Advertisement

ಕ್ವಾರಂಟೈನ್‌ ಕೇಂದ್ರದ ಹಾಸ್ಟೆಲ್‌ಗ‌ಳಲ್ಲಿ “ಕೇರ್‌ ಸೆಂಟರ್‌’

11:31 PM Jul 09, 2020 | Sriram |

ಮಹಾನಗರ: ಕೋವಿಡ್ ಆತಂಕದ ವೇಳೆಯಲ್ಲಿ ವಿದೇಶ ಹಾಗೂ ಹೊರರಾಜ್ಯಗಳಳಿಂದ ಬಂದವರಿಗೆ ಕ್ವಾರಂಟೈನ್‌ಗಾಗಿ ಸಿದ್ಧಪಡಿಸಲಾಗಿರುವ ವಿದ್ಯಾರ್ಥಿಗಳ ಸರಕಾರಿ ಹಾಸ್ಟೆಲ್‌ಗ‌ಳನ್ನು ಇದೀಗ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಲಾಗಿದೆ. ಸೋಂಕು ಲಕ್ಷಣ ಇಲ್ಲದ ರೋಗಿಗಳಿಗೆ ಈ ಹಾಸ್ಟೆಲ್‌ಗ‌ಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಕೋವಿಡ್ ಪ್ರಕರಣಗಳ ಸಂಖ್ಯೆ ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೆನ್ಲಾಕ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮುಂದೆ ಬೆಡ್‌ಗಳ ಸಂಖ್ಯೆ ಕೊರತೆ ಆಗಬಾರದೆಂಬ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗ‌ಳನ್ನು ಕೋವಿಡ್‌ ಕೇರ್‌ ಸೆಂಟರ್‌ ರೂಪದಲ್ಲಿ ಬದಲಾಯಿಸಲಾಗಿದೆ.

ರೋಗಲಕ್ಷಣ ಇಲ್ಲದೆಯೇ ಕೋವಿಡ್ ಪೀಡಿತರು ವ್ಯಾಪಕವಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅಂಥವರ ಚಿಕಿತ್ಸೆಗೆ ದ.ಕ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳನ್ನು ಕೇರ್‌ ಸೆಂಟರ್‌ಗಳಾಗಿ ಬಳಕೆಗೆ ಸಿದ್ಧಪಡಿಸಲಾಗಿದೆ. ಇಲ್ಲಿಯವರೆಗೆ ಈ ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆಯಲಾಗಿತ್ತು.

104 ಹಾಸ್ಟೆಲ್‌ಗ‌ಳು
ದ.ಕ. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದ ಒಟ್ಟು 104 ಹಾಸ್ಟೆಲ್‌ಗ‌ಳಿದ್ದು, ಮೆಟ್ರಿಕ್‌ ಪೂರ್ವ ಹಾಗೂ ಅನಂತರದ 28, ಬ್ಯಾಚುಲರ್ಸ್‌ ಹಂತದ 74, ಗಿರಿಜನ ಇಲಾಖೆಯ 12 ಹಾಸ್ಟೆಲ್‌ಗ‌ಳಿವೆ. ಈ ಪೈಕಿ ಕೆಲವು ಹಾಸ್ಟೆಲ್‌ಗ‌ಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ಉಳಿದ ಹಾಸ್ಟೆಲ್‌ಗ‌ಳಿಗೆ ಚಿಕಿತ್ಸೆಗೆ ಬೇಕಾದ ಬೆಡ್‌ ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಸಿದ್ಧಪಡಿಸಲಾಗುತ್ತಿದೆ. ಮೊದಲು 1 ಸಾವಿರ ಬೆಡ್‌ಗಳನ್ನು ಹಾಕಲಾಗಿದ್ದು, ಈಗ ಅದನ್ನು ಹೆಚ್ಚಿಸಲಾಗಿದೆ.

10 ದಿನ ಚಿಕಿತ್ಸೆ
ಈಗಾಗಲೇ ಕೊಣಾಜೆ, ಕೆಪಿಟಿ ಹಾಗೂ ನೆಲ್ಲಿತೀರ್ಥಗಳಲ್ಲಿರುವ ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಲಕ್ಷಣ ಇಲ್ಲದ ಸೋಂಕಿತರಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಕೋವಿಡ್‌ ಲಕ್ಷಣ ಇಲ್ಲದವರಿಗೆ ಇಲ್ಲಿ ಸಾಧಾರಣ ಚಿಕಿತ್ಸೆ ಸಾಕಾಗುತ್ತದೆ. ಈ ವಾರ್ಡ್‌ಗಳಲ್ಲಿ ಕನಿಷ್ಠ 10 ದಿನ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸರಕಾರದ ವೆಚ್ಚದಲ್ಲಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ಹಾಗೂ ದಾದಿಯರನ್ನು ಇಲ್ಲಿ ನಿಯಮಿತವಾಗಿ ಇರುತ್ತಾರೆ. ಗುಣಮುಖ ಹೊಂದಿದ ಬಳಿಕ ಮನೆಯಲ್ಲಿ 17 ದಿನಗಳ ಕ್ವಾರಂಟೈನ್‌ ಕಡ್ಡಾಯ ನಿಯಮ ಪಾಲಿಸಬೇಕು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Advertisement

 ”ಹಾಸ್ಟೆಲ್‌ಗೆ ಕೇರ್‌ ಸೆಂಟರ್‌ ಸ್ವರೂಪ’
ಕ್ವಾರಂಟೈನ್‌ ಕೇಂದ್ರಗಳಾಗಿ ಬಳಕೆಯಾಗಿದ್ದ ವಿದ್ಯಾರ್ಥಿ ಹಾಸ್ಟೆಲ್‌ಗ‌ಳನ್ನು ಇದೀಗ ಕೋವಿಡ್‌ ಕೇರ್‌ ಸೆಂಟರ್‌ ಮಾದರಿಯಲ್ಲಿ ಪರಿವರ್ತಿಸಲಾಗಿದೆ. ಸೋಂಕು ಲಕ್ಷಣ ಇಲ್ಲದ ಕೊರೊನಾ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಈ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಹಾಸ್ಟೆಲ್‌ಗ‌ಳನ್ನು ಕೇರ್‌ ಸೆಂಟರ್‌ ಸ್ವರೂಪದಲ್ಲಿ ಪರಿವರ್ತಿಸಲಾಗುವುದು.
-ಎಂ.ಜೆ. ರೂಪಾ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next