Advertisement

ಕಾರು-ಕ್ಯಾಂಟರ್‌ ಡಿಕ್ಕಿ: 6 ಸ್ನೇಹಿತರ ಸಾವು

10:25 AM Aug 29, 2017 | |

ಶಿವಮೊಗ್ಗ: ಕಾರು ಹಾಗೂ ಕ್ಯಾಂಟರ್‌ ಮಧ್ಯೆ ಡಿಕ್ಕಿಯಾಗಿ 6 ಮಂದಿ ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಆಯನೂರು ಸಮೀಪ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಕಾರಿನಲ್ಲಿದ್ದ ಚಾಲಕ ಅಶೋಕ್‌ (25), ದಿನೇಶ್‌ (25), ಮಾರಿಮುತ್ತು (25), ಕಿರಣ್‌ (24), ಕಾರ್ತಿಕ್‌, ನವೀನ (24)ಮತ್ತು ಕೇಶವ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಸಂತೋಷ್‌ ಎಂಬಾತ, ಕ್ಯಾಂಟರ್‌ ಚಾಲಕ ಹಾಗೂ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರುಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ತಾಲೂಕು ಬ್ರಹೆಶ್ವರದ ಅಂಬೇಡ್ಕರ್‌ ಕಾಲೋನಿಯ 7 ಮಂದಿ ಸ್ನೇಹಿತರು ಸಿನಿಮಾ ವೀಕ್ಷಣೆ ಮಾಡಲು ಕಾರಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದರು  ಎನ್ನಲಾಗಿದೆ. 

ಶಿವಮೊಗ್ಗದಿಂದ ಲಿಕ್ಕರ್‌ ತುಂಬಿದ್ದ ಕ್ಯಾಂಟರ್‌ ಸಾಗರಕ್ಕೆ ತೆರಳುತ್ತಿತ್ತು. ಎರಡೂ ವಾಹನಗಳು ಮಿತಿ ಮೀರಿದ ವೇಗದಲ್ಲಿದ್ದು, ಮುಖಾಮುಖೀಯಾಗಿ ಡಿಕ್ಕಿ ಹೊಡೆದವು. ಎರಡೂ ವಾಹನಗಳ ಚಾಲಕರು ತುಂತುರು ಮಳೆಯಾಗುತ್ತಿದ್ದರೂ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೇ ಭೀಕರ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಿಂದಾಗಿ ಕೆಲಕಾಲ ಸಾಗರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ತೊಂದರೆಯಾಗಿತ್ತು. ಬಳಿಕ ಕುಂಸಿ ಪೊಲೀಸರು ಅಪಘಾತಕ್ಕೀಡಾಗಿದ್ದ ವಾಹನಗಳನ್ನು ತೆರವುಗೊಳಿಸಿದರು. ಅಪಘಾತ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ, ಎಎಸ್‌ಪಿ ಮುತ್ತುರಾಜ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಹಾಂತೇಶ್‌, ಕುಂಸಿ ಎಸ್‌.ಐ. ಸಂದೀಪ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಸಾವಿನ ಹೆದ್ದಾರಿ..!
ಶಿವಮೊಗ್ಗ- ಸಾಗರ ನಡುವಿನ 206 ರಾಷ್ಟ್ರೀಯ ಹೆದ್ದಾರಿ ಸಧ್ಯ ಅಗಲೀಕರಣಗೊಳ್ಳುತ್ತಿದ್ದು, ಇಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚಾರವಿದೆ. ಈ ರಸ್ತೆಯಲ್ಲಿ ಪದೇ ಪದೇ ಭೀಕರ ಅಪಘಾತಗಳು ಸಂಭವಿಸಿ ಅಪಾರ ಸಂಖ್ಯೆಯಲ್ಲಿ ಸಾವು-ನೋವು ಉಂಟಾಗಿದೆ. ಇತ್ತೀಚೆಗಷ್ಟೆ ಆನಂದಪುರ ಬಳಿ ಆಟೋ-ಖಾಸಗಿ ಬಸ್‌ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದರು. ಅದಕ್ಕಿಂತ ಹಿಂದೆ ಇನೋವಾ ನಿಂತಿದ್ದ ಟಿಂಬರ್‌ ಲಾರಿಗೆ ಡಿಕ್ಕಿ ಹೊಡೆದು ಏಳು ಮಂದಿ
ಮೃತಪಟ್ಟಿದ್ದರು. ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸುತ್ತಿದ್ದು, ಸೂಕ್ತ ಸೂಚನಾ ಫಲಕಗಳು, ವೇಗ ನಿಯಂತ್ರಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೇ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆ ಕೂಡ ಅಪಘಾತಕ್ಕೆ ಕಾರಣ
ಎನ್ನಲಾಗಿದೆ. ಹೀಗೆ ಪದೇ ಪದೇ ಅಪಘಾತಗಳಿಂದ ಸಾಗರ ರಸ್ತೆ ಸಾವಿನ ರಸ್ತೆಯಾಗಿ ಮಾರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next