ಬೆಂಗಳೂರು: ಜೂಜಾಟಕ್ಕೆ ಹಣ ಹೊಂದಿಸಲು ತಮಿಳುನಾಡಿನಿಂದ ನಗರಕ್ಕೆ ಬಂದು ಬೈಕ್ ಕದಿಯುತ್ತಿದ್ದ ನಿಯಾಜ್ ಅಹಮದ್ ಎಂಬಾತನನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದಾಗ, ಜೂಜಾಟಕ್ಕೆ ಹಣ ಹೊಂದಿಸಲು ಬೈಕ್ ಕಳವು ಮಾಡುತ್ತಿದ್ದುದಾಗಿ ಎಂಬುದು ಬೆಳಕಿಗೆ ಬಂದಿದೆ. ಆರೋಪಿಯಿಂದ 9 .50 ಲಕ್ಷ ರೂ. ಮೌಲ್ಯದ ಬುಲೆಟ್, ಪಲ್ಸರ್, ಹೊಂಡಾ ಡಿಯೋ ಸೇರಿದಂತೆ ವಿವಿಧ ಮಾದರಿಯ 14 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂಬೂರ್ ನಿವಾಸಿಯಾಗಿರುವ ಆರೋಪಿ ನಿಯಾಜ್, ಜುಲ್ಫಿàಕರ್ ಅಲಿ ಹಾಗೂ ಮತ್ತೂಬ್ಬ ಆರೋಪಿ ಜತೆಗೆ ಕಾರಿನಲ್ಲಿ ನಗರಕ್ಕೆ ಬಂದು, ಮನೆಯ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕದ್ದೊಯ್ಯುತ್ತಿದ್ದ. ಬೈಕ್‌ಗಳನ್ನು ನಗರದಲ್ಲೇ ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ಎಚ್‌ಎಸ್‌ಆರ್ ಲೇಔಟ್ ಹಾಗೂ ಪರಪ್ಪನ ಅಗ್ರಹಾರ ಲೇಔಟ್ ಠಾಣೆಗಳ ವ್ಯಾಪ್ತಿಯ ಬೈಕ್ ಕಳವು ಪ್ರಕರಣಗಳ ಮೋಸ್ಟ್ ವಾಂಟೆಡ್ ಆರೋಪಿಯಾಗಿರುವ ಜುಲ್ಫಿàಕರ್ ಅಲಿ, ನಿಯಾಜ್‌ನ ಅಣ್ಣನ ಮಗ. ಬೈಕ್ ಕಳವಿಗೆಂದೇ ತಂಡ ಕಟ್ಟಿಕೊಂಡಿರುವ ಜುಲ್ಫಿಕರ್‌ನಿಂದ, ನಿಯಾಜ್ ಈ ಕಸುಬು ಕಲಿತಿದ್ದ. ಬೈಕ್ ಮಾರಿ ಬಂದ ಹಣವನ್ನೆಲ್ಲಾ ಜೂಜಾಡಿ ಕಳೆಯುತ್ತಿದ್ದ.
ಕೆ.ಆರ್.ಪುರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತಮಿಳುನಾಡಿನ ಅಂಬೂರ್‌ಗೆ ತೆರಳಿದಾಗ, ಆರೋಪಿಗಳ ಅಸಲೀಯತ್ತು ಗೊತ್ತಾಗಿದೆ. ಈ ತಂಡದಲ್ಲಿ ಬಹುತೇಕ ಸಂಬಂಧಿಕರೇ ಸೇರಿಕೊಂಡಿದ್ದಾರೆ. ಕಳವು ಬೈಕ್‌ಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಮೊದಲೇ ಹುಡುಕಿಕೊಳ್ಳುತ್ತಿದ್ದ ಆರೋಪಿಗಳು,
ನಗರಕ್ಕೆ ಬಂದು ಕೋಲಾರ, ಶ್ರೀನಿವಾಸಪುರ, ಕೆ.ಆರ್.ಪುರ ಸುತ್ತಲಿನ ಪ್ರದೇಶಗಳಲ್ಲಿ ಬೈಕ್ ಕದ್ದು ಮಾರಾಟ ಮಾಡುತ್ತಿದ್ದರು. ಒಬ್ಬ ಆರೋಪಿ ಜೈಲು ಸೇರಿದರೆ ಉಳಿದವರು ಆತನನ್ನು ಜೈಲಿನಿಂದ ಬಿಡಿಸಿಕೊಂಡು ಬರುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.