ಬೆಂಗಳೂರು: ಉತ್ತರ ಭಾರತದಲ್ಲಿ ಕದ್ದ ಕಾರುಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಅಶೋಕ್‌ನಗರ ಠಾಣೆ ಪೊಲೀಸರು, 1.20 ಕೋಟಿ ರೂ. ಮೌಲ್ಯದ 9 ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಪಾದರಾಯನಪುರದ ನಿವಾಸಿ ಅಯಾಜ್ ಪಾಷಾ (33), ಮತೀನ್‌ವುದ್ದೀನ್ (32) ಬಂಧಿತರು. ಆರೋಪಿಗಳಿಂದ 5 ಹುಂಡೈ ಕ್ರೆಟಾ, 2 ಟೆಯೋಟಾ ಇನೋವಾ, 1 ಮಾರುತಿ ಬಲೆನೋ,1 ವೋಕ್ಸ್ ವ್ಯಾಗನ್ ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಪ್ರಕರಣದಕಿಂಗ್‌ಪಿನ್‌ಗಳಾದ ಸೈಯ್ಯದ್ ಸಮೀರ್, ಡೆಲ್ಲಿಇಮ್ರಾನ್, ತನ್ನು, ಯಾರಬ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಆರೋಪಿ ಡೆಲ್ಲಿ ಇಮ್ರಾನ್ ಪ್ರಕರಣದ ರೂವಾರಿಯಾಗಿದ್ದು, ತನ್ನ ಸಹಚರರ ಜತೆ ಸೇರಿ ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಇತರ ರಾಜ್ಯಗಳಲ್ಲಿ ಕಾರುಗಳನ್ನು ಕದಿಯುತ್ತಿದ್ದ. ಬಳಿಕ ಅವುಗಳನ್ನು ನೇರವಾಗಿ ಬೆಂಗಳೂರಿಗೆ ತರುತ್ತಿದ್ದರು. ನಂತರ ಕಾರಿನ ಚಾಸಿಸ್ ನಂಬರ್ ಹಾಗೂ ನಂಬರ್ ಪ್ಲೇಟ್ ಬದಲಾಯಿಸಿ ಬಂಧಿತ ಆರೋಪಿಗಳಾದ ಅಯಾಜ್ ಪಾಷಾ ಮತ್ತು ಮತೀನ್‌ವುದ್ದೀನ್‌ಗೆ ಒಪ್ಪಿಸುತ್ತಿದ್ದರು. ಬಳಿಕ ಆರೋಪಿಗಳಿಂದ ಕಾರು ಕೊಳ್ಳಲು ಮುಂದಾಗುತ್ತಿದ್ದ ಗಿರಾಕಿಗಳ ಬಳಿ “ಮುಂಗಡ ಹಣ ಕೊಟ್ಟರೆ, ಈಗಲೇ ಕಾರನ್ನು ನಿಮಗೆ ಒಪ್ಪಿಸಿ ಕೆಲ ದಿನಗಳ ಬಳಿಕ ಇದರ ದಾಖಲೆಗಳನ್ನು ಕೊಡುವುದಾಗಿ ಭರವಸೆ ಕೊಡುತ್ತಿದ್ದರು. ಆದರೆ, ಒಂದು ಬಾರಿ ಆರೋಪಿಗಳ ಕೈಗೆ ಹಣ ಸಿಕ್ಕಿದರೆ ಮತ್ತೆ ಗಿರಾಕಿಗಳ ಸಂಪರ್ಕಕ್ಕೆಸಿಗದೇ ತಲೆಮರೆಸಿಕೊಳ್ಳುತ್ತಿದ್ದರು. ಕಡಿಮೆ ಬೆಲೆಗೆ ಕಾರು ಸಿಕ್ಕಿದೆ ಎಂಬ ಖುಷಿಯಲ್ಲಿ ಗಿರಾಕಿಗಳೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
8 ಲಕ್ಷ ರೂ.ಗೆ ಇನೋವಾ ಬಿಕರಿ: ಕ್ರೆಟಾ, ಇನೋವಾ ಕಾರುಗಳಿಗೆ ಗಿರಾಕಿಗಳಿಂದ 5 ರಿಂದ8 ಲಕ್ಷ ರೂ. ಮುಂಗಡ ಹಣ ಪಡೆದರೆ, ಬಲೆನೋ, ವೋಕ್ಸ್ ವ್ಯಾಗನ್ ಕಾರುಗಳನ್ನುಕೇವಲ 2-4 ಲಕ್ಷ ರೂ.ಗೆ ಮಾರುತ್ತಿದ್ದರು. ಕದ್ದಕಾರು ಮಾರಾಟದಿಂದ ಬಂದ ಹೆಚ್ಚಿನ ಪಾಲುಆರೋಪಿ ಡೆಲ್ಲಿ ಇಮ್ರಾನ್ ಖಜಾನೆ ಸೇರಿದರೆ, ಇತರ ಆರೋಪಿಗಳಿಗೆ ಆತ ಕಮೀಷನ್ ಲೆಕ್ಕದಲ್ಲಿ ಹಣ ಕೊಡುತ್ತಿದ್ದ. ಆರೋಪಿಗಳು ಕಳೆದ 2 ವರ್ಷಗಳಿಂದ ಇದೇ ದಂಧೆಯಲ್ಲಿತೊಡಗಿಸಿಕೊಂಡು ಹಲವು ಕಾರುಗಳನ್ನು ಕದ್ದುಮಾರಾಟ ಮಾಡಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಕಾರಿನಲ್ಲಿ ಓಡಾಡಿ ಸಿಕ್ಕಿ ಬಿದ್ದರು! :
ಆ.9ರಂದು ಮಧ್ಯಾಹ್ನ 1.30 ಅಶೋಕ್‌ನಗರ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಕೆಬಿಎಆರ್ ರಸ್ತೆಯಲ್ಲಿ ದೆಹಲಿ ಪಾಸಿಂಗ್ ಇರುವ ಕ್ರೆಟಾ ಕಾರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು, ಜಸ್ಮಾ ಭವನದ ಮುಂಭಾಗದ ರಸ್ತೆಯಲ್ಲಿ ಕಾರನ್ನು ಪತ್ತೆಹಚ್ಚಿದ್ದರು. ಕಾರಿನಲ್ಲಿದ್ದ ಆರೋಪಿಗಳಾದ ಅಜಾಜ್ ಹಾಗೂ ಮತೀನ್‌ವುದ್ದೀನ್ ಬಳಿ ವಾಹನದ ದಾಖಲೆ ಕೊಡುವಂತೆ ಕೇಳಿದ್ದರು. ದಾಖಲೆ ಇಲ್ಲ ಎಂದು ಆರೋಪಿಗಳು ಹೇಳಿದಾಗ, ಅನುಮಾನಗೊಂಡ ಪೊಲೀಸರು ದೆಹಲಿ ನೋಂದಣಿ ಸಂಖ್ಯೆಯ ಕಾರಿನ ಮಾಲಿಕತ್ವದ ಬಗ್ಗೆ ವಿಚಾರಿಸಿದ್ದರು. ಆರೋಪಿಗಳು ಮತ್ತೆ ಗೊಂದಲದ ಹೇಳಿಕೆ ಕೊಟ್ಟಾಗ ಕಾರು ಹಾಗೂ ಆರೋಪಿಗಳನ್ನು ಠಾಣೆಗೆ ಕರೆತಂದು ಪೊಲೀಸರು ಸಮಗ್ರವಾಗಿ ವಿಚಾರಣೆ ನಡೆಸಿದ್ದರು. ಆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.