ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ನೀಡಿದ ಜಾಹೀರಾತು ಕಂಡು ಕಾರು ಖರೀದಿಸುವ ಸೋಗಿನಲ್ಲಿ ಮನೆಗೆ ಬಂದು ಟೆಸ್ಟ್ ಡ್ರೈವ್ ಗೆಂದು ಕಾರು ಕಳವು ಮಾಡಿ ಹೋಗಿದ್ದ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಅಮೃತನಗರ ನಿವಾಸಿ ಎಂ.ಜಿ.ವೆಂಕಟೇಶ್ ನಾಯಕ್ (36) ಬಂಧಿತ. ಆರೋಪಿಯಿಂದ ಒಂದು ಕಾರು, ಒಂದು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಹೆಬ್ಬಾಳ -ಕೆಂಪಾಪುರದಲ್ಲಿರುವ ಕೆಬಿಆರ್ ಅಪಾರ್ಟ್‌ಮೆಂಟ್ ನಿವಾಸಿ ರವೀಂದ್ರ ಇಲೂರಿ ತಮ್ಮ ಮಾರುತಿ ವಿಟೆರಾ ಬ್ರಿಜ್ಜಾ ಕಾರನ್ನು ಮಾರಾಟ ಮಾಡುವ ಸಲುವಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದರು. ಕಳೆದ ಜ.30ರಂದು ಸಂಜೆ 7 ಗಂಟೆಗೆ ಆರೋಪಿ ಕಾರು ಖರೀದಿಯ ಆಸಕ್ತಿ ತೋರಿಸಿ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಟೆಸ್ಟ್ ಡ್ರೈವ್ ಮಾಡುವುದಾಗಿ ಕೀ ಪಡೆದು ಕಾರನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
ಈ ಸಂಬಂಧ ರವೀಂದ್ರ ಇಲೂರಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸತತ ಮೂರು ತಿಂಗಳ ಕಾಲ ತಾಂತ್ರಿಕ ತನಿಖೆ ನಡೆಸಿ ಮೇ 10ರಂದು ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಆರೋಪಿ ಕಾರಿನ ಸಮೇತ ಸಿಕ್ಕಿಬಿದ್ದಿದ್ದಾನೆ. ಈತನ ವಿಚಾರಣೆ ವೇಳೆ ಆರೋಪಿ ಐಷಾರಾಮಿ ಜೀವನಕ್ಕಾಗಿ ಕಾರು ಕಳವು ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಜತೆಗೆ ಈ ಹಿಂದೆ ಈತನ ವಿರುದ್ಧ ಬಾಗಲೂರು ಠಾಣೆಯಲ್ಲಿ ಮೊಬೈಲ್ ಕಳ್ಳತನ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸರು ಹೇಳಿದರು. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ ತೀರಿಸಲು ಕೃತ್ಯ : ಆರೋಪಿ ವೆಂಕಟೇಶ್ ಪತ್ನಿಯನ್ನು ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಅದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಸೋಲುಂಡಿದ್ದ. ಸಾಲ ಹಿಂತಿರುಗಿಸಲಾಗದೇ ತನ್ನ ಬಳಿ ಇದ್ದ ರಿಟ್ಜ್ ಕಾರು ಮಾರಾಟ ಮಾಡಿದ್ದ. ಕಾರು ಇಲ್ಲದೇ ಊರಿಗೆ ಹೋದರೆ ಅವಮಾನ ಆಗುತ್ತದೆ ಎಂದು ಭಾವಿಸಿದ್ದ. ಹೀಗಾಗಿ ಅದೇ ಬಣ್ಣದ ಕಾರು ಕದಿಯಲು ಸಂಚು ರೂಪಿಸಿದ್ದ. ಅದರಂತೆ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿರುವ ಕಾರುಗಳನ್ನು ಹುಡುಕಾಡುತ್ತಿದ್ದಾಗ ರವೀಂದ್ರ ಅವರ ಕಾರ ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.