Advertisement

ಕಾರು, ಬೈಕು ಇರೋವ್ರು ಹಸಿವಿಂದ ಸಾಯಲ್ಲ ಅವರೂ ತೆರಿಗೆ ಕೊಡ್ಲಿ!

09:10 AM Sep 17, 2017 | Harsha Rao |

ತಿರುವನಂತಪುರ: “ಕಾರು, ಬೈಕು ಹೊಂದಿರುವವರು ಹಸಿವಿನಿಂದ ಸಾಯುವುದಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಅವರಿಗೇನು ತೊಂದರೆಯಿಲ್ಲ. ಏಕೆಂದರೆ ತೆರಿಗೆ ಪಾವತಿಸುವ ಸಾಮರ್ಥ್ಯ ಇದೆ. ಪಾವತಿಸಲಿ
ಹೀಗೆಂದು ತೈಲೋತ್ಪನ್ನಗಳ ಬೆಲೆ ಸಮರ್ಥನೆ ಮಾಡಿಕೊಂಡದ್ದು ಕೇಂದ್ರ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಕೆ.ಜೆ.ಅಲೊ³àನ್ಸ್‌. ಬಡವರ ಮತ್ತು ತುಳಿತಕ್ಕೆ ಒಳಗಾದವರ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅದಕ್ಕಾಗಿ ಹಣ ಸಂಗ್ರಹ ಮಾಡುವುದಕ್ಕಾಗಿ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಇಂಥ ಕ್ರಮ ಕೈಗೊಳ್ಳುತ್ತಿದೆ. ಮತ್ತೆ ಇದೊಂದು ಅಂತಾರಾಷ್ಟ್ರೀಯವಾಗಿರುವ ನಿರ್ಧಾರ ಎಂದು ಸಚಿವರು ಹೇಳಿಕೊಂಡಿದ್ದಾರೆ. 

Advertisement

“ಪೆಟ್ರೊಲ್‌ ಬೆಲೆಯನ್ನು ಕೇಂದ್ರ ಉದ್ದೇಶಪೂರ್ವಕವಾಗಿಯೇ ಹೆಚ್ಚಳ ಮಾಡುತ್ತಿದೆ. ಕಾರು, ಬೈಕು ಇರಿಸಿಕೊಂಡವರು ಶ್ರೀಮಂತರಿರುತ್ತಾರೆ. ಬಡವರ ಬಳಿ ಕಾರು, ಬೈಕ್‌ ಇರಲು ಸಾಧ್ಯವಿಲ್ಲ. ಬಡವರಿಗೆ ಅನುಕೂಲ ಮಾಡಿಕೊಡಲು ಶ್ರೀಮಂತರ ಮೇಲೆ ತೆರಿಗೆ ವಿಧಿಸುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.  “ಹಿಂದಿನ ಯುಪಿಎ ಸರ್ಕಾರವೇ ಜನರ ಹಣವನ್ನು ಕೊಳ್ಳೆಹೊಡೆಯುತ್ತಿತ್ತು. ನಮ್ಮ ಸರ್ಕಾರ ಆ ರೀತಿ ಮಾಡುತ್ತಿಲ್ಲ. ಬಡವರ ಮೂಲಭೂತ ಅಗತ್ಯಗಳಾದ ಶೌಚಾಲಯ, ಮನೆ ಮುಂತಾದ ಸೌಕರ್ಯಗಳನ್ನು ಒದಗಿಸಲು ಶ್ರೀಮಂತರಿಂದ ಪೆಟ್ರೋಲ್‌ ಮೂಲಕ ಹಣ ಸಂಗ್ರಹಿಸುತ್ತೇವೆ’ ಎಂದು ಹೇಳಿದರು. ಜಿಎಸ್‌ಟಿ ವ್ಯಾಪ್ತಿಯಲ್ಲಿ ಪೆಟ್ರೋಲಿಯಂ ಮತ್ತು ಮದ್ಯವನ್ನು ಸೇರಿಸಲು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. 

ಯುಪಿಎ  ಸರ್ಕಾರದ ಅವಧಿಯಲ್ಲಿ ಬಿಜೆಪಿ ತೈಲೋತ್ಪನ್ನಗಳ ದರ ಏರಿಸುತ್ತಿದ್ದಾಗ ಪ್ರತಿಭಟನೆ ನಡೆಸುತ್ತಿತ್ತಲ್ಲವೇ ಎಂದಾಗ “ಹಾಲಿ ಸರ್ಕಾರ ಹಣವನ್ನು ಬಡವರ ಮತ್ತು ತುಳಿತಕ್ಕೊಳಗಾದವರ ಅಭಿವೃದ್ಧಿಗೆ ಬಳಸುತ್ತಿದೆ. ಅದುವೇ ಸರ್ಕಾರದ ಗುರಿ’ ಎಂದರು.

ಈ ನಡುವೆ, ಎನ್‌ಡಿಎ ಸರ್ಕಾರ ಇಂಧನ ಸೇರಿ ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ವಿರುದ್ಧ ಕಾಂಗ್ರೆಸ್‌ ಸೆ.20ರಂದು ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next