ಹೊನ್ನಾಳಿ: ಕಾರಿನ ಟಯರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿಯಾಗಿ ಮೂವರು ಹಾಗೂ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೂ ಮೃತಪಟ್ಟ ಘಟನೆ ತಾಲೂಕಿನ ಹರಳಹಳ್ಳಿಯಲ್ಲಿ ಸಂಭವಿಸಿದೆ.
ಹರಳಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ 5.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು ಅರಬಗಟ್ಟೆ ಗ್ರಾಮದ ರಮೇಶ್ (38), ಉಷಾ (28), ಚಂದ್ರು (6) ಮತ್ತು ಕಾರು ಚಲಾಯಿಸುತ್ತಿದ್ದ ದಾವಣಗೆರೆಯ ಎಸ್ಸೆಸ್ ಲೇಔಟ್ ನಿವಾಸಿ, ಗುತ್ತಿಗೆದಾರ ಜಯದೇವಯ್ಯ ಹಿರೇಮಠ್… (45) ಮೃತಪಟ್ಟಿದ್ದಾರೆ.
ಬಸ್ಸಿಗಾಗಿ ಕಾಯುತ್ತಿದ್ದರು: ಮೃತಪಟ್ಟ ಮೂವರು ಅರಬಗಟ್ಟೆ ಗ್ರಾಮದ ಚೀಲೋಡಿ ಮನೆತನದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ತೆರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಇದೇ ಮಾರ್ಗದಲ್ಲಿ ಗುತ್ತಿಗೆದಾರ ಜಯದೇವಯ್ಯ ತಮ್ಮ ಕಾರಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ ತೆರಳುತ್ತಿದ್ದರು. ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲೇ ಇವರ ಕಾರಿನ ಟಯರ್ ಸ್ಫೋಟಗೊಂಡಿದೆ.
ಪರಿಣಾಮ ನಿಯಂತ್ರಣ ತಪ್ಪಿ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ಕ್ಷಣಾರ್ಧದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ಹರಿದಿದೆ. ನಂತರ ಅಲ್ಲೇ ಇದ್ದ ಮರಕ್ಕೆ ಅಪ್ಪಳಿಸಿ ನಿಂತಿದೆ. ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಮರದ ಪಕ್ಕದಲ್ಲೇ ಮತ್ತಷ್ಟು ಜನ ಬಸ್ಸಿಗಾಗಿ ಕಾಯುತ್ತ ನಿಂತಿದ್ದು ಕಾರು ಮರಕ್ಕೆ ಡಿಕ್ಕಿ ಹೊಡೆಯದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಘಟನೆಯಿಂದ ಬಸ್ ಏರಿ ತಾವು ಹೋಗಬೇಕಿದ್ದ ಊರಿಗೆ ತಲುಪಬೇಕು ಎನ್ನುವಷ್ಟರಲ್ಲಿ ಕಾರು ಡಿಕ್ಕಿಯಾಗಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಜನ ಜಮಾಯಿಸಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.