ಉಡುಪಿ: ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ನಮ್ಮ ವೃತ್ತಿಯಲ್ಲಿ ಕೂಡ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದು ಹೈಕೋರ್ಟ್ ನ್ಯಾಯಾಧೀಶ, ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ| ಮೂ| ಬಿ.ಎ. ಪಾಟೀಲ್ ಅಭಿಪ್ರಾಯಪಟ್ಟರು.
ಉಡುಪಿ ವಕೀಲರ ಸಂಘದ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ವಕೀಲರ ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆ “ಯಕ್ಷಕಲಾ ವೈಭವ-2019’ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಹೆಚ್ಚು ಚೈತನ್ಯದಿಂದ ಇರುತ್ತದೆ. ಇದು ನಮ್ಮ ಮೂಲವೃತ್ತಿಯನ್ನು ಕೂಡ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಪೂರಕವಾಗುತ್ತದೆ. ಉಡುಪಿ ವಕೀಲರ ಸಂಘ ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನವನ್ನು ಪ್ರತಿವರ್ಷ ಪ್ರದರ್ಶಿಸುತ್ತಾ ಬರುತ್ತಿರುವುದರ ಜತೆಗೆ ಈ ಬಾರಿ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ. ಇತರ ವಕೀಲರ ಸಂಘಗಳು ಕೂಡ ತಮ್ಮಲ್ಲಿನ ಕಲೆಯನ್ನು ಈ ರೀತಿ ಪ್ರಚುರಪಡಿಸುವ ಕೆಲಸ ಮಾಡಬೇಕು ಎಂದು ನ್ಯಾಯಾಧೀಶರು ಹೇಳಿದರು.
ಕೋರ್ಟ್‌ನಲ್ಲೂ ಕೃಷ್ಣಸಂಧಾನ!
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಮಾತನಾಡಿ, “ವಕೀಲರು ನಡೆಸುವ ಮಧ್ಯಸ್ಥಿಕೆ (ಮೀಡಿಯೇಷನ್) ಕೂಡ ಕೃಷ್ಣ ಸಂಧಾನವೇ. ಇದು ನ್ಯಾಯಾಲಯದಲ್ಲಿ ದಿನನಿತ್ಯ ನಡೆಯುತ್ತದೆ. ಆದರೆ ಭೀಷ್ಮ, ಕೃಷ್ಣರು ಏನು ಹೇಳಿದ್ದರು? ಎಂಬುದನ್ನು ನ್ಯಾಯಾಲಯದಲ್ಲಿ ನೇರವಾಗಿ ಪ್ರಚುರಪಡಿಸಲು ಸಾಧ್ಯವಿಲ್ಲ. ಇದಕ್ಕೆ ಇಂಥ ಚಟುವಟಿಕೆ ಬೇಕು. ಇಂಥ ಚಟುವಟಿಕೆಯಿಂದ ನಮ್ಮ ವೃತ್ತಿ ನೈಪುಣ್ಯತೆ ಮತ್ತಷ್ಟು ಮೊನಚಾಗುತ್ತದೆ’ ಎಂದು ಹೇಳಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲಾ ವೈಭವದ ಗೌರವಾಧ್ಯಕ್ಷ ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಕಲಾವೈಭವದ ಅಧ್ಯಕ್ಷ ವಿಜಯ ಹೆಗ್ಡೆ ಸ್ವಾಗತಿಸಿದರು. ವಿನಯ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.