ಮಸ್ಕಿ: ಬ್ಲ್ಯಾಕ್ ಮೇಲ್ ಪತ್ರಕರ್ತರಿಂದಾಗಿ ಇಂದು ಪತ್ರಿಕೋದ್ಯಮಕ್ಕೆ ಕೆಟ್ಟ ಹೆಸರು ಬಂದಿದೆ. ಯೂಟೂಬ್ ಪತ್ರಕರ್ತರು, ನಕಲಿ ಪತ್ರಕರ್ತರಿಂದಾಗಿ ಪತ್ರಿಕೋದ್ಯಮದ ಮೌಲ್ಯಗಳು ಕೂಡ ಮರೆಯಾಗುತ್ತಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಭ್ರಮರಾಂಭ ದೇವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಮಸ್ಕಿ ಪತ್ರಕರ್ತರ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಪತ್ರಕರ್ತರಿಗೆ ಸಂಭ್ರಮ ಸಡಗರದ ದಿನ. ಪತ್ರಕರ್ತರು ಒಂದು ವೇದಿಕೆಗೆ ಸೇರುವ ಒಂದು ದಿನ ಎಂದರೆ ಅದು ಜುಲೈ 1. ಪತ್ರಿಕೆ ಪ್ರಾರಂಭವಾದ ದಿನವನ್ನ ಜುಲೈ ತಿಂಗಳ ಪೂರ್ತಿ ಪತ್ರಿಕಾ ದಿನಾಚರಣೆ ಮಾಡಲಾಗುತ್ತದೆ. ಪತ್ರಿಕಾ ಭವನ ನಿರ್ಮಾಣಕ್ಕೆ ಶ್ರದ್ಧೆ, ಶ್ರಮ ಅಗತ್ಯ.
ಮಸ್ಕಿಯಲ್ಲಿ ಸುಂದರವಾದ ಭವನ ನಿರ್ಮಾಣ ಮಾಡಲಾಗಿದೆ. ಪತ್ರಿಕಾ ಭವನ ದೇವಸ್ಥಾನದ “ಶ್ರೇಷ್ಠ’ ವಾದ ಸ್ಥಳ. ಪತ್ರಿಕೋದ್ಯಮವನ್ನ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿರುವ ಎಲ್ಲ ಪತ್ರಕರ್ತರಿಗೂ ಅಭಿನಂದನೀಯ ಎಂದರು.
ಪತ್ರಕರ್ತರಾಗಿ ಕೆಲಸ ಮಡುವಾಗ ವೃತ್ತಿ ಬದ್ದತೆ ಇರಬೇಕು. ನೊಂದವರಿಗೆ ನ್ಯಾಯ ಕೊಡಿಸುವಂತ ಕೆಲಸ ಮಾಡಬೇಕು. ವೃತ್ತಿ ಮಾಡುವಾಗ ಅನೇಕ ಸವಾಲು ಎದುರಾಗುತ್ತವೆ. ಇದು ಸರಕಾರಿ ನೌಕರಿಯಲ್ಲ. ಪತ್ರಕರ್ತನಾಗಬೇಕಾದರೆ ಒಂದು ಬದ್ದತೆ ಬೇಕು. ಎಲ್ಲವನ್ನೂ ಬೇಡವಾದ ಪತ್ರಕರ್ತನಾಗ್ತಾನೆ. ರಾತ್ರಿ ಯುಟ್ಯೂಬ್ ಚಾನಲ್ ಓಪನ್ ಮಾಡ್ತಾರೆ. ಬೆಳಗ್ಗೆ ಪತ್ರಕರ್ತ ಅನಕೊಂಡು ಫೀಲ್ಡ್‌ಗೆ ಬರುತ್ತಾರೆ. ಇಂತವರೆಲ್ಲ ದಂಧೆಗೊಸ್ಕರ ಪತ್ರಿಕೋದ್ಯಮವನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥವರು ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.
ಇಂತಹವರ ಸಂಖ್ಯೆ ಹೆಚ್ಚಾಗ್ತಿದೆ. ಒಬ್ಬ ಮೌಲ್ಯಯುತ ಪತ್ರಕರ್ತ ಒಂದು ಶಬ್ದವನ್ನ ಬಳಕೆ ಮಾಡಬೇಕಾದರೂ ಯೋಚನೆ ಮಾಡಿ ಬರೆಯುತ್ತಿದ್ದ. ಆದರೆ, ಈಗ ಎಲ್ಲ ನಿಬಂಧಗಳು ಮಾಯವಾಗಿವೆ. ಈ ಬಗ್ಗೆ ಸುಪ್ರಿಂಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ ಎಂದರು. ಶಾಸಕ ಬಸನಗೌಡ ತುರವಿಹಾಳ ಮಾತನಾಡಿ, ಮಸ್ಕಿಯ ಎಲ್ಲ ಪತ್ರಕರ್ತರು ಶ್ರಮವಹಿಸಿ ಒಂದು ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ.ಪತ್ರಕರ್ತರಿಗೆ ಸಮಾಜದಲ್ಲಿ ತಮ್ಮದೇ ಆದ ವಿಶೇಷ ಜವಾಬ್ದಾರಿ ಇದೆ. ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ, ಅತ್ಯಂತ ಮುಖ್ಯವಾಗಿ ಪತ್ರಕರ್ತರಿಗೆ ಸಂವೇದನಶೀಲತೆ ಇರಬೇಕಾಗಿರುವುದು ಮುಖ್ಯ. ಅಂತಹ ಪ್ರವೃತ್ತಿಯನ್ನು ಪ್ರತಿಯೊಬ್ಬ ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಮಾಧ್ಯಮಕ್ಕೆ ತನ್ನದೇ ಆದ ಸ್ಥಾನ-ಮಾನ, ಗೌರವವಿದೆ. ಇಂತಹ ರಂಗದಲ್ಲಿ ಕೆಲಸ ಮಾಡುವವರು ಅತ್ಯಂತ ಜವಾಬ್ದಾರಿದಾಯಕವಾಗಿ ಕೆಲಸ ಮಾಡಬೇಕು. ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಪತ್ರಕರ್ತರು ಹುಟ್ಟಿಕೊಂಡಿದ್ದಾರೆ. ಅಂಥವರಿಂದ ಮಾಧ್ಯಮದವರು ಅಂತರ ಕಾಪಾಡಿಕೊಳ್ಳಬೇಕು. ದೃಶ್ಯ ಮಾಧ್ಯಮಗಳು ಕೆಲವು ಬಾರಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸುದ್ದಿಗಳನ್ನು ವೈಭವೀಕರಿಸುತ್ತಿವೆ. ಇದರಿಂದ ಜನಸಾಮಾನ್ಯರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪತ್ರರ್ತರ ಸಂಘದ ಅಧ್ಯಕ್ಷ ಗುರುನಾಥ, ರಿಪೋಟರ್ ಗಿಲ್ಡ್‌ನ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿದರು. ಪತ್ರಕರ್ತ ವೀರೇಶ ಸೌದ್ರಿ ಮಾತನಾಡಿದರು. ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಪಾಷಾ ಹಟ್ಟಿ, ಮಸ್ಕಿ ತಾಲೂಕು ಅಧ್ಯಕ್ಷ ಪ್ರಕಾಶ ಮಸ್ಕಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಜೀಜ್ ಸೇರಿ ಇತರರು ಇದ್ದರು.