ಹೊಸದಿಲ್ಲಿ: ಲೋಕಸಭಾ ಕಲಾಪದಲ್ಲಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ”ಈ ಸದನವು ರಾಜಕೀಯದಲ್ಲಿ 13 ಬಾರಿ ಲಾಂಚ್ ಮಾಡಲು ಯತ್ನಿಸಿ (ರಾಜಕೀಯ ವೃತ್ತಿ ಪ್ರಾರಂಭ) ಮತ್ತು ಎಲ್ಲಾ ಸಮಯದಲ್ಲೂ ವಿಫಲವಾದ ನಾಯಕನನ್ನು ಹೊಂದಿದೆ” ಎಂದು ಲೇವಡಿ ಮಾಡಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿ ”ಬುಂದೇಲಖಂಡದ ಬಡ ತಾಯಿ ಕಲಾವತಿಯನ್ನು ಭೇಟಿಯಾಗಲು ಹೋದಾಗ ಸಂಸತ್ತಿನಲ್ಲಿ ಲಾಂಚ್ ಮಾಡಲು ಯತ್ನಿಸಿದ್ದನ್ನು ನಾನು ನೋಡಿದ್ದೇನೆ, ಆದರೆ ಆಕೆಗಾಗಿ ನೀವೇನು ಮಾಡಿದ್ದೀರಿ? ಆಕೆಗೆ ಮನೆ, ಪಡಿತರ, ವಿದ್ಯುತ್, ಶೌಚಾಲಯ ಸೇರಿ ಎಲ್ಲವನ್ನು ಮೋದಿ ಸರ್ಕಾರ ಒದಗಿಸಿದೆ. ಯಾರಿಗೆ ವಿಶ್ವಾಸವಿರಲಿಲ್ಲವೋ ವರೂ ಈಗ ಮೋದಿ ಅವರನ್ನು ನಂಬುತ್ತಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದರು.
2008 ರಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಸತ್ತಿನಲ್ಲಿ ತಮ್ಮ ಕಷ್ಟವನ್ನು ವಿವರಿಸಿದ ನಂತರ ವಿಧವೆ ಕಲಾವತಿ ಖ್ಯಾತಿ ಗಳಿಸಿದ್ದರು.
“ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ನಡೆದಿವೆ ಎಂಬ ಪ್ರತಿಪಕ್ಷಗಳ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಮಣಿಪುರ ಹಿಂಸಾಚಾರವು ನಾಚಿಕೆಗೇಡಿನ ಸಂಗತಿಯಾಗಿದೆ, ಅದನ್ನು ರಾಜಕೀಯಗೊಳಿಸುವುದು ಇನ್ನೂ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಲೋಕಸಭೆಯಲ್ಲಿ ಅಮಿತ್ ಶಾ ಕಿಡಿ ಕಾರಿದರು.
ಮಣಿಪುರ ಈ ವಿಷಯದ ಬಗ್ಗೆ ಚರ್ಚೆಗೆ ಬಿಜೆಪಿ ಯಾವಾಗಲೂ ಸಿದ್ಧವಾಗಿದೆ. ಹಿಂಸಾಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಶಾ ಆರೋಪಿಸಿ “ಬೆಂಕಿಗೆ ಇಂಧನ ಹಾಕಬೇಡಿ” ಎಂದು ಪ್ರತಿಪಕ್ಷಗಳನ್ನು ಒತ್ತಾಯಿಸಿದರು.