Advertisement

ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದವನ ಸೆರೆ

11:34 AM Dec 28, 2018 | |

ಬೆಂಗಳೂರು: ತಾನು ಮುಖ್ಯಮಂತ್ರಿಗಳ ಆಪ್ತ ಸಹಾಯಕನಾಗಿದ್ದು, ಹಲವು ಸಚಿವರ ಜತೆ ಒಡನಾಟವಿದೆ ಎಂದು ಹೇಳಿಕೊಂಡು ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಉದ್ಯೋಗಕಾಂಕ್ಷಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ)ನನ್ನು ಸಿಸಿಬಿಯ ವಂಚನೆ ಮತ್ತು ದುರುಪಯೋಗ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಆರ್‌.ಆರ್‌.ನಗರದ ಬಿಇಎಂಎಲ್‌ ಲೇಔಟ್‌ ನಿವಾಸಿ ಜೆ.ಮಂಜುನಾಥ್‌ (36) ಬಂಧಿತ. ಆರೋಪಿ ಕೆಲ ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದು, ಈ ಹಿಂದೆ ಈತನ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಜೈಲು ಸೇರಿದ್ದ. ಜಾಮೀನು ಪಡೆದು ಹೊರ ಬಂದಿರುವ ಆರೋಪಿ ಮತ್ತೆ ಅದೇ ಕೃತ್ಯದಲ್ಲಿ ತೊಡಗಿ, ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.

ಪಶು ಸಂಗೋಪನಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್‌, ಸಭೆ-ಸಮಾರಂಭಗಳಲ್ಲಿ ಮುಖ್ಯಮಂತ್ರಿಗಳು, ಪ್ರಭಾವಿ ಸಚಿವರು, ರಾಜಕೀಯ ಮುಖಂಡರು ಮತ್ತು ರಾಜಕೀಯ ಪಕ್ಷಗಳ ನಾಯಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಪೋಟೋ ತೆಗೆದುಕೊಳ್ಳುತ್ತಿದ್ದ.

ಇದನ್ನೇ ಬಂಡವಾಳ ಮಾಡಿಕೊಂಡು ತನಗೆ ಪರಿಚಯ ಇರುವ ವ್ಯಕ್ತಿಗಳ ಮೂಲಕ ಸರ್ಕಾರಿ ಉದ್ಯೋಗಕಾಂಕ್ಷಿಗಳನ್ನು ಸಂಪರ್ಕಿಸಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆಯುತ್ತಿದ್ದ. ಬಳಿಕ ಕೆಲಸವನ್ನು ಕೊಡಿಸದೆ, ಹಣವನ್ನು ಸಹ ವಾಪಸ್‌ ಕೊಡದೆ ವಂಚಿಸುತ್ತಿದ್ದ. ಈತನ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಪ್ರಕರಣ ಗಂಭೀರತೆ ಅರಿತ ನಗರ ಪೊಲೀಸ್‌ ಆಯುಕ್ತರು ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದರು ಪೊಲೀಸರು ಹೇಳಿದರು.

ಸರ್ಕಾರಿ ನೌಕರರ ಸಂಘಟನೆ ಉಪಾಧ್ಯಕ್ಷ: ಆರೋಪಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿದ್ದು, ಮುಖ್ಯಮಂತ್ರಿಗಳು ಸೇರಿ ಎಲ್ಲ ಸಚಿವರು, ಸರ್ಕಾರಿ ಅಧಿಕಾರಿಗಳು ಆಪ್ತರಾಗಿದ್ದಾರೆ ಎಂದು ಎಲ್ಲರ ಬಳಿ ಹೇಳಿಕೊಳ್ಳುತ್ತಿದ್ದ. ಅಲ್ಲದೆ, ತನಗೆ ಪರಿಚಯ ಇರುವ ಸರ್ಕಾರಿ ನೌಕರರು, ಗುತ್ತಿಗೆ ನೌಕರರಿಗೆ ನೀವು ಕೇಳಿದ ಕಡೆ ವರ್ಗಾವಣೆ ಮಾಡಿಸಿಕೊಡುತ್ತೇನೆ.

Advertisement

ಕೆಲಸ ಕಾಯಂ ಮಾಡಿಸುತ್ತೇನೆ ಎಂದು ಸುಳ್ಳು ಹೇಳಿ ಹಣ ಪಡೆಯುತ್ತಿದ್ದ. ಆದರೆ, ಯಾವುದೇ ಪ್ರಯತ್ನ ಮಾಡುತ್ತಿರಲಿಲ್ಲ. ಒಂದು ವೇಳೆ ಸಾಮಾನ್ಯ ವರ್ಗಾವಣೆಯಾದರೆ, ತಾನೇ ಮಾಡಿಸಿದ್ದು ಎಂದು ಹೇಳಿಕೊಂಡು ಇನ್ನಷ್ಟು ಹಣ ಪಡೆಯುತ್ತಿದ್ದ. ಇಲ್ಲವಾದರೆ, ತಲೆಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಚಿನ್ನಾಭರಣ ಅಡವಿಟ್ಟು ಹಣ ಕೊಟ್ಟಿದ್ದರು: ಆರೋಪಿ ಇದುವರೆಗೂ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಒಂದೂವರೆ ಕೋಟಿಗೂ ಅಧಿಕ ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇತ್ತೀಚೆಗೆ ವಿಧಾನಸೌಧದಲ್ಲಿರುವ ಇಲಾಖೆಯೊಂದರಲ್ಲಿ ಗುತ್ತಿಗೆ ನೌಕರರಾಗಿರುವ ಮಹಿಳೆಯೊಬ್ಬರಿಗೆ ಆರೋಪಿ ಕೆಲಸ ಕಾಯಂ ಮಾಡಿಸಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

ಈತನ ಮಾತು ನಂಬಿದ್ದ ಮಹಿಳೆ ತನ್ನ ಹಾಗೂ ಸಂಬಂಧಿಗಳ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಆರೋಪಿಗೆ ಹಣ ಕೊಟ್ಟಿದ್ದರು. ಆದರೆ, ನಿರೀಕ್ಷೆಯಂತೆ ಕೆಲಸ ಕಾಯಂ ಮಾಡಿಸಿರಲಿಲ್ಲ. ಈ ಸಂಬಂಧ ಮಹಿಳೆ ಆರೋಪಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದರು.

ಎಚ್ಚರಿಕೆ ನೀಡಿದ್ದ ಪೊಲೀಸ್‌ ಅಧಿಕಾರಿ: ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭವೊಂದಕ್ಕೆ ಹೋಗಿದ್ದರು. ಇದೇ ಕಾರ್ಯಕ್ರಮಕ್ಕೆ ಆರೋಪಿ ಕೂಡ ಹೋಗಿದ್ದು, ಕುಮಾರಸ್ವಾಮಿ ಅವರ ಸಮೀಪ ಬಂದು ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದ. ಇದನ್ನು ಗಮನಿಸಿದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಆರೋಪಿ ಮಂಜುನಾಥ್‌ನನ್ನು ಪಕ್ಕಕ್ಕೆ ಎಳೆದು ಮತ್ತೂಮ್ಮೆ ಹೋಗದಂತೆ ಎಚ್ಚರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next