Advertisement
ಇ-ಕಾಮರ್ಸ್ ವೆಬ್‌ಸೈಟ್‌ಗಳ ಬಗ್ಗೆ ವಿಶೇಷವಾಗಿ ಬರೆಯಬೇಕಾದ್ದಿಲ್ಲ ಬಿಡಿ. ಏಕೆಂದರೆ ಈಗ ತಾಲೂಕು, ಹೋಬಳಿ ಮಟ್ಟದಲ್ಲಿಯೂ ಕೂಡ ಫ್ಲಿಪ್‌ಕಾರ್ಟ್, ಅಮೆಜಾನ್, ಶಾಪ್‌ಕ್ಲೂಸ್ ಇತ್ಯಾದಿಗಳು ಅತ್ಯಂತ ಕ್ಲುಪ್ತವಾಗಿ ಸೇವೆ ನೀಡುತ್ತವೆ. ಅವುಗಳೆಲ್ಲ ಇದ್ದರೂ, ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವುದು ನಮ್ಮ ದೇಶದ್ದೇ ಆಗಿರುವ ಫ್ಲಿಪ್‌ಕಾರ್ಟ್. ಅದಕ್ಕೆ ಸ್ಪರ್ಧೆ ನೀಡಲೆಂದೇ ಕಾಲಿಟ್ಟದ್ದು ಅಮೆರಿಕದ ಅಮೆಜಾನ್. ಈಗ ಅದೂ ನಮ್ಮದೇ ಅನ್ನೋ ರೀತಿ ಆಗಿದೆ. ಹೊಸತನಗಳನ್ನು ಇ-ಕಾಮರ್ಸ್ ಕ್ಷೇತ್ರಕ್ಕೆ ತಂದ ಹೆಗ್ಗಳಿಕೆ ಅದರದ್ದು.
ಬ್ಯಾಂಕ್‌ಗಳಲ್ಲಿಯೂ ನಗದು ವಹಿವಾಟಿನ ಮೇಲೆ ಮಿತಿ ಹೇರಿದಂತೆ ಈಗ ಇ-ಕಾಮರ್ಸ್ ವೆಬ್‌ಸೈಟ್‌ಗಳೂ ಕೂಡ ಇಂತಿಷ್ಟು ಮೊತ್ತದವರೆಗೆ ಮಾತ್ರ ನಗದು ವಹಿವಾಟು. ಉಳಿದವೆಲ್ಲವೂ ಕೂಡ ನಗದು ರಹಿತ ಎಂದು ನಿರ್ಧರಿಸಿವೆ. ಈಗಾಗಲೇ ಅವುಗಳು ಡೆಬಿಟ್, ಕ್ರೆಡಿಟ್ ಕಾರ್ಡ್‌ನಂಥ ಇ-ಕಾಮರ್ಸ್ ಕಾರ್ಡ್‌ಗಳನ್ನು ಅನುಷ್ಠಾನಕ್ಕೆ ತಂದಿವೆ. ಈ ಬೆಳವಣಿಗೆ ಭಾರತ ಸೇರಿದಂತೆ ಎಲ್ಲಾ ದೇಶಗಳ ಹಣಕಾಸು ಸಂಸ್ಥೆಗಳಿಗೆ ಆತಂಕ ತಂದಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳೇ ಪರ್ಯಾಯವಾಗಿ ಖರೀದಿ ಕಾರ್ಡ್, ವ್ಯಾಲೆಟ್ ಅನ್ನು ಜನಪ್ರಿಯಗೊಳಿಸಿದರೆ ಆನ್‌ಲೈನ್ ವಹಿವಾಟಿನಲ್ಲಿ ಬಳಕೆ ಮಾಡುವ ಸರ್ವಿಸ್ ಚಾರ್ಜ್ ಶುಲ್ಕದಿಂದ ಸಿಗುವ ಆದಾಯ ದೂರವಾಗುತ್ತದೆ ಎಂಬ ಆತಂಕ.
Related Articles
Advertisement
ಇನ್ಫೋಸಿಸ್ ಫಿನಾಕಲ್ ಸರ್ವೆ ಹೊಸ ಮಾದರಿಯ ವ್ಯವಸ್ಥೆ ಜಾರಿಯಾಗುವ ಬಗ್ಗೆ ಸುಮಾರು 300ಕ್ಕೂ ಅಧಿಕ ಹಣಕಾಸು ಮತ್ತು ತಾಂತ್ರಿಕ ಸಂಸ್ಥೆಗಳ ಅಭಿಪ್ರಾಯ ಸಂಗ್ರಹ ಮಾಡಿದೆ. ಅವುಗಳು ಅಮೆಜಾನ್‌ನಂಥ ಇ-ಕಾಮರ್ಸ್ ವೆಬ್‌ಸೈಟ್ ಸಂಸ್ಥೆಗಳು ಹಣಕಾಸು ವಹಿವಾಟಿನ ಕ್ಷೇತ್ರಕ್ಕೆ ಪ್ರವೇಶ ಮಾಡುವುದು ಸ್ವಲ್ಪವೂ ಇಷ್ಟವಿಲ್ಲ ಎಂಬ ಅಭಿಪ್ರಾಯವನ್ನೇ ನೀಡಿವೆ.
ಅಮೆರಿಕದಲ್ಲಿ ಮೊದಲುಅಮೆರಿಕದ ಹಣಕಾಸು ವ್ಯವಸ್ಥೆಯಲ್ಲಿ ಅಮೆಜಾನ್ ಬ್ಯಾಂಕ್ ಮಾದರಿ ವ್ಯವಸ್ಥೆ 2011ರಿಂದಲೇ ಜಾರಿಯಲ್ಲಿದೆ. ಅದು ಅಲ್ಲಿ ಪ್ರತಿಕೂಲ ಪರಿಣಾಮವನ್ನೇನೂ ಬೀರಿಲ್ಲ. 33 ಲಕ್ಷ ಮಂದಿ ಈ ವ್ಯವಸ್ಥೆಯ ಭಾಗೀದಾರರಾಗಿದ್ದಾರೆ. 3 ಬಿಲಿಯನ್ ಡಾಲರ್ ಮೊತ್ತವನ್ನು ಅಲ್ಲಿನ ಸಣ್ಣ ಉದ್ದಿಮೆದಾರರಿಗೆ ನೀಡಿದೆ ಎಂದು ಅಲ್ಲಿನ ಸಂಶೋಧನಾ ವರದಿಯೊಂದು ಹೇಳುತ್ತದೆ. ಕಳೆದ ವರ್ಷ ಅಮೆಜಾನ್ ಕ್ಯಾಶ್ ಎಂಬ ಹೊಸ ಮಾದರಿ ವ್ಯವಸ್ಥೆಯನ್ನು ಜಾರಿ ಮಾಡಿತ್ತು. ಅದೂ ಕೂಡ ಉತ್ತಮ ಪ್ರತಿಕ್ರಿಯೆ ಕಂಡುಕೊಂಡಿದೆ. ಗ್ರಾಹಕರಿಗೇನು ಲಾಭ?
ಅಮೆಜಾನ್ ಬ್ಯಾಂಕ್ ಜಾರಿಯಾಗುವುದರಿಂದ ಭಾರತ ಮತ್ತು ಇತರ ರಾಷ್ಟ್ರಗಳ ಗ್ರಾಹಕರ ಮೇಲೆ ನೇರ ಅಥವಾ ಪ್ರತ್ಯಕ್ಷ ಪರಿಣಾಮ ಉಂಟಾಗುತ್ತದೆಯೋ ಎಂದು ಕೇಳಿದರೆ ಬರುವ ಉತ್ತರವೇ “ಇಲ್ಲ’. ಏಕೆಂದರೆ ಅದರಲ್ಲಿ ಈಗಾಗಲೇ ಉಲ್ಲೇಖೀಸಿರುವಂತೆ ಸಾಮಾನ್ಯ ಬ್ಯಾಂಕಿನ ಕಲ್ಪನೆಯೇ ಇಲ್ಲ. ಗ್ರಾಹಕರು ವ್ಯಾಲೆಟ್‌ಗಳಲ್ಲಿ ಅವರವರ
ಸಾಮರ್ಥ್ಯಕ್ಕೆ ತಕ್ಕಂತೆ ಹಣವನ್ನು ಲೋಡ್ ಮಾಡಿಕೊಂಡು ವಸ್ತುಗಳ ಖರೀದಿ ಮಾಡಲು ಅವಕಾಶ ಇದೆ.
ಇದು ನೇರವಾಗಿ ಇ-ಕಾಮರ್ಸ್ ವೆಬ್‌ಸೈಟ್ ಮತ್ತು ಹಣಕಾಸು ಸಂಸ್ಥೆಗಳು ಮತ್ತು ಇತರ ತಾಂತ್ರಿಕ ಸಂಸ್ಥೆಗಳ ನಡುವಿನ ಹೋರಾಟ. ಆಯಾ ಸೀಸನ್‌ಗಳಿಗೆ ಸಂಬಂಧಿಸಿದಂತೆ ಅಮೆಜಾನ್, ಫ್ಲಿಪ್‌ಕಾರ್ಟ್‌ಗಳು ವಿವಿಧ ರೀತಿಯ ಆಫರ್‌ಗಳು ಇರುವ ಕಾರ್ಡ್‌ಗಳನ್ನು ಜಾರಿ ಮಾಡುತ್ತವೆ. ಆಯಾ ಕಂಪನಿಗಳ ವೆಬ್‌ಸೈಟ್‌ನ ಕಾರ್ಡ್ ವಿಭಾಗಕ್ಕೆ ಹೋದರೆ ಸಂಬಂಧಿತ ವಿವರಗಳನ್ನು ನೀಡಿದರೆ ಕಾರ್ಡ್‌ಗಳು ಸಿಗುತ್ತವೆ. ಹೀಗಾಗಿ ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ. ಸಮಸ್ಯೆ ಮತ್ತು ಸವಾಲುಗಳು ಗ್ರಾಹಕರಿಗೆ ಎದುರಾಗುವುದು ಎಲ್ಲಿ ಎಂದರೆ ಆಯಾ ದೇಶದ ಸರ್ಕಾರಗಳು ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ಗಳ ನಡುವೆ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿ ವಿಚಾರ ಪ್ರಸ್ತಾಪವಾಗಿ ಅದರ ಮೇಲೆ ನಿಷೇಧ ಜಾರಿಯಾದರೆ ಮಾತ್ರ ಕಷ್ಟ. ಸಹಭಾಗಿತ್ವ
ಅಮೆಜಾನ್ ಬ್ಯಾಂಕ್ ಬಗ್ಗೆ ಚರ್ಚೆಯಾಗುತ್ತಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ. ಅಮೆರಿಕದಲ್ಲಿ ಬ್ಯಾಂಕ್ ಆಫ್ ಅಮೆರಿಕ ಜೊತೆ ಸಣ್ಣ ಉದ್ದಿಮೆದಾರರಿಗೆ ಸಾಲ ಕೊಡುವ ನಿಟ್ಟಿನಲ್ಲಿ ಅಮೆಜಾನ್ ಸಹಭಾಗಿತ್ವಕ್ಕೆ ಮುಂದಾಗಿದೆ. ಕಂಪನಿ ಸಿಇಒ ಜೆಫ್ ಬೆಜೋಸ್ ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಮಾಹಿತಿ ನೀಡಿದ್ದರು. 2011ರಲ್ಲಿಯೇ ಸಾಲ ನೀಡುವಂಥ ವ್ಯವಸ್ಥೆಯನ್ನು ಆರಂಭಿಸಿದ್ದರೂ, ವ್ಯಾಪಕವಾಗಿ ಇರಲಿಲ್ಲ. ಅದನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಉದ್ದೇಶಿಸಿದ್ದರಿಂದ ದೊಡ್ಡ ಮಟ್ಟದ ಹಣಕಾಸು ಮತ್ತು ಸವಾಲುಗಳು ಎದುರಾಗುತ್ತವೆ. ಹೀಗಾಗಿ, ಅಂಥ ದೊಡ್ಡ ರೀತಿಯ ಸವಾಲು ತೆಗೆದುಕೊಳ್ಳಲು ಕಂಪನಿ ಸುತರಾಂ ಸಿದ್ಧವಿಲ್ಲ. ಹೀಗಾಗಿ ಬ್ಯಾಂಕ್ ಆಫ್ ಅಮೆರಿಕ ಮೆರಿಲಿಂಚ್ ಜತೆಗೆ ಸಹಭಾಗಿತ್ವಕ್ಕೆ ಮುಂದಾಗಿದೆ. 1 ಸಾವಿರ ಡಾಲರ್‌ನಿಂದ 7,50,000 ಡಾಲರ್ ವರೆಗೆ ಷರತ್ತುಗಳ ಜತೆಗೆ 1 ವರ್ಷದ ವರೆಗೆ ಸಾಲ ನೀಡುತ್ತದೆ. 2017ರಲ್ಲಿಯೇ 1 ಬಿಲಿಯನ್ ಡಾಲರ್ ಮೊತ್ತದ ಸಾಲವನ್ನು ನೀಡಿತ್ತು. ನಾಲ್ಕು ವರ್ಷಗಳಲ್ಲಿ ಒಟ್ಟು 1.5 ಬಿಲಿಯನ್ ಡಾಲರ್ ಮೊತ್ತದಷ್ಟು ಸಾಲ ನೀಡಿತ್ತು. ಅದನ್ನು ಉದ್ದೇಶಪೂರ್ವಕವಾಗಿಯೇ ಕಡಿಮೆ ಪ್ರಮಾಣದಲ್ಲಿ ನೀಡಲು ಉದ್ದೇಶಿಸಲಾಗಿತ್ತು. 2016ರಲ್ಲಿ ಕಂಪನಿಗೆ 500 ಮಿಲಿಯನ್ ಡಾಲರ್ ಮೊತ್ತ ಹೂಡಿಕೆಯಾಗಿತ್ತು. ಅದು ಬ್ಯಾಂಕ್ ಅಮೆರಿಕ ಮೆರಿಲಿಂಚ್ ಮೂಲಕ ಹೂಡಿಕೆಯಾಗಿದ್ದ ಮೊತ್ತ. ಅಮೆಜಾನ್‌ನದ್ದೇ ಡೆಲಿವರಿ
ಬ್ಯಾಂಕ್ ಮಾದರಿ ವಹಿವಾಟಿಗೆ ಕೈ ಹಾಕಿರುವ ಅಮೆಜಾನ್ ಇದುವರೆಗೆ ನಾವು ನೀವು ಖರೀದಿ ಮಾಡಿರುವ ವಸ್ತುಗಳನ್ನು ಮನೆಯ ಬಾಗಿಲಿನವರೆಗೆ ತಲುಪಿಸುವ ವ್ಯವಸ್ಥೆಯನ್ನು ಇತರ ಸಂಸ್ಥೆಗಳಿಗೆ ಹೊರ ಗುತ್ತಿಗೆ ನೀಡುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಆ ವ್ಯವಸ್ಥೆಯನ್ನೂ ಕಂಪನಿಯೇ ವಹಿಸಲಿದೆ. ಅಂದಹಾಗೆ ಸದ್ಯಕ್ಕೆ ಈ ವ್ಯವಸ್ಥೆ ಅಮೆರಿಕದಲ್ಲಿ ಮಾತ್ರ ಇರಲಿದೆ. ಅದಕ್ಕೆ ಪೂರಕವಾಗಿ ಅಮೆರಿಕದಲ್ಲಿ ಅದರ ಪ್ರತಿಸ್ಪರ್ಧಿ ಕಂಪನಿ ಇನ್ಸಾ$rಕಾರ್ಟ್ 200 ಮಿಲಿಯನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲು ಸಿದ್ಧವಾಗಿದೆ. ಹೋಲ್ ಫುಡ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಅಮೆಜಾನ್ ಕೇವಲ 2 ಗಂಟೆಗಳಲ್ಲಿ ಕಿರಾಣಿ ವಸ್ತುಗಳನ್ನು ನೇರವಾಗಿ ಗ್ರಾಹಕನ ಮನೆಗೇ ವಿತರಣೆ ಮಾಡುವ ವ್ಯವಸ್ಥೆಯನ್ನು ಜಾರಿ ಮಾಡಿದೆ. ಅಮೆರಿಕದಲ್ಲಿ ಜಾರಿಯಾದ ವ್ಯವಸ್ಥೆ ಶೀಘ್ರದಲ್ಲಿಯೇ ಭಾರತಕ್ಕೆ ಬಂದರೂ ಅಚ್ಚರಿ ಏನೂ ಇಲ್ಲ. ಏಕೆಂದರೆ ದಕ್ಷಿಣ ಏಷ್ಯಾದಲ್ಲಿ ಭಾರತವೇ ಅತಿದೊಡ್ಡ ಮಾರುಕಟ್ಟೆ ಆ ಕಂಪನಿಗೆ. ಹೀಗಾಗಿ ಅದು ಏನೇ ಹೊಸತು ಮಾಡಿಕೊಂಡರೂ ಅದು ಭಾರತದಲ್ಲಿ ಜಾರಿಯಾಗಲೇ ಬೇಕು. ಅಂದ ಹಾಗೆ ಈ ವ್ಯವಸ್ಥೆ ಜಾರಿ ಮಾಡಿರುವುದು ಪ್ರೈಮ್ ಕಸ್ಟಮರ್ಸ್‌ಗೆ. ಅಮೆರಿಕದ ಇನ್ಸಾ$rಕಾರ್ಟ್ ಕಂಪನಿ ಗ್ರಾಹಕರಿಗೆ ಅವರು ಖರೀದಿ ಮಾಡಿದ ವಸ್ತುಗಳ ವಿತರಣೆಗಾಗಿಯೇ 200ಕ್ಕೂ ಅಧಿಕ ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ. ಅದಕ್ಕೆ ಪೂರಕವಾಗಿ ಅಮೆಜಾನ್ ತಾನು ಮಾರುವ ವಸ್ತುಗಳ ಬೆಲೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿ ಇನ್ಸಾ$rಕಾರ್ಟ್‌ಗೆ ಅಪಾಯ ತಂದೊಡ್ಡಲಿದೆ ಎನ್ನುತ್ತಾರೆ ಇ-ಕಾಮರ್ಸ್ ಕ್ಷೇತ್ರದ ವಿಶ್ಲೇಷಕರು. ಏಕೆಂದರೆ ಅಮೆಜಾನ್ ಭಾರತಕ್ಕೆ ಧಾಂಗುಡಿ ಇಟ್ಟ ರಭಸಕ್ಕೇ ಫ್ಲಿಪ್‌ಕಾರ್ಟ್ ನಡುಗಿ ಹೋಗಿದೆ. ಹಲವು ಕಾರಣಗಳಿಗಾಗಿಯೇ ಬೆಂಗಳೂರು ಮೂಲದ ಕಂಪನಿ ಅಮೆರಿಕದ ಚಿಲ್ಲರೆ ಮಾರಾಟ ಕ್ಷೇತ್ರದ ದೈತ್ಯ ವಾಲ್‌ಮಾರ್ಟ್‌ಗೆ ಕಂಪನಿಯ ಷೇರುಗಳ ಮಾರಾಟದ ಬಗ್ಗೆ ಆರಂಭಿಕ ಮಾತುಕತೆಗಳು ನಡೆದಿವೆ. ಹೀಗಾಗಿ, ಅದರ ಅಬ್ಬರಕ್ಕೆ ಮುಗ್ಗರಿಸೀತೆ ಎನ್ನುವುದು ಇ-ಕಾಮರ್ಸ್ ಕ್ಷೇತ್ರದ ಚರ್ಚೆಯಾಗಿದೆ. ಮಾರುಕಟ್ಟೆಯಲ್ಲಿ ಏನೇ ಕಂಪನಿಗಳ ಮಾರಾಟ-ಕೊಳ್ಳುವಿಕೆ-ವಿಲೀನ ಪ್ರಕ್ರಿಯೆ ನಡೆದರೂ ಗ್ರಾಹಕನಿಗೆ ಅದರಿಂದ ನೇರ ಪರಿಣಾಮ ಏನೂ ಇಲ್ಲ. ಅವರೆಲ್ಲರೂ ನಿರೀಕ್ಷೆ ಮಾಡುವುದಿಷ್ಟೇ ಎಷ್ಟು ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗಲಿವೆ ಎಂಬ ಬಗ್ಗೆ ಮಾತ್ರ ಚಿಂತೆ ಮಾಡುತ್ತಾರೆ. ಸದಾಶಿವ ಕೆ.