ಕೊಪ್ಪಳ: ಕಳೆದ ವರ್ಷ ಜಿಲ್ಲೆಯಲ್ಲಿ ಸರಣಿ ಜಿಂಕೆಗಳ ಸಾವಿನ ಸರಣಿ ಬೆಚ್ಚಿ ಬೀಳಿಸಿದ್ದು ಆ ಪ್ರಕರಣದಲ್ಲಿ ಎರಡು ಮೃತ ಜಿಂಕೆಗಳ ಅಂಗಾಂಗದಲ್ಲಿ ಬೆಳೆನಾಶಕ ವಿಷಕಾರಿ ಅಂಶ ಇರುವುದನ್ನು ಪ್ರಯೋಗಾಲಯದ ವರದಿ ದೃಢಪಡಿಸಿದೆ. ಆದರೆ ಈ ಪ್ರಕರಣದಲ್ಲಿ ಯಾರ ಮೇಲೆ ಕ್ರಮ ಕೈಗೊಳ್ಳಬೇಕೆನ್ನುವುದೇ ಅರಣ್ಯ ಇಲಾಖೆಗೆ ತಿಳಿಯದಾಗಿದ್ದು, ಬಹುತೇಕ ಪ್ರಕರಣಕ್ಕೆ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ.
ಯಾರ ಮೇಲೆ ಕ್ರಮವೆಂಬ ಚಿಂತೆ?: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೈಗೆ ವರದಿ ತಲುಪಿದೆ. ಆದರೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಗೊಂಗಲದಲ್ಲಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಬೆಳೆಗೆ ಬಿದ್ದಿರುವ ಬೆಳೆಹಾನಿ ತಡೆಯಲು ರಾಸಾಯನಿಕ ಔಷಧಿಗಳನ್ನು ನಿಗದಿತ ಪ್ರಮಾಣದಲ್ಲಿ ಸಲಹೆ ನೀಡಿದ್ದಾರೆ. ಅದನ್ನು ಆಧರಿಸಿ ರೈತರು ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಿದ್ದಾರೆ. ಇಲ್ಲಿ ಯಾರ ಮೇಲೆ ಕ್ರಮವೆಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಸ್ವತಃ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣಕ್ಕೆ ಬಹುತೇಕ ಎಳ್ಳು ನೀರು!: ಜಿಂಕೆಗಳ ಸರಣಿ ಸಾವಿನ ಪ್ರಕರಣ ಗಂಭೀರವಾಗಿದ್ದರೂ ಕ್ರಮ ಯಾರ ಮೇಲೂ ಇಲ್ಲವೆಂಬ ಮಾತು ಕೇಳಿ ಬರುತ್ತಿದೆ. ಇತ್ತ ರೈತನ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ. ಅತ್ತ ಕೃಷಿ ಇಲಾಖೆ ಬೆಳೆಗೆ ಕೀಟಬಾಧೆ ನಿಯಂತ್ರಣಕ್ಕೆ ಸಲಹೆ ನೀಡಿದೆ. ರೈತನೂ ಕೃಷಿ ಇಲಾಖೆಯ ಮೇಲೆ ಹಾಕಿ ಸುಮ್ಮನಾಗುತ್ತಿದ್ದಾನೆ ಎನ್ನುವ ಮಾತು ವ್ಯಕ್ತವಾಗಿದ್ದು, ಬಹುತೇಕ ಈ ಪ್ರಕರಣಕ್ಕೆ ಎಳ್ಳುನೀರು ಬಿಡಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಆದರೆ ಇನ್ಮುಂದೆ ರೈತರಿಗೆ ಬಿತ್ತನೆ ಮಾಡುವ ವೇಳೆ ಸಾವಯವ ಬಿತ್ತನೆಗೆ ಹೆಚ್ಚು ಒತ್ತುಕೊಟ್ಟು ಜಾಗೃತಿ ಮೂಡಿಸಲಿದ್ದೇವೆ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.
•ಕ್ರಮ ಯಾರ ಮೇಲೆ ಎನ್ನುತ್ತಿದೆ ಇಲಾಖೆ
Advertisement
ಹೌದು. ಕಳೆದ ವರ್ಷ ಕೊಪ್ಪಳ ತಾಲೂಕಿನ ಅಳವಂಡಿ, ಬೆಟಗೇರಿ ಭಾಗದಲ್ಲಿ ಸರಣಿ ಜಿಂಕೆಗಳ ಸಾವಿನ ಪ್ರಕರಣ ವರದಿಯಾಗಿದ್ದವು. ಬೇಟೆಗಾರರ ತಂಡವು ಜಿಂಕೆಗಳನ್ನು ಕೊಂದು ಅವುಗಳ ಅಂಗಾಗ, ಚರ್ಮವನ್ನು ಅನ್ಯಕಡೆ ಮಾರಾಟ ಮಾಡುವ ಅನುಮಾನ ಜನಸಾಮಾನ್ಯರಲ್ಲಿ ವ್ಯಕ್ತವಾಗಿದ್ದವು. ಇನ್ನೂ ಕೆಲವೆಡೆ ರೈತರೇ ಬೆಳೆಹಾನಿಯಾಗುವುದನ್ನು ತಪ್ಪಿಸಲು ಜಿಂಕೆಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದ್ದವು. ಜೊತೆಗೆ ಬೆಳೆಗೆ ಕೀಟಬಾಧೆ ನಿಯಂತ್ರಿಸಲು ಕ್ರಿಮಿನಾಶಕ ಸಿಂಪರಣೆ ಮಾಡಿದ್ದು, ಆ ಬೆಳೆಯನ್ನು ತಿಂದು ಬೆಟಗೇರಿ ಹಾಗೂ ಅಳವಂಡಿ ಭಾಗದಲ್ಲಿ ಜಿಂಕೆಗಳ ನಿಗೂಢ ಸಾವಿನ ಬಗ್ಗೆ ಮಾಧ್ಯಮಗಳಲ್ಲೂ ವರದಿ ಬಿತ್ತರವಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ದೌಡಾಯಿಸಿ ಎಲ್ಲೆಡೆ ಹುಡುಕಾಟ ನಡೆಸಿ ಏಳು ಜಿಂಕೆಗಳ ಮೃತದೇಹ ಪತ್ತೆ ಮಾಡಿದ್ದರು. ಅವುಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲಬುರಗಿ ಪ್ರಯೋಗಾಲಯಕ್ಕೆ ಅಂಗಾಗಳ ರವಾನೆ ಮಾಡಲಾಗಿತ್ತು. ಏಳೆಂಟು ತಿಂಗಳ ತರುವಾಯ, ಅಂಗಾಂಗದ ವರದಿ ಬಂದಿದ್ದು, ಐದು ಜಿಂಕೆಗಳ ಸಾವಿನ ಪೈಕಿ ಮೂರು ಜಿಂಕೆಗಳು ಸಿಡಿಲಿನ ಆರ್ಭಟಕ್ಕೆ ಸತ್ತಿವೆ ಎಂದಿದ್ದರೆ, 2 ಜಿಂಕೆಗಳ ದೇಹದಲ್ಲಿ ಕ್ಲೋರೋಫೈರಿಪಾಸ್‌ನ ಅಂಶ ಇರುವುದು ಪತ್ತೆಯಾಗಿದೆ.
Related Articles
Advertisement
•2 ಜಿಂಕೆ ದೇಹದಲ್ಲಿ ವಿಷಕಾರಿ ಅಂಶ ಪತ್ತೆ
•ರೈತರಲ್ಲಿ ಜಾಗೃತಿ ಮೂಡಿಸುವ ಮಾತು
•ಕೀಟಬಾಧೆ ನಿಯಂತ್ರಿಸಲು ಕ್ರಿಮಿನಾಶಕ ಸಿಂಪರಣೆ
•ಅಸಹಾಯಕರಾದ ಅಧಿಕಾರಿಗಳು
•ಸಾವಯವ ಕೃಷಿ ಕೈಗೊಳ್ಳಲು ರೈತರಿಗೆ ಸಲಹೆ
ಜಿಂಕೆಗಳ ಸಾವಿನ ವರದಿ ಬಂದಿದೆ. ಐದು ಜಿಂಕೆಗಳ ಸಾವಿನ ಪೈಕಿ 3 ಸಿಡಿಲಿನಿಂದ ಸತ್ತಿವೆ. 2 ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕದ ಅಂಶ ಇರುವುದು ಪತ್ತೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಯಾರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಪ್ರಶ್ನೆ ಮೂಡಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುವೆನು. ಅಲ್ಲದೇ, ಇನ್ಮುಂದೆ ರೈತರಿಗೆ ಸಾವಯವ ಬೆಳೆಗೆ ಒತ್ತು ನೀಡುವಂತೆ ರೈತರಲ್ಲಿ ಜಾಗೃತಿ ಮೂಡಿಸುವ ಕುರಿತು ಕ್ರಮ ಕೈಗೊಳ್ಳಲಿದ್ದೇವೆ. –ಯಶಪಾಲ್, ಡಿಎಫ್‌ಒ
•ದತ್ತು ಕಮ್ಮಾರ