ಚೆನ್ನೈ: ಬಂದರಿನಲ್ಲಿ ಕಾರೊಂದು ರಿವರ್ಸ್ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದು ನೌಕಾಪಡೆ ಅಧಿಕಾರಿ ಪಾರಾದರೆ, ಕಾರು ಚಾಲಕ ನಾಪತ್ತೆಯಾಗಿರುವ ಘಟನೆ ಚೆನ್ನೈ ಬಂದರಿನಲ್ಲಿ ಮಂಗಳವಾರ(ಡಿ.17) ತಡರಾತ್ರಿ ನಡೆದಿದೆ.
ನಾಪತ್ತೆಯಾಗಿರುವ ಕಾರು ಚಾಲಕನನ್ನು ಕೊಡಂಗಯ್ಯೂರಿನ ನಿವಾಸಿ ಮೊಹಮ್ಮದ್ ಶಾಹಿ ಎಂದು ಗುರುತಿಸಲಾಗಿದ್ದು ನೌಕಾಪಡೆಯ ಅಧಿಕಾರಿಯೊಬ್ಬರ ಕಾರಿಗೆ ತಾತ್ಕಾಲಿಕ ಚಾಲಕನಾಗಿ ಬಂದಿದ್ದರು ಎನ್ನಲಾಗಿದೆ.
ಮಂಗಳವಾರ ರಾತ್ರಿ ಅಧಿಕಾರಿಯನ್ನು ಕರೆದುಕೊಂಡು ಹೋಗಲು ಬಂದರಿಗೆ ಬಂದಿದ್ದ ಚಾಲಕ ಅಧಿಕಾರಿ ಕಾರಿನಲ್ಲಿ ಕೂರುತಿದ್ದಂತೆ ಚಾಲಕ ಕಾರನ್ನು ತಿರುಗಿಸಲು ಹಿಂದೆ ತೆಗೆದಿದ್ದಾನೆ ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಸುಮಾರು 85 ಅಡಿ ಆಳದ ಸಮುದ್ರಕ್ಕೆ ಬಿದ್ದಿದೆ ಈ ವೇಳೆ ಕಾರಿನಲ್ಲಿದ್ದ ಅಧಿಕಾರಿ ಕಾರಿನ ಕಿಟಕಿ ಗಾಜನ್ನು ಒಡೆದು ಈಜಿ ದಡ ಸೇರಿದ್ದಾರೆ ಆದರೆ ಚಾಲಕ ಮಾತ್ರ ನಾಪತ್ತೆಯಾಗಿದ್ದಾನೆ.
ಘಟನೆ ನಡೆದ ಕೂಡಲೇ ರಕ್ಷಣಾ ತಂಡ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದರೂ ಚಾಲಕನ ಪತ್ತೆಯಾಗಲಿಲ್ಲ ಎನ್ನಲಾಗಿದೆ, ಕ್ರೇನ್ ಬಳಸಿ ಕಾರನ್ನು ಮೇಲಕ್ಕೆ ಎತ್ತಲಾಗಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಆದರೆ ಕಾರಿನ ಒಳಗೂ ಚಾಲಕ ಪತ್ತೆಯಾಗಿಲ್ಲ. ಸದ್ಯ ಚಾಲಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.