Advertisement

ಜನಮಾನಸದಿಂದ ಮಾಸ್ಕ್ ದೂರ?

05:51 PM Dec 02, 2021 | Team Udayavani |

 ದಾವಣಗೆರೆ: ಎಂದೆಂದೂ ಕಂಡು, ಕೇಳರಿಯದ ಮಹಾಮಾರಿ ಕೊರೊನಾ ಆರ್ಭಟದಿಂದ ತತ್ತರಿಸಿ ಜೀವ ರಕ್ಷಣೆಗೆ ಆಶ್ರಯಿಸುತ್ತಿರುವ ಸಂದರ್ಭದಲ್ಲಿ ಮಾಸ್ಕ್ ಧಾರಣೆ ಈಗ ಎಲ್ಲೆಡೆ ಅಕ್ಷರಶಃ ಕಾಣೆಯಾಗುತ್ತಿದೆ.

Advertisement

2020 ಮಾರ್ಚ್‌ನಿಂದ ಕಾಡಲಾರಂಭಿಸಿದ ಕೊರೊನಾದಿಂದ ಬಚಾವಾಗಲು ಜೀವರಕ್ಷಾ ಕವಚದಂತೆ ಪ್ರತಿಯೊಬ್ಬರೂ ಬಳಸುತ್ತಿದ್ದಂತಹ ಮಾಸ್ಕ್ ಕೊರೊನಾದ ಅಬ್ಬರ ಕಡಿಮೆ ಆಗುತ್ತಿದ್ದಂತೆ ಬಳಕೆಯೇ ಆಗುತ್ತಿಲ್ಲ. ಅಲ್ಲಲ್ಲಿ ಮಾಸ್ಕ್ ಹಾಕಿಕೊಂಡವರು ಕಂಡು ಬಂದರೂ ಆರಂಭಿಕ ದಿನಗಳಲ್ಲಿ ಕಂಡು ಬರುತ್ತಿದ್ದ ಮಾಸ್ಕ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ.

ಅಚ್ಚರಿ ಮತ್ತು ಗಮನಾರ್ಹವೆಂದರೆ ಮಹಾಮಾರಿ ಕೊರೊನಾದ ರೂಪಾಂತರಿ ಒಮಿಕ್ರಾನ್‌ನ ಆತಂಕ, ಭಯ ನಿಧಾನವಾಗಿ ಎಲ್ಲ ಕಡೆ ಕಂಡು ಬರುತ್ತಿದ್ದರೂ ಜನರು ಮಾಸ್ಕ್ ಹಾಕಿಕೊಳ್ಳುವತ್ತ ಗಮನ ಹರಿಸುತ್ತಿಲ್ಲ. ಅಂಗಡಿ, ಮಾಲ್‌, ಹೋಟೆಲ್‌, ಬಸ್‌, ಆಟೋರಿಕ್ಷಾ, ಸಿನಿಮಾ ಮಂದಿರ ಸೇರಿದಂತೆ ಜನಸಂದಣಿ ಇರುವಂತಹ ಕಡೆಗಳಲ್ಲಿ ಮಾಸ್ಕ್ ಮರೆಯಾಗುತ್ತಿದೆ. ದಾವಣಗೆರೆ ಜಿಲ್ಲೆ ಕೊರೊನಾದ ಮೊದಲ ಅಲೆಯಲ್ಲಿ ಅಕ್ಷರಶಃ ತತ್ತರಿಸಿ ಹೋಗಿತ್ತು. ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ತಿಂಗಳುಗಟ್ಟಲೆ ಕಂಟೈನ್‌ಮೆಂಟ್‌ ಝೋನ್‌ ನಿರ್ಮಾಣಗೊಂಡಿದ್ದವು. ಜಿಲ್ಲೆಯಲ್ಲಿ 13,380 ಪುರುಷರು, 9,187 ಮಹಿಳೆಯರು ಒಳಗೊಂಡಂತೆ 22,567 ಜನರು ಸೋಂಕಿಗೆ ಒಳಗಾಗಿದ್ದರು. ಮೊದಲ ಅಲೆಯಲ್ಲಿ 264 ಜನರು ಮೃತಪಟ್ಟಿದ್ದಾರೆ. ಎರಡನೇ ಅಲೆ ಗ್ರಾಮೀಣ ಭಾಗಕ್ಕೂ ತೀವ್ರಗತಿಯಲ್ಲಿ ವ್ಯಾಪಿಸಿದ್ದರ ಪರಿಣಾಮ ಜನರು ತರಗಲೆಯಂತೆ ತತ್ತರಿಸಿ ಹೋಗಿದ್ದರು.

16, 023 ಪುರುಷರು, 11,807 ಮಹಿಳೆಯರು ಒಳಗೊಂಡಂತೆ 27,830 ಜನರು ಕೊರೊನಾ ಪೀಡಿತರಾಗಿದ್ದರು. ಎರಡನೇ ಅಲೆಯಲ್ಲಿ 323 ಹಾಗೂ ಕೊರೊನಾ ಮಾದರಿ ಆರೋಗ್ಯ ಸಮಸ್ಯೆಯಿಂದ 321 ಜನರು ಸಾವನ್ನಪಿದ್ದಾರೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಒಟ್ಟಾರೆ 608 ಜನರು ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ. ಈಗ ಜಿಲ್ಲೆಯಲ್ಲಿ 12 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೊರೊನಾದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಂಕಿಯಲ್ಲಿ ಇರುವುದು ಮತ್ತು ಕೊರೊನಾದ ಬಗ್ಗೆ ಇದ್ದಂತಹ ಭಯ, ಆತಂಕ ಇಲ್ಲದೇ ಇರುವುದರಿಂದ ಜನರು ಮಾಸ್ಕ್ ಧರಿಸುವುದನ್ನು ಮರೆತಂತೆ ಕಾಣುತ್ತಿದೆ. ಏನೂ ಆಗೊಲ್ಲ ಬಿಡು ಎಂಬ ಉದಾಸೀನತೆಯೂ ಮಾಸ್ಕ್ ಹಾಕದೇ ಇರುವುದಕ್ಕೆ ಕಾರಣ ಆಗುತ್ತಿದೆ. ಕೊರೊನಾದ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿತ್ತು. ಮಾಸ್ಕ್ ಹಾಕಿಕೊಳ್ಳದೇ ಇದ್ದವರಿಗೆ ನಗರ ಪ್ರದೇಶಗಳಲ್ಲಿ 500 ರಿಂದ ಒಂದು ಸಾವಿರ ರೂ. ದಂಡವೂ ವಿಧಿಸಲಾಗುತ್ತಿತ್ತು.

ಸಾರ್ವಜನಿಕರ ಪ್ರತಿರೋಧ ಕಾರಣಕ್ಕೆ 250 ರೂ., ಗ್ರಾಮಾಂತರ ಪ್ರದೇಶಗಳಲ್ಲಿ 100 ರೂ. ದಂಡ ನಿಗದಿಪಡಿಸಲಾಗಿತ್ತು. ಜಿಲ್ಲಾ, ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ, ಆರೋಗ್ಯ, ಪೊಲೀಸ್‌ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತರ ಪಡೆ ಮಾಸ್ಕ್ ಅಭಿಯಾನ ನಡೆಸಿ ದಂಡ ವಸೂಲಿ ಮಾಡಲಾಗುತ್ತಿತ್ತು. ಕೊರೊನಾದ ತೀವ್ರತೆ ಕಡಿಮೆ ಆಗುತ್ತಿದ್ದಂತೆ ಈಗ ಅಭಿಯಾನ, ದಂಡ ವಸೂಲಿ ಎಲ್ಲವನ್ನೂ ನಿಲ್ಲಿಸಲಾಗಿದೆ. ಹಾಗಾಗಿ ಮಾಸ್ಕ್ ಹಾಕಿಕೊಳ್ಳದೇ ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Advertisement

”ಕೊರೊನಾ ತಡೆಗಟ್ಟಲು ಅತಿ ಮುಖ್ಯ ಮಾರ್ಗಸೂಚಿಯಾಗಿರುವ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಜಾಗೃತಿ ಅಭಿಯಾನಕ್ಕೆ ಮತ್ತೆ ಚಾಲನೆ ನೀಡಲಾಗುವುದು. ಹರಿಹರದಂತೆ ದಾವಣಗೆರೆಯಲ್ಲೂ ಲಸಿಕಾ ಅಭಿಯಾನ ನಡೆಸುವ ಜೊತೆಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.”

ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ಮೊದಲ ಅಲೆಯಿಂದ ಈವರೆಗೆ ಜಿಲ್ಲೆಯಲ್ಲಿ ಮಾಸ್ಕ್ ಹಾಕದೇ ಇರುವವರ ವಿರುದ್ಧ ಒಟ್ಟಾರೆ 80,743 ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಕೊರೊನಾದ ಅಬ್ಬರ ಕಡಿಮೆ ಆಗಿರುವ ಕಾರಣಕ್ಕೆ ಸರ್ಕಾರ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಈಗ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಲಾಗಿದೆ. ಸರ್ಕಾರ ಆದೇಶ ನೀಡಿದರೆ ಮಾಸ್ಕ್ ಅಭಿಯಾನ, ಪ್ರಕರಣ ದಾಖಲು, ದಂಡ ವಸೂಲಿ ಇತರೆ ಕ್ರಮಗಳನ್ನು ಮತ್ತೆ ಪ್ರಾರಂಭಿಸಲಾಗುವುದು. ಜಿಲ್ಲಾಡಳಿತ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.

ಸಿ.ಬಿ. ರಿಷ್ಯಂತ್‌, ಜಿಲ್ಲಾ ರಕ್ಷಣಾಧಿಕಾರಿ

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next