ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿರುವ ಬೈಕ್ ಖರೀದಿಸಿ ಮಾಲೀಕರಿಗೆ ಹಣವಿಲ್ಲದ ಖಾತೆಯ ಚೆಕ್ ಕೊಟ್ಟು ವಂಚಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿ ವಿಲ್ಸನ್ ಗಾರ್ಡನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತಮಿಳುನಾಡಿನ ತಿರುವಣ್ಣಮಲೈ ನಿವಾಸಿ ಭಾಸ್ಕರ್ (32) ಬಂಧಿತ. ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿರುವ ಬೈಕ್ ಮಾಲೀಕರಿಗೆ ಕರೆ ಮಾಡಿ, ಬೈಕ್‌ಖರೀದಿ ಕುರಿತು ಚರ್ಚಿಸಿ ಮಾತುಕತೆಗೆ ದಿನಾಂಕ ನಿಗದಿ ಮಾಡಿಕೊಳ್ಳುತ್ತಿದ್ದ ಭಾಸ್ಕರ್, ತಮಿಳುನಾಡಿನಿಂದ ನಗರಕ್ಕೆ ಬರುತ್ತಿದ್ದ.
ನಂತರ ಬೈಕ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಪರಿಶೀಲಿಸಿ, ವ್ಯವಹಾರ ಪೂರ್ಣಗೊಂಡ ಬಳಿಕ ನನ್ನ ಬಳಿ ದೊಡ್ಡ ಮೊತ್ತದ ಹಣವಿಲ್ಲ. ಹೀಗಾಗಿ ಚೆಕ್ ನೀಡುತ್ತಿದ್ದೇನೆ ಎಂದು ಅಸಲಿ ಚೆಕ್ ಹಾಗೂ ಆಧಾರ್ ಕಾರ್ಡ್ ತೋರಿಸುತ್ತಿದ್ದ. ಇದನ್ನು ನಂಬಿದ ಮಾಲೀಕರು ಚೆಕ್ ಪಡೆಯಲು ಒಪ್ಪಿದರೆ ಚೆಕ್ ನೀಡಿ ಬೈಕ್ ಕೊಂಡೊಯ್ಯುತ್ತಿದ್ದ. ಇತ್ತ ಮಾಲೀಕರು ಚೆಕ್ ಬ್ಯಾಂಕ್‌ಗೆ ಹಾಕಿದಾಗ ಬೌನ್ಸ್ ಆಗುತ್ತಿತ್ತು.
ಮಾಲೀಕರು ಭಾಸ್ಕರ್‌ಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿರುತ್ತಿತ್ತು. ಈ ರೀತಿ ವಂಚಿಸಿ ಪಡೆದ ಬೈಕ್‌ಗಳನ್ನು ನಗರದ ವಿವಿಪುರದಲ್ಲಿರುವ ಸೆಕೆಂಡ್ ಹ್ಯಾಂಡ್ ಬೈಕ್ ಅಂಗಡಿಗೆ ಸಿಕ್ಕಷ್ಟು ಮೊತ್ತಕ್ಕೆ ಮಾರಾಟ ಮಾಡಿ ಆರೋಪಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಇದುವರೆಗೂ ಮೂರು ಬೈಕ್‌ಗಳನ್ನು ಇದೇ ರೀತಿ ಕಳವು ಮಾಡಿ ನಾಪತ್ತೆಯಾಗಿದ್ದ. ಈ ಸಂಬಂಧ ಈತನ ವಿರುದ್ಧ ಮಡಿವಾಳ, ಮಾರತ್‌ಹಳ್ಳಿ ಮತ್ತು ವಿಲ್ಸನ್‌ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಕ್ಕಿದ್ದು ಹೇಗೆ?: ಇತ್ತೀಚೆಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮಧು ಎಂಬುವರು ಭಾಸ್ಕರ್ ವಂಚನೆ ಬಗ್ಗೆ ದೂರು ನೀದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರೇ, ಬೈಕ್ ಮಾರಾಟಕ್ಕಿದೆ ಎಂದು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಕೊಟ್ಟಿದ್ದು, ಇದನ್ನು ನೋಡಿದ ಭಾಸ್ಕರ್ ಎಂದಿನಂತೆ ಕರೆ ಮಾಡಿದ್ದ. ಕೊನೆಗೆ ಮಡಿವಾಳ ಬಳಿ ಬೈಕ್ ಖರೀದಿಗೆ ಬಂದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.