Advertisement
ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಚಿಪ್ ಅಳವಡಿಸಲಾಗಿದೆ. ಅದರಲ್ಲಿ ವಿದ್ಯಾರ್ಥಿಗಳ ತರಗತಿ, ಪಾಸು ವಿತರಣೆಯಾದ ದಿನ ಮತ್ತು ಪೂರ್ಣಗೊಳ್ಳುವ ದಿನಾಂಕ, ಸಂಚರಿಸುವ ಮಾರ್ಗ (ಎಲ್ಲಿಂದ-ಎಲ್ಲಿಗೆ)ದ ವಿವರವೆಲ್ಲವೂ ಇರುತ್ತದೆ. ಆದರೆ, ಆ “ಚಿಪ್’ ಅನ್ನು ರೀಡ್ ಮಾಡುವ ಯಂತ್ರಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡಬಹುದು. ಅಷ್ಟೇ ಅಲ್ಲ, ನಕಲಿ ಕಾರ್ಡ್‌ಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದೆ.
Related Articles
Advertisement
ಅದೇನೇ ಇರಲಿ, ಇತ್ತೀಚೆಗಷ್ಟೇ ಸ್ಮಾರ್ಟ್ ಕಾರ್ಡ್‌ಗಳನ್ನು ನವೀಕರಿಸಲಾಗಿದ್ದು, ಅದರಲ್ಲಿ ರದ್ದಾಗಿರುವುದು, ಸ್ಥಗಿತಗೊಂಡಿರುವುದು, ಅವಧಿ ಮುಗಿದವುಗಳನ್ನು ತೆಗೆದುಹಾಕಲಾಗಿದೆ. ಅಷ್ಟಕ್ಕೂ ಸಾಮಾನ್ಯವಾಗಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಂದ ಈ ದುರ್ಬಳಕೆ ತುಂಬಾ ಕಡಿಮೆ. ಬೆಳಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲೇ ಇರುತ್ತಾರೆ. ಆದರೆ, ಕಾಲೇಜುಗಳು ಮಧ್ಯಾಹ್ನದ ಹೊತ್ತಿಗೇ ಮುಗಿಯುವುದರಿಂದ ಅಂತಹ ಕಡೆ ದುರ್ಬಳಕೆ ಸಾಧ್ಯತೆ ಹೆಚ್ಚು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ನಕಲಿ ಹಾವಳಿ ಎಲ್ಲಿ?: ಹೊಸ ಸ್ಮಾರ್ಟ್ ಕಾರ್ಡ್‌ಗಳಿಗೆ 200 ರೂ. ಸೇವಾ ಶುಲ್ಕ ಪಡೆಯಲಾಗುತ್ತಿದೆ. ಇದರೊಂದಿಗೆ ಪಾಸಿನ ಶುಲ್ಕ ಕೂಡ ಆಯಾ ತರಗತಿಗೆ ತಕ್ಕಂತೆ ಇರುತ್ತದೆ. ಆದರೆ, ದಾಸರಹಳ್ಳಿ, ಯಶವಂತಪುರ, ಪೀಣ್ಯ ಮತ್ತಿತರ ಕಡೆಗಳಲ್ಲಿರುವ ಸೈಬರ್ ಸೆಂಟರ್‌ನಂತಹ ಮಳಿಗೆಗಳಲ್ಲಿ ಈ ನಕಲಿ ಕಾರ್ಡ್‌ಗಳ ಹಾವಳಿ ಕಂಡುಬರುತ್ತಿದೆ. ಕೇವಲ 80-100 ರೂ.ಗಳಿಗೆ ಲಭ್ಯವಾಗುತ್ತಿವೆ ಎಂಬ ದೂರುಗಳು ಬಿಎಂಟಿಸಿ ಘಟಕಗಳಿಗೆ ಬರುತ್ತಿವೆ.
ಇಟಿಎಂಗಳ ಅಲಭ್ಯತೆ; ಲಾಭ-ನಷ್ಟ: ಇಟಿಎಂಗಳ ಅಲಭ್ಯತೆಯು ಕೆಲ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದರೆ, ಇನ್ನು ಹಲವರಿಗೆ ಜೇಬು ತುಂಬಿಸಲು ದಾರಿ ಮಾಡಿಕೊಟ್ಟಿವೆ. ಹೌದು, ಇಟಿಎಂಗಳಿಂದ ಟಿಕೆಟ್ ವಿತರಣೆ ತ್ವರಿತವಾಗಿ ಆಗುತ್ತಿತ್ತು. “ಪೀಕ್ ಅವರ್’ನಲ್ಲಿ ಬಸ್‌ಗಳು ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದರೂ ಒಂದು ನಿಲ್ದಾಣದಿಂದ ಮತ್ತೂಂದು ನಿಲ್ದಾಣ ಬರುವಷ್ಟರಲ್ಲಿ ಟಿಕೆಟ್ ಹಂಚಿಕೆ ಕಾರ್ಯ ಮುಗಿಯುತ್ತಿತ್ತು.
ಈ ಡಿಜಿಟಲ್ ವ್ಯವಸ್ಥೆಯಲ್ಲಿ ವಂಚನೆಗೆ ಅವಕಾಶವೂ ಇರಲಿಲ್ಲ. ಆದರೆ, ಈಗ ಮ್ಯಾನ್ಯುವಲ್ ಆಗಿ ವಿತರಣೆ ಮಾಡುವುದು ಕಿರಿಕಿರಿ ಆಗಿದೆ. ಕೆಲವರಿಗೆ ಟಿಕೆಟ್ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಚೆಕಿಂಗ್ ಇನ್‌ಸ್ಪೆಕ್ಟರ್ ಕೆಂಗಣ್ಣಿಗೂ ಗುರಿಯಾಗಬೇಕಾಗಿದೆ. ಇದೇ ಭಯಕ್ಕೆ ಹೆಚ್ಚು ದಟ್ಟಣೆ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿಕ್ಕೂ ಹಿಂದೇಟು ಹಾಕಲಾಗುತ್ತಿದೆ ಎಂದು ಸ್ವತಃ ನಿರ್ವಾಹಕರು ಅಲವತ್ತುಕೊಂಡರು.
ಈ ಮಧ್ಯೆ ಮತ್ತೂಂದೆಡೆ ಟಿಕೆಟ್ ಮರುಹಂಚಿಕೆಗೂ ಅನುವುಮಾಡಿಕೊಟ್ಟಂತಾಗಿದೆ. ಅಂದರೆ ನಿರ್ವಾಹಕ, ಸಾಮಾನ್ಯವಾಗಿ ಟಿಕೆಟ್ ವಿತರಣೆ ಮಾಡಿದ ನಂತರ ಪ್ರಯಾಣಿಕರಿಗೆ ಬಾಕಿ ನೀಡಬೇಕಾದ ಚಿಲ್ಲರೆ ಮೊತ್ತವನ್ನು ಅದೇ ಟಿಕೆಟ್ ಹಿಂದೆ ಬರೆಯುತ್ತಾನೆ. ತದನಂತರ ಪ್ರಯಾಣಿಕ ಇಳಿಯುವಾಗ ಆ ಟಿಕೆಟ್ ಪಡೆದು, ಚಿಲ್ಲರೆ ನೀಡುತ್ತಾನೆ. ಅದೇ ಟಿಕೆಟ್ ಅನ್ನು ಮತ್ತೂಬ್ಬ ಪ್ರಯಾಣಿಕನಿಗೆ ವಿತರಿಸುತ್ತಾನೆ. ಇದು ಕೂಡ ಆದಾಯ ಸೋರಿಕೆಗೆ ಕಾರಣವಾಗುತ್ತಿದೆ. ಯಾಕೆಂದರೆ ಈ ಮಾದರಿಯ ಟಿಕೆಟ್‌ನಲ್ಲಿ ಸಮಯ, ಮಾರ್ಗ ಮತ್ತಿತರ ಮಾಹಿತಿ ಇರುವುದೇ ಇಲ್ಲ.
ಸ್ಮಾರ್ಟ್ ಕಾರ್ಡ್‌ಗಳಲ್ಲಿರುವ ಚಿಪ್ ರೀಡ್ ಮಾಡುವ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದ್ದು, ಒಂದೆರಡು ತಿಂಗಳಲ್ಲಿ ಇಟಿಎಂಗಳು ಮತ್ತು ಅವುಗಳಲ್ಲಿ ಈ ನೂತನ ಅಪ್ಲಿಕೇಷನ್‌ಗಳ ವ್ಯವಸ್ಥೆ ಬರಲಿದೆ. ಅಷ್ಟೊತ್ತಿಗೆ ಎಲ್ಲ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಪ್ರಕ್ರಿಯೆಯೂ ಮುಗಿದಿರುತ್ತದೆ. ಹಾಗಾಗಿ, ಸಮಸ್ಯೆ ಅಷ್ಟಾಗಿ ಆಗದು. -ಎನ್.ವಿ.ಪ್ರಸಾದ್, ಬಿಎಂಟಿಸಿ ಎಂ.ಡಿ * ವಿಜಯಕುಮಾರ್ ಚಂದರಗಿ