂಲಕ ನದಿಗಳಲ್ಲಿ ನೌಕಾ ಸೇವೆ ಮೂಲಕ ಸಂಚಾರ, ಸಾಗಾಟ ಉತ್ತೇಜಿಸಲು ರಾಷ್ಟ್ರೀಯ ಜಲಮಾರ್ಗ ಕಲ್ಪನೆ ಹುಟ್ಟಿಕೊಂಡಿದೆ. ಭಾರತದಲ್ಲಿ ಮೊದಲು ಇದ್ದದ್ದು ಕೇವಲ 5 ರಾಷ್ಟ್ರೀಯ ಜಲಮಾರ್ಗಗಳು. 2016ರಲ್ಲಿ ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ 106 ನದಿಗಳನ್ನು ಕೇಂದ್ರ ಸರಕಾರ ಸೇರಿಸಿತು. ಹೀಗಾಗಿ ದೇಶದ ಒಟ್ಟು ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 111ಕ್ಕೆ ಏರಿಕೆ ಆಗಿತ್ತು. ಅದರಲ್ಲಿ ಕರ್ನಾಟಕದ 11 ರಾಷ್ಟ್ರೀಯ ಜಲಮಾರ್ಗಗಳಿವೆ.

Advertisement

ನದಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಾವೆಗಳ ಮೂಲಕ ಪ್ರಯಾಣಿಕರ ಸಾಗಾಟ ಹಾಗೂ ನೌಕಾ ಚಟುವಟಿಕೆಗಳ ಮೂಲಕ ಸರಕು ಸಾಗಾಟಕ್ಕೆ ಅವಕಾಶ ನಿರೀಕ್ಷಿಸಲಾಗಿತ್ತು. ರಸ್ತೆ ಸಂಚಾರಕ್ಕೆ ಹೋಲಿಕೆ ಮಾಡಿದರೆ ಜಲಮಾರ್ಗದ ಸಂಚಾರ ತುಂಬಾ ಅಗ್ಗವಾಗಲಿದೆ. ಈವರೆಗೆ ರಾಜ್ಯದಲ್ಲಿ ನದಿಯ ಒಂದು ದಡದಿಂದ ಮತ್ತೂಂದು ದಂಡೆಗೆ ಹೋಗಲು ಕೆಲವು ಕಡೆಗಳಲ್ಲಿ “ಕಡವು ಸೇವೆ’ ಮಾತ್ರ ಇತ್ತು. ಆದರೆ ಜಲಮಾರ್ಗದ ವ್ಯವಸ್ಥೆ ಇರಲಿಲ್ಲ.

ಮಂಗಳೂರು-ಪಣಜಿ; ಹೊಸ ಜಲಮಾರ್ಗ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿರುವ ಬಜೆಟ್‌ನಲ್ಲಿ ಮಂಗಳೂರು-ಪಣಜಿ ನಡುವೆ ಜಲಮಾರ್ಗಗಳ ಅಭಿವೃದ್ಧಿ ಬಗ್ಗೆ ಉಲ್ಲೇಖೀಸಿದ್ದಾರೆ. ಈ ಮೂಲಕ ಎರಡೂ ನಗರಗಳ ನಡುವೆ ವ್ಯಾಪಾರ ವಹಿವಾಟು ಬೆಳೆಸುವ ಉದ್ದೇಶದ ಬಗ್ಗೆ ಪ್ರಸ್ತಾವಿಸಿದ್ದಾರೆ. ಇದು ಯಾವ ರೀತಿಯಿಂದ ಜಾರಿಯಾಗಲಿದೆ ಎಂಬ ಬಗ್ಗೆ ಸದ್ಯ ಇಲಾಖೆಯಲ್ಲಿ ಮಾಹಿತಿಯಿಲ್ಲ. ಒಂದು ವೇಳೆ ಯೋಜನೆಯು ಸಾಕಾರವಾದರೆ ಕರಾವಳಿಯ ಆರ್ಥಿಕ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ.

60 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ
ಕೇಂದ್ರ ಸರಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರದ ಧನಸಹಾಯದೊಂದಿಗೆ ಒಟ್ಟು 60 ಕೋ.ರೂ. ವೆಚ್ಚದಲ್ಲಿ ಐದು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿ ಸರಕು ಸಾಗಾಟ ಪರಿಕಲ್ಪನೆಯ ಬದಲಿಗೆ ಪ್ರವಾಸೋದ್ಯಮ ಅಭಿವೃದ್ಧಿ ನೆಲೆಯಲ್ಲಿ ಸದ್ಯಕ್ಕೆ ಯೋಜನೆ ರೂಪಿಸಲಾಗುವುದು.
-ಕ್ಯಾ| ಸ್ವಾಮಿ, ನಿರ್ದೇಶಕರು, ಬಂದರು ಇಲಾಖೆ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next