ಧಾರವಾಡ: ನಿಯಮ ಮೀರಿ ಜಿಪಂ ಸಿಇಒ ಸ್ನೇಹಲ್ ರಾಯಮಾನೆ ಕಾರು ಖರೀದಿಸಿರುವ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಜಿಲ್ಲಾಮಟ್ಟದಿಂದ ಇದೀಗ ರಾಜ್ಯಮಟ್ಟಕ್ಕೆ ಹೋಗಿದೆ. ಈ ವರೆಗೂ ಜಿಪಂ ಸಾಮಾನ್ಯ ಸಭೆ, ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ್ರ ಚರ್ಚೆಯಾಗಿದ್ದ ಈ ಪ್ರಕರಣವನ್ನು ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಗಂಭೀರವಾಗಿ ಪರಿಗಣಿಸಿದ್ದು, ನಿಯಮ ಮೀರಿ ಇನ್ನೋವಾ ಕಾರು ಖರೀದಿಸಿರುವ ಸಿಇಒ ಸ್ನೇಹಲ್ ರಾಯಮಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಂಚಾಯತ್ ರಾಜ್ ಇಲಾಖೆ ಸೇರಿದಂತೆ 6 ಇಲಾಖೆ ಪ್ರಮುಖರಿಗೆ ಪತ್ರ ಬರೆದಿದ್ದಾರೆ.
ಸಿಇಒ ಸ್ನೇಹಲ್ ಅವರಿಗೆ 9 ಲಕ್ಷ ರೂ. ವೆಚ್ಚದಲ್ಲಿ ಕಾರು ಖರೀದಿಗೆ ಮಿತಿ ಇತ್ತು. ಆದರೆ, ಅವರು 12.35 ಲಕ್ಷ ರೂ. ಇನ್ನೋವಾ ಕಾರು ಖರೀದಿಸಿದ್ದು, 2.50 ಲಕ್ಷ ರೂ. ಖರ್ಚು ಮಾಡಿ ಕಾರನ್ನು ಆಂತರಿಕವಾಗಿ ಶೃಂಗಾರಗೊಳಿಸಿದ್ದಾರೆ. ಕಾರು ಖರೀದಿಗೆ ಸರ್ಕಾರದ ಆದೇಶವಿದೆ ಎಂದು ಹೇಳುವ ಸ್ನೇಹಲ್ ಅವರು ಆದೇಶ ಬರುವ ಮುಂಚೆಯೇ ಖರೀದಿಸಿದ್ದು ಯಾಕೆ? ಎಂಬ ಬಗ್ಗೆ ಪತ್ರದಲ್ಲಿ ಚೈತ್ರಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಸ್ಥಿತಿಯಲ್ಲೇ ಇರುವ ಸುಜುಕಿ ಎರ್ಟಿಗಾ ಕಾರನ್ನು ಬಳಕೆ ಮಾಡಿಕೊಂಡಿಲ್ಲ. ಅದೂ ಅಲ್ಲದೇ ಆರ್ ಟಿಒದಿಂದ ಇದಕ್ಕೆ ಸಂಬಂಧಿಸಿದಂತೆ (ಸಾಂಪ್) ಎಂದು ಪ್ರಮಾಣಪತ್ರ ಪಡೆಯದೇ ಹೊಸ ಕಾರು ಖರೀದಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅ ಧಿನಿಯಮ- 1993 ನಿಯಮ 256ರ ಪ್ರಕಾರ ಆರ್ಥಿಕ ವರ್ಷ 2017- 18ರ ಆರ್ಥಿಕ (ಬಜೆಟ್) ಸಭೆಯಲ್ಲಿ ಕಾರು ಖರೀದಿಗಾಗಿ ಅನುಮೋದನೆ ತೆಗೆದುಕೊಳ್ಳದೆ ಜಿಪಂ ಅನುದಾನದಲ್ಲಿ ಕಾರು ಖರೀದಿಸಿದ್ದಾರೆ.
ಈ ಮೂಲಕ ಅಧಿನಿಯಮ ಉಲ್ಲಂಘಿಸಿದ್ದಾರೆ. ಜಿಪಂ ಉಪಾಧ್ಯಕ್ಷರಿಗೆ ವಾಹನ ಖರೀದಿಸಲು ಆದೇಶ ಇದ್ದರೂ ಈ ವರೆಗೆ ವಾಹನ ಒದಗಿಸಿಲ್ಲ ಎಂದು ಪತ್ರದಲ್ಲಿ ಚೈತ್ರಾಉಲ್ಲೇಖೀಸಿದ್ದಾರೆ. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಹಾಗೂ ಜಿಪಂ ಅಧ್ಯಕ್ಷರ ಒಕ್ಕೂಟಕ್ಕೂ ಪತ್ರದ ಪ್ರತಿ ಕಳುಹಿಸಿ ಮಾಹಿತಿ ನೀಡಲಾಗಿದೆ. ಸಿಇಒ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಅಧ್ಯಕ್ಷೆ ಚೈತ್ರಾ ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಅನಗತ್ಯ ಕಾರು ಖರೀದಿ ವಿಷಯದ ಮೇಲೆ ಗಂಭೀರ ಚರ್ಚೆ ನಡೆದಿತ್ತು. ಇದಕ್ಕೂ ಮೊದಲು ಜಿಪಂ ಸಿಇಒ, ಆಡಳಿತಾತ್ಮಕ ನಿರ್ಧಾರಗಳಿಗೆ ಚುನಾಯಿತ ಪ್ರತಿನಿಧಿಗಳ ಅನುಮತಿ ಪಡೆಯುವ ಅಗತ್ಯವಿಲ್ಲ. ಕಾರು ಖರೀದಿ ಸಂಬಂಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಪ್ರತಿಕ್ರಿಯೆ ಬಾರದೇ ಮೌಖೀಕ ಒಪ್ಪಿಗೆ ಪಡೆದು ಖರೀದಿಸಿದ್ದೇನೆ ಎಂದಿದ್ದರು.