Advertisement

ಜಪಾನ್‌ ರಾಯಭಾರಿ ಹೆಸರಲ್ಲಿ ಕಾರು ಮಾರಾಟ!

06:00 AM Aug 23, 2018 | |

ಬೆಂಗಳೂರು: ಸೈಬರ್‌ ವಂಚಕರು ಇದೀಗ ಜಪಾನ್‌ ರಾಯಭಾರಿ ಹೆಸರು ಹಾಗೂ ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಅನ್‌ಲೈನ್‌ ಮಾರಾಟ ತಾಣದಲ್ಲಿ ಕಾರು ಮಾರಾಟಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಅಚ್ಚರಿಯ ಸಂಗತಿ ಎಂದರೆ ಆನ್‌ಲೈನ್‌ ತಾಣದಲ್ಲಿ ವಂಚಕ ಹಾಕಿದ ಕಾರಿನ ಮಾರಾಟದ ಜಾಹೀರಾತು ಪೋಸ್ಟರ್‌ ಗಮನಿಸಿದ ವ್ಯಕ್ತಿಯೊಬ್ಬರು, ಕಾರು ಖರೀದಿಸಲು ಕಬ್ಬನ್‌ ರಸ್ತೆಯಲ್ಲಿರುವ ಜಪಾನ್‌ ರಾಯಭಾರಿ ಕಚೇರಿಗೆ ಆಗಮಿಸಿದಾಗ ಅಲ್ಲಿನ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಕೆಲ ದಿನಗಳ ಹಿಂದೆ ಅಪರಿಚಿತ ವಂಚಕನೊಬ್ಬ, ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನ ಫೋಟೋ ಹಾಕಿ ಕಾರು ಮಾರಾಟದ ಬಗ್ಗೆ ದಿಸ್‌ ಈಸ್‌ ಮೈ ಕಾರ್‌, ಸೂಪರ್‌ ಲುಕಿಂಗ್‌.. ನೋ  ಸಾಚಸ್‌, ಟೊಯೋಟಾ ಇನೋವಾ ಕ್ರಿಸ್ಟಾ, ಫಾರ್‌ ಸೇಲ್‌, 14 ಲಕ್ಷ ರೂ. ಎಂದು ಜಾಹೀರಾತು ಪೋಸ್ಟ್‌ ಹಾಕಿದ್ದಾನೆ. ಕೊಳ್ಳಲು ಆಸಕ್ತಿ ಇರುವವರು ಸಂಪರ್ಕಿಸಲು ಮೊಬೈಲ್‌ ನಂಬರ್‌ ನೀಡಿದ್ದು, ಅದಕ್ಕೆ ಜಪಾನ್‌ ರಾಯಭಾರಿ ಹೆಸರಿನಲ್ಲಿ  ನಕಲಿ ಮೇಲ್‌ ವಿಳಾಸ ಬರೆದಿದ್ದಾನೆ. ಜತೆಗೆ, ಕಬ್ಬನ್‌ ರಸ್ತೆಯಲ್ಲಿರುವ ರಾಯಭಾರಿ ಕಚೇರಿ ವಿಳಾಸವನ್ನೂ ನಮೂದಿಸಿದ್ದಾನೆ.

ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಕಾರು ಕೊಳ್ಳುವುದಾಗಿ ವಂಚಕ ನೀಡಿದ ದೂರವಾಣಿ ನಂಬರ್‌ಗೆ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ವಂಚಕ ನೀಡಿದ ಅಕೌಂಟ್‌ ನಂಬರ್‌ಗೆ 20 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆತ ಹೇಳಿದಂತೆ ಮಂಗಳವಾರ ಮಧ್ಯಾಹ್ನ ಕಾರು ನೋಡುವ ಸಲುವಾಗಿ ರಾಯಭಾರಿ ಕಚೇರಿಗೆ ಆಗಮಿಸಿದ್ದು, ಕೆಲ ಹೊತ್ತು ಕಾದರೂ ವಂಚಕನಿಂದ ಯಾವುದೇ ದೂರವಾಣಿ ಕರೆ ಬರದಿದ್ದರಿಂದ ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಈ ಮಾಹಿತಿ ಕೇಳಿ ರಾಯಭಾರಿ ಕಚೇರಿ ಸಿಬ್ಬಂದಿ ಬೆಸ್ತು ಬಿದ್ದಿದ್ದಾರೆ!

ಕೂಡಲೇ ರಾಯಭಾರಿ ಟಕಾಯುಕಿ ಕಿಟಗಾವ್‌ ಅವರ ಸೂಚನೆ ಮೇರೆಗೆ ಅಲ್ಲಿನ ಅಧಿಕಾರಿ ಮಿತ್ಸುಹಿರೋ ಅಮೋ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

ವಿದೇಶಿ ಸೈಬರ್‌ ವಂಚಕರ ಕೃತ್ಯ?
ವಿದೇಶಗಳಿಂದ ಬರುವ ರಾಯಭಾರಿಗಳ ಹೆಸರು ವಿಮಾನನಿಲ್ದಾಣಗಳ ಎಂಟ್ರಿ ಪುಸ್ತಕದಲ್ಲಿ ನಮೂದಾಗಿರುತ್ತದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ ಹೆಸರುಗಳಾಗಿರುತ್ತವೆ. ಹೀಗಾಗಿ ವಿದೇಶಿ ಸೈಬರ್‌ ವಂಚಕರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅಲ್ಲದೆ, ಸೈಬರ್‌ ವಂಚನೆಯಲ್ಲಿ ನುರಿತರಾಗಿರುವ ಆಫ್ರಿಕನ್‌ ಪ್ರಜೆಗಳು ಈ ಕೃತ್ಯ ಎಸಗಿರುವ ಶಂಕೆಯಿದ್ದು ವಂಚಕನ ಕುರಿತು ಸುಳಿವು ಸಿಕ್ಕಿದೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಆರೋಪಿ ವಂಚಕ ಯಾರದೋ ಫೋಟೋ ಅಪ್ಲೋಡ್‌ ಮಾಡಿ, ಜಪಾನ್‌ ರಾಯಭಾರಿ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ. ಸದ್ಯಕ್ಕೆ, ಕಾರಿನ ಜಾಹೀರಾತು ನೋಡಿ ಒಬ್ಬ ವ್ಯಕ್ತಿ ಮಾತ್ರ ವಂಚಕನಿಗೆ ಹಣ ಕಳುಹಿಸಿರುವ ಬಗ್ಗೆ ಮಾಹಿತಿಯಿದೆ. ಆತ ಮತ್ತಷ್ಟು ಜನರಿಗೆ ವಂಚಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಅಧಿಕಾರಿ ಹೇಳಿದರು.

ಜಪಾನ್‌ ರಾಯಭಾರಿ ಹಾಗೂ ಕಚೇರಿ ವಿಳಾಸವನ್ನು ದುರ್ಬಳಕೆ ಮಾಡಿಕೊಂಡು ವಂಚಕನೊಬ್ಬ ಕಾರು ಮಾರಾಟ ಜಾಹೀರಾತು ನೀಡಿರುವ ಪ್ರಕರಣದ ತನಿಖೆ ಮುಂದುವರಿದಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು.
 - ಡಿ.ದೇವರಾಜು, ಕೇಂದ್ರ ವಿಭಾಗ ಡಿಸಿಪಿ

– ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next