ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಮೊನ್ನೆ ಮೊನ್ನೆಯವರಿಗೂ ಅಮೆರಿಕಾ ಮೂಲದ ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳೇ ದರ್ಬಾರು ನಡೆಸಿದ್ದವು. ಈಗ ಅವುಗಳ ಪ್ರಾಬಲ್ಯಕ್ಕೆ ದೇಶೀ ಮೂಲದ ರುಪೇ ಕಾರ್ಡ್ ಸಡ್ಡು ಹೊಡೆದಿದೆ. ಅಮೆರಿಕದ ದೈತ್ಯ ಕಂಪನಿಗಳನ್ನೇ ನಡುಗಿಸುವ ಮಟ್ಟಕ್ಕೆ ರುಪೇ ಕಾರ್ಡ್ ಬೆಳೆದಿದ್ದು ಹೇಗೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ…
ಹತ್ತು ವರ್ಷಗಳ ಹಿಂದೆ ಎಲ್ಲೆಲ್ಲೂ ಕ್ರೆಡಿಟ್ ಕಾರ್ಡ್‌ಗಳದ್ದೇ ಹಾವಳಿ! ಆಗಷ್ಟೇ ಎಟಿಎಂ ಕಾರ್ಡ್ ಎಂಬ ಮಾಯೆ ನೋಟುಗಳ ಬದಲಿಗೆ ನಮ್ಮ ಜೇಬಿಗೆ ಬಂದು ಕೂತಿತ್ತು. ಖಾತೆಯಲ್ಲಿ ಕಾಸು ಇರಲಿ, ಇಲ್ಲದಿರಲಿ, ಇವುಗಳನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವುದೇ ಒಂದು ಹೆಮ್ಮೆ. ಅದರಲ್ಲೂ ಕೆಲವು ಬ್ಯಾಂಕ್‌ಗಳ ಕಾರ್ಡ್‌ಗಳೆಂದರೆ ತಲೆ ಮೇಲೆ ಕೊಂಬು ಬಂದಂತೆ! ಆರಂಭದಲ್ಲಿ ನಾವೆಲ್ಲರೂ ಈ ಕಾರ್ಡ್‌ಗಳನ್ನು ನೇರವಾಗಿ ಬ್ಯಾಂಕ್ ನಿಭಾಯಿಸುತ್ತದೆ ಎಂದೇ ನಂಬಿದ್ದೆವು. ಅದೆಷ್ಟರ ಮಟ್ಟಿಗೆ ಎಂದರೆ, ಕೆಲವರಂತೂ ಬ್ಯಾಂಕಿನ ಶಾಖೆಗೆ ಹೋಗಿ ಎಟಿಎಂ ಕೆಲಸ ಮಾಡದೇ ಇದ್ದಾಗ ಜಗಳವಾಡಿದವರಿದ್ದಾರೆ. ಆದರೆ ಎಟಿಎಂ ನೆಟ್‌ವರ್ಕ್ ವ್ಯಾಪಿಸುತ್ತ ಹೋದಂತೆ ನಮಗೆ ಎಟಿಎಂ ಎಂಬ ದೊಡ್ಡ ವ್ಯವಸ್ಥೆಯ ಹಿಂದೆ ಬೃಹತ್ ವ್ಯಾಪಾರವೇ ಇದೆ ಎಂಬುದು ತಿಳಿದು ಬಂತು.
ನಮಗೆ ಕೊಡುವ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೇಲೆ ವೀಸಾ ಅಥವಾ ಮಾಸ್ಟರ್ ಕಾರ್ಡ್ ಎಂದು ನಮೂದಾಗಿರುತ್ತದೆ. ಇತ್ತೀಚೆಗೆ ರುಪೇ ಕಾರ್ಡ್ ಎಂಬ ಹೆಸರೂ ಕಾಣಿಸುತ್ತಿದೆ. ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳು ವಿದೇಶಿ ಕಂಪನಿಗಳಾದರೆ, ರುಪೇ ಎಂಬುದು ಭಾರತದ್ದು. ನಮಗೆ ನಮ್ಮ ಬ್ಯಾಂಕ್‌ನ ಸರ್ವರ್‌ನಿಂದ ಇತರ ಬ್ಯಾಂಕ್‌ಗಳ ಎಟಿಎಂವರೆಗೆ ಸಂಪರ್ಕ ಕಲ್ಪಿಸುವುದೇ ಈ ಕಾರ್ಡ್‌ಗಳು! ಇವು ಈ ವ್ಯವಹಾರ ನಡೆಸುವುದಕ್ಕಾಗಿ ಬ್ಯಾಂಕ್‌ನಿಂದ ಭರ್ಜರಿ ಕಮಿಷನ್ ಪಡೆಯುತ್ತವೆ.
ಐದಾರು ವರ್ಷಗಳ ಹಿಂದೆ ಎಲ್ಲೆಲ್ಲೂ ವೀಸಾ ಮತ್ತು ಮಾಸ್ಟರ್ ಕಾರ್ಡ್‌ನದ್ದೇ ದರ್ಬಾರು. ಯಾಕೆಂದರೆ, ಯಾವ ದೇಶಿ ಕಂಪನಿಗಳೂ ಭಾರತದಲ್ಲಿ ಇರಲಿಲ್ಲ. ನಾವು ಮಾಡುವ ಪ್ರತಿ ವಹಿವಾಟಿನಲ್ಲೂ ಶೇ. 1 ರಿಂದ ಶೇ. 2 ರಷ್ಟು ಶುಲ್ಕವನ್ನು ಈ ಕಂಪನಿಗಳು ಮುರಿದುಕೊಳ್ಳುತ್ತಿದ್ದವು. ಕೆಲವು ವರ್ಷಗಳ ಹಿಂದೆ ಈ ಏಕಸ್ವಾಮ್ಯವನ್ನು ನಿಲ್ಲಿಸಬೇಕು ಎಂಬ ಕಾರಣಕ್ಕೆ ಭಾರತದ್ದೇ ಆದ ರುಪೇ ಕಾರ್ಡ್ ಹುಟ್ಟಿಕೊಂಡಿತು. ಇದು ಸರ್ಕಾರಿ ಸ್ವಾಮ್ಯದ ಕಂಪನಿಯ ಕಾರ್ಡ್. ಅಂದರೆ ಹಣಕಾಸು ಸಚಿವಾಲಯವು ಎನ್‌ಪಿಸಿಐ ಅಂದರೆ ರಾಷ್ಟ್ರೀಯ ಪಾವತಿ ಕಾರ್ಪೊರೇಶನ್ ಅನ್ನು ಸ್ಥಾಪಿಸಿ, ಅದರ ಅಡಿಯಲ್ಲಿ ಈ ಕಾರ್ಡ್ ಪರಿಚಯಿಸಿತು. ಹೇಗೂ ಸರ್ಕಾರದ ಕಪಿಮುಷ್ಠಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳು ಹೊಸ ಖಾತೆ ತೆರೆಯುವಾಗ ವೀಸಾ, ಮಾಸ್ಟರ್ ಕಾರ್ಡ್ ಬಿಟ್ಟು ರುಪೇ ಕಾರ್ಡ್ ನೀಡಿದರೆ ಸಾಕು. ರುಪೇ ಕಾರ್ಡ್ ಉಳಿದುಕೊಳ್ಳುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈ ಕಾರ್ಡ್ ಮಾಡಬಹುದಾದ ಬೃಹತ್ ಪರಿಣಾಮವನ್ನು ಆಗ ಯಾರೂ ನಿರೀಕ್ಷಿಸಿರಲಿಲ್ಲ.
Related Articles
ಕೆಲವೇ ದಿನಗಳ ಹಿಂದೆ ವೀಸಾ ಮತ್ತು ಮಾಸ್ಟರ್ ಕಾರ್ಡ್ ಕಂಪನಿಗಳೆರಡೂ ಅಮೆರಿಕದ ಶ್ವೇತಭವನಕ್ಕೆ ಹೋಗಿ ದೂರು ಕೊಟ್ಟು, ಭಾರತದಲ್ಲಿ ರುಪೇ ಕಾರ್ಡ್ ಅನ್ನೇ ಸರ್ಕಾರ ಪ್ರಚಾರ ಮಾಡುತ್ತಿದೆ. ರುಪೇ ಕಾರ್ಡ್‌ಗೆ ದೇಶಭಕ್ತಿ, ದೇಶಪ್ರೇಮವನ್ನು ಅಂಟಿಸಲಾಗಿದೆ. ಇದು ನಮಗೆ ಭಾರಿ ಹಿನ್ನಡೆ ಉಂಟು ಮಾಡುತ್ತಿದೆ ಎಂದು ಅಲವತ್ತುಕೊಂಡವು. ಅಲ್ಲಿಯವರೆಗೂ ಭಾರತೀಯರಿಗೇ ಈ ರುಪೇ ಕಾರ್ಡ್ ಇಡುತ್ತಿರುವ ದಾಪುಗಾಲಿನ ಮಹತ್ವ ತಿಳಿದಿರಲಿಲ್ಲ. ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳು ಜಗತ್ತಿನ ಎಲ್ಲೆಡೆ ಪಸರಿಸಿವೆ. ಈ ಕಾರ್ಡ್ ತೆಗೆದುಕೊಂಡು ಯಾವ ದೇಶದ ಪಿಒಎಸ್‌ನಲ್ಲಿ ಉಜ್ಜಿದರೂ ಖರೀದಿ ಮಾಡಿಕೊಂಡು ಬರಬಹುದು. ಅದ್ಭುತ ಟೆಕ್ನಾಲಜಿ ಹಾಗೂ ವ್ಯಾಪಕ ನೆಟ್‌ವರ್ಕ್ ಹೊಂದಿರುವ ಈ ಕಂಪನಿಗಳಿಗೆ ನಮ್ಮ ಭಾರತದ, ಅದರಲ್ಲೂ ಸರ್ಕಾರಿ ಸ್ವಾಮ್ಯದ ರುಪೇ ಕಾರ್ಡ್ ಹೇಗೆ ನಿದ್ದೆಗೆಡಿಸಿತು ಎಂಬುದೇ ಅಚ್ಚರಿ ಹಾಗೂ ಕುತೂಹಲದ ಸಂಗತಿ.
2015ರಲ್ಲಿ ದೆಹಲಿಯಲ್ಲಿ ಒಂದು ಆರ್ಥಿಕ ಸಮ್ಮೇಳನ ನಡೆದಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಕಾರ್ಡ್ ಮಾರುಕಟ್ಟೆಯಲ್ಲಿ ಎರಡೇ ಕಂಪನಿಗಳು ಪ್ರಾಬಲ್ಯ ಹೊಂದಿವೆ. ಅದನ್ನು ತಪ್ಪಿಸಲು ಭಾರತದ ರುಪೇ ಕಾರ್ಡ್‌ಗೆ ನಾವು ಆದ್ಯತೆ ನೀಡಬೇಕಿದೆ ಎಂದಿದ್ದರು. ಇದಕ್ಕೂ ಮೊದಲೇ 2014 ರಲ್ಲಿ ಜನಧನ್ ಯೋಜನೆಯನ್ನು ಪರಿಚಯಿಸಿದಾಗ, ಈ ಯೋಜನೆ ಅಡಿಯಲ್ಲಿ ತೆರೆಯುವ ಎಲ್ಲ ಬ್ಯಾಂಕ್ ಖಾತೆಗಳಿಗೂ ರುಪೇ ಕಾರ್ಡನ್ನೇ ನೀಡಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಲಾಗಿತ್ತು. ಇದು ರುಪೇ ಕಾರ್ಡ್‌ನ ಮೊದಲ ನಿಜವಾದ ಯಶಸ್ಸು. ಯೋಜನೆ ಘೋಷಣೆಯಾದ ಒಂದು ವಾರದಲ್ಲೇ ಸುಮಾರು 1.80 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ಇಷ್ಟೂ ಬ್ಯಾಂಕ್ ಖಾತೆಗಳಿಗೆ ರುಪೇ ಕಾರ್ಡನ್ನೇ ನೀಡಲಾಗಿತ್ತು. ಅಂದಿನಿಂದ ರುಪೇ ಕಾರ್ಡ್ ಜನಪ್ರಿಯತೆಯನ್ನೂ ಗಳಿಸಿತು. ಎಲ್ಲ ಬ್ಯಾಂಕ್‌ಗಳ ಪಿಒಎಸ್‌ಗಳಲ್ಲಿ ಈ ಕಾರ್ಡ್ ಬಳಕೆಯೂ ಚಾಲ್ತಿಗೆ ಬಂತು.
ಸದ್ಯ ಭಾರತದಲ್ಲಿ 92.5 ಕೋಟಿ ಕಾರ್ಡ್‌ಗಳಿವೆ. ಈ ಪೈಕಿ 50 ಕೋಟಿ ರುಪೇ ಕಾರ್ಡ್‌ಗಳಿವೆ! ನಿಜ. ಬರಿ ಆರೇ ವರ್ಷದಲ್ಲಿ ಕಾರ್ಡ್‌ಗಳಿಗೆ ಎನ್‌ಪಿಸಿಐ ಸೇವೆ ಒದಗಿಸುತ್ತಿದೆ. ಸುಮಾರು 1100 ಬ್ಯಾಂಕ್‌ಗಳು ಈಗ ರುಪೇ ಸೇವೆಯನ್ನು ಬಳಸಿಕೊಳ್ಳುತ್ತಿವೆ. 2013ರಲ್ಲಿ ರುಪೇ ಮಾರುಕಟ್ಟೆ ಪಾಲು ಕೇವಲ ಶೇ. 0.6 ಆಗಿತ್ತು. ಈ ಐದು ವರ್ಷದಲ್ಲಿ ರುಪೇ ಕಾರ್ಡ್ ಅಗಾಧವಾಗಿ ಬೆಳೆದು ನಿಂತಿದೆ.
ಪಾಯಿಂಟ್ ಆಫ್ ಸೇಲ್ ಚುರುಕು: ಆರಂಭದಲ್ಲಿ ಕಾರ್ಡ್ ಬಳಕೆ ಎಟಿಎಂನಲ್ಲಷ್ಟೇ ಆಗಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾರ್ಡ್‌ಅನ್ನು ಎಟಿಎಂಗಿಂತ ಹೆಚ್ಚಾಗಿ ಪಾಯಿಂಟ್ ಆಫ್ ಸೇಲ್‌ನಲ್ಲಿ ಬಳಸುತ್ತೇವೆ. ಅಂದರೆ ಪೆಟ್ರೋಲ್ ಹಾಕಿಸುವಾಗ, ಶಾಪಿಂಗ್ ಮಾಡುವಾಗ ನಾವು ಕಾರ್ಡ್‌ಗಳನ್ನು ಪಿಒಎಸ್ ಮಶಿನ್‌ಗಳಲ್ಲಿ ಸ್ವೆ„ಪ್ ಮಾಡಿ ಹಣ ಪಾವತಿ ಮಾಡುತ್ತೇವೆ. ರುಪೇ ಕಾರ್ಡ್ ಇಲ್ಲೂ ಯಶಸ್ಸು ಸಾಧಿಸಿದೆ. 2017-18 ರಲ್ಲಿ 45.9 ಕೊಟಿ ವಹಿವಾಟುಗಳನ್ನು ಮಾಡಿದೆ. ಅಷ್ಟೇ ಅಲ್ಲ, 2017-18ರ ವಿತ್ತ ವರ್ಷದಲ್ಲಿ ರುಪೇ ಕಾರ್ಡ್ ಒಟ್ಟು 16,600 ಕೋಟಿ ರೂ. ವಹಿವಾಟು ಮಾಡಿದೆ. ಅದಕ್ಕೂ ಹಿಂದಿನ ವರ್ಷ ಇದೇ ಕಾರ್ಡ್‌ನ ವಹಿವಾಟು ಬರಿ 5934 ಕೋಟಿ ರೂ. ಇತ್ತು. ಅಂದರೆ ಒಂದು ವರ್ಷದಲ್ಲಿ ಶೇ. 180 ರಷ್ಟು ಹೆಚ್ಚಳ! ಇದೇ ವಿಚಾರ ವೀಸಾ ಹಾಗೂ ಮಾಸ್ಟರ್ ಕಾರ್ಡ್‌ಗೆ ಈಗ ತಲೆ ಕೆಡಿಸಿದೆ.
ಸವಾಲೂ ಇದೆ!
ರುಪೇ ಕಾರ್ಡ್ ಮುಂದಿರುವ ದೊಡ್ಡ ಸವಾಲೆಂದರೆ ನಗರದ ಗ್ರಾಹಕರನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಬುಟ್ಟಿಗೆ ಹಾಕಿಕೊಳ್ಳುವುದು. ಜನ ಧನ ಖಾತೆಯ ಅಡಿಯಲ್ಲಿ ನೀಡಿದ ಬಹುತೇಕ ಖಾತೆಗಳ ಮೂಲಕ ವಹಿವಾಟು ನಡೆಯುತ್ತಿಲ್ಲ. ಅಷ್ಟೇ ಅಲ್ಲ, ಅವು ಗ್ರಾಮೀಣ ಪ್ರದೇಶಗಳಲ್ಲಿವೆ. ಇವರ ಆದಾಯ ಮತ್ತು ವಹಿವಾಟು ಕಡಿಮೆಯಾದ್ದರಿಂದ ರುಪೇ ಕಾರ್ಡ್ ಬಳಕೆ ಮಾಡುವುದೂ ಕಡಿಮೆ. ಆದರೆ ನಗರದಲ್ಲಿ ರುಪೇ ಕಾರ್ಡ್ ವಿಸ್ತರಣೆ ಮಾಡಲು ಇರುವ ದೊಡ್ಡ ಸಮಸ್ಯೆಯೆಂದರೆ ರುಪೇಗೆ ಅಂತಾರಾಷ್ಟ್ರೀಯ ವಲಯದಲ್ಲಿ ಇನ್ನೂ ಉತ್ತಮ ಮಟ್ಟದಲ್ಲಿ ಮಾನ್ಯತೆ ಸಿಗದೇ ಇರುವುದು. ಎಲ್ಲ ದೇಶಗಳಲ್ಲೂ ರುಪೇ ಕಾರ್ಡ್ ಬಳಸಿ ವಹಿವಾಟು ನಡೆಸಲು ಸಾಧ್ಯವಿಲ್ಲ. ಕೆಲವೇ ದೇಶಗಳಲ್ಲಿ ಎನ್‌ಪಿಸಿಐ ತನ್ನ ಜಾಲವನ್ನು ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಇನ್ನೂ ವೀಸಾ ಹಾಗೂ ಮಾಸ್ಟರ್ ಕಾರ್ಡ್‌ಗಳೇ ಮುಂಚೂಣಿಯಲ್ಲಿವೆ. ಈ ಸವಾಲುಗಳನ್ನು ಎದುರಿಸಿದರೆ ವೀಸಾ ಮತ್ತು ಮಾಸ್ಟರ್ ಕಾರ್ಡ್‌ಗಳನ್ನು ಸುಲಭದಲ್ಲಿ ಮಟ್ಟಹಾಕಬಹುದು.
ಶುರುವಾಗಿದ್ದು ಹೇಗೆ?
ರುಪೇ ಕಾರ್ಡ್ ಎಂಬ ಕಲ್ಪನೆ ಹುಟ್ಟಿಕೊಂಡಿದ್ದೇ 2009ರಲ್ಲಿ. ಆಗ ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಲಾಭೋದ್ದೇಶವಿಲ್ಲದ ಕಂಪನಿಯೊಂದನ್ನು ಸ್ಥಾಪಿಸಿ ಕಾರ್ಡ್ ಸೇವೆಯನ್ನು ಒದಗಿಸಬೇಕು ಎಂದು ಆರ್‌ಬಿಐ ಸೂಚನೆ ನೀಡಿತ್ತು. ವಿದೇಶಿ ಕಾರ್ಡ್ ವ್ಯವಸ್ಥೆಗೆ ಪೈಪೋಟಿ ನೀಡಲು ಇಂಥದ್ದೊಂದು ವ್ಯವಸ್ಥೆ ಬೇಕು ಎಂಬುದು ಆರ್‌ಬಿಐ ವಾದವಾಗಿತ್ತು. ಈ ಸೂಚನೆಯೇ ರುಪೇ ಕಾರ್ಡ್ ಹುಟ್ಟಿಕೊಳ್ಳಲು ಮೂಲ ಪ್ರೇರಣೆಯಾಯಿತು. 2012ರಲ್ಲಿ ಕಾರ್ಡ್ ಅಸ್ತಿತ್ವಕ್ಕೆ ಬಂತು. ಆದರೆ ಮುಂದಿನ ಎರಡು ವರ್ಷಗಳವರೆಗೆ ಈ ಕಾರ್ಡ್ ಅಷ್ಟೇನೂ ಹೆಸರಾಗಿರಲಿಲ್ಲ. ಅಷ್ಟೇ ಅಲ್ಲ, ಈ ಕಾರ್ಡ್ ಬಗ್ಗೆ ಬ್ಯಾಂಕುಗಳೇ ಹೆಚ್ಚಿನ ಆಸಕ್ತಿಯನ್ನೂ ತೋರಿರಲಿಲ್ಲ. ಆದರೆ 2014ರಲ್ಲಿ ಪ್ರಧಾನಿ ಮೋದಿ ಜನಧನ್ ಯೋಜನೆಯನ್ನು ಘೋಷಿಸಿದಾಗ, ರುಪೇ ಕಾರ್ಡ್‌ಗೆ ನಿಜವಾದ ಜೀವ ಬಂತು. ಇದಾದ ನಂತರ ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಒತ್ತು ನೀಡಿದ್ದಂತೂ ಎಲ್ಲ ಕಾರ್ಡ್‌ಗಳಿಗೂ ಇನ್ನಷ್ಟು ಪ್ರೋತ್ಸಾಹ ನೀಡಿತು.
ಇದು ಕಮಿಷನ್ ದಂಧೆ!
ಕಾರ್ಡ್ ಸೇವೆ ಒದಗಿಸುವುದು ಒಂದು ಬಹುದೊಡ್ಡ ಕಮಿಷನ್ ವ್ಯವಹಾರ ಎಂದರೆ ನೀವು ನಂಬಲೇ ಬೇಕು. ವೀಸಾ ಹಾಗೂ ಮಾಸ್ಟರ್ ಕಾರ್ಡ್‌ಗಳು ನಾವು ನಡೆಸುವ ವಹಿವಾಟು ಮೊತ್ತದ ಮೇಲೆ ಶೇಕಡಾವಾರು ಆಧಾರದಲ್ಲಿ ಶುಲ್ಕ ವಿಧಿಸುತ್ತವೆ. ಅಂದರೆ ವಿವಿಧ ವಹಿವಾಟುಗಳಿಗೆ ಶೇ. 1 ರಿಂದ ಶೇ. 2.5 ರವರೆಗೆ ಶುಲ್ಕ ಇರುತ್ತದೆ. ಅಂದರೆ 1 ಸಾವಿರ ರೂ. ಮೌಲ್ಯದ ಸಾಮಗ್ರಿಯನ್ನು ಖರೀದಿಸಿ ಕಾರ್ಡ್ ಸ್ವೆ„ಪ್ ಮಾಡಿದರೆ 25 ರೂಪಾಯಿಯನ್ನು ನಮ್ಮ ಬ್ಯಾಂಕ್ ಈ ಕಾರ್ಡ್ ಕಂಪನಿಗಳಿಗೆ ಕೊಡಬೇಕಾಗುತ್ತದೆ. ಇದೇ ಮೊತ್ತವೇ ಈ ಕಾರ್ಡ್ ಕಂಪನಿಗಳ ಆದಾಯವೂ ಹೌದು. ಆದರೆ ರುಪೇ ಕಾರ್ಡ್ ಸಂಪೂರ್ಣ ಭಿನ್ನವಾಗಿ ಕೆಲಸ ಮಾಡುತ್ತದೆ. ಅಂದರೆ ಇದು ಲಾಭೋದ್ದೇಶವಿಲ್ಲದ ಕಂಪನಿ. ಈ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಬಳ, ಕಾರ್ಯನಿರ್ವಹಣೆ ವೆಚ್ಚಕ್ಕಷ್ಟೇ ಕಾರ್ಡ್ ವಹಿವಾಟಿನಿಂದ ಹಣ ಬಂದರೆ ಸಾಕು. ಹೀಗಾಗಿ ರುಪೇ ಕೇವಲ ಫ್ಲ್ಯಾಟ್ ಫೀ ನಿಗದಿಸಿದೆ. ಅಂದರೆ ಒಂದು ವಹಿವಾಟಿಗೆ ಕೇವಲ 90 ಪೈಸೆ ಶುಲ್ಕ ವಿಧಿಸುತ್ತದೆ. ಒಂದು ಲಕ್ಷ ರೂ. ವಹಿವಾಟು ಮಾಡಿದರೂ, ಒಂದು ರೂ. ವಹಿವಾಟು ನಡೆಸಿದರೂ ರುಪೇ ವಿಧಿಸುವ ಶುಲ್ಕ ಕೇವಲ 90 ಪೈಸೆ. ಅಂದರೆ ಇದು ಎರಡೂ ಬ್ಯಾಂಕ್‌ಗಳಿಗೆ ವಿಧಿಸಲಾಗುವ ಶುಲ್ಕ . ಒಂದು ವೇಳೆ ಒಂದೇ ಬ್ಯಾಂಕ್‌ನಿಂದ ಹಣ ವರ್ಗಾವಣೆಯಾದರೆ ಕೇವಲ 60 ಪೈಸೆ ತಗಲುತ್ತದೆ. ಹೀಗಾಗಿ ಈ ರುಪೇ ಕಾರ್ಡ್ ಈಗ ಬ್ಯಾಂಕ್‌ಗಳಿಗೂ ಮೆಚ್ಚುಗೆಯದ್ದಾಗಿದೆ.
– ಕೃಷ್ಣ ಭಟ್