ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿರುವ ಜಾವೆಲಿನ್ ಥ್ರೋ ಆಟಗಾರ ನೀರಜ್ ಅವರಿಗೆ ದೇಶದಾದ್ಯಂತ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ಚಿನ್ನದ ಬೇಟೆಯಾಡಿರುವ ಚೋಪ್ರಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಶುಭ ಕೋರಿದ್ದಾರೆ. ಇದೀಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ವಿಶೇಷ ಉಡುಗೊರೆಯೊಂದನ್ನು ಘೋಷಿಸಿದ್ದಾರೆ.
ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಅವರು ಚಿನ್ನದ ಹುಡುಗ ನೀರಜನಿಗೆ ಭರ್ಜರಿ ಉಡುಗೊರೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಮಹೀಂದ್ರಾ XUV 700 ಕಾರು ಗಿಫ್ಟ್ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ನೀರಜ್ ಉಡುಗೊರೆ ನೀಡಲು XUV 700 ಕಾರು ಸಿದ್ಧಪಡಿಸಿ ಎಂದು ತಮ್ಮ ತಂಡಕ್ಕೆ ಸೂಚಿಸಿದ್ದಾರೆ.
ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಹರಿಯಾಣ ಸರ್ಕಾರ ನಗದು ಬಹುಮಾನವನ್ನು ಘೋಷಿಸಿತು. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚೋಪ್ರಾ ಅವರಿಗೆ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು.
ನಾಲ್ಕನೇ ಸುತ್ತಿನಲ್ಲಿ ಫೌಲ್ ಆಯಿತು. ಐದನೇ ಸುತ್ತು ಕೂಡಾ ಫೌಲ್ ಆಯಿತು. ಅಂತಿಮ ಸುತ್ತಿನವರೆಗೂ ಗರಿಷ್ಠ ದೂರ ಕಾಪಾಡಿದ ನೀರಜ್ ಚೋಪ್ರಾ ಜಯಶಾಲಿಯಾದರು.