ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಗ್ಗೆ ವಿದ್ಯಾರ್ಥಿನಿಯೊಬ್ಬರು ನೀಡಿದ ಸುಳಿವಿನ ಮೇರೆಗೆ ಮೂವರು ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್, ಶಿವಕುಮಾರ್, ಸೈಯದ್ ಅಮಾನುಲ್ಲಾ ಬಂಧಿತರು. ಆರೋಪಿಗಳಿಂದ 6.5 ಕೆ.ಜಿ ಗಾಂಜಾ ಹಾಗೂ ಗಾಂಜಾ ಪೂರೈಕೆಗೆ ಬಳಸುತ್ತಿದ್ದ ಆಟೋವೊಂದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನ ಬಳಿ ಗಾಂಜಾ ಮಾರಾಟದ ಬಗ್ಗೆ ಮಾಹಿತಿಯಿತ್ತು. ಹೀಗಾಗಿ ಗಾಂಜಾ ಮಾರಾಟದ ಬಗ್ಗೆ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಲ್ಲಿ ಕೋರಿದ್ದೆವು. ಅದರಂತೆ ಕೆಲ ದಿನಗಳ ಹಿಂದೆ ಕಾಲೇಜು ಸಮೀಪವೇ ಆಟೋದಲ್ಲಿ ಬಂದು ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯೊಬ್ಬರು ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ಆರೋಪಿಗಳ ದೂರವಾಣಿ ನಂಬರ್ ಸಂಗ್ರಹಿಸಿ ಗಿರಾಕಿಗಳಂತೆ ಮಾತನಾಡಿ ಗಾಂಜಾ ಬೇಕು ಎಂದು ಕೇಳಿದ್ದೆವು. ಅದರಂತೆ, ಮಾರಾಟ ಮಾಡಲು ಬಂದಿದ್ದ ಮೂವರನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಐಟಿ ಕಂಪನಿಯ ಪಾರ್ಟಿಗಳಿಗೆ ಸರಬರಾಜು: ಆರೋಪಿಗಳು ಚಿಂತಾಮಣಿ ಹಾಗೂ ವಿಶಾಖಪಟ್ಟಣದ ಗಾಂಜಾ ಸರಬರಾಜುದಾರರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದರು. ಬಳಿಕ ಅವುಗಳನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ತುಂಬಿಸಿ ನೂರು ಗ್ರಾಂ ಪೊಟ್ಟಣಕ್ಕೆ ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ವೀಕೆಂಡ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಮೀನು ಪಡೆದು ಮತ್ತೆ ಹಳೆ ಚಾಳಿ!: ಮೂಲತಃ ಕೊಳ್ಳೆಗಾಲ ತಾಲೂಕಿನ ಆರೋಪಿ ಶ್ರಿನಿವಾಸ್ ಹಲವು ವರ್ಷಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತನ ವಿರುದ್ಧ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿಯೇ ಮೈಸೂರಿನಲ್ಲಿ ಮೂರು ಹಾಗೂ ಬೆಂಗಳೂರಿನ ಇನ್ನಿತರೆ ಪೊಲೀಸ್ ಠಾಣೆಗಳಲ್ಲಿ ಮೂರು ಕೇಸ್‌ಗಳು ದಾಖಲಾಗಿವೆ. ಈ ಹಿಂದೆಯೂ ಬಂಧಿತನಾಗಿದ್ದ ಶ್ರೀನಿವಾಸ್ ಬಳಿ 26 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿತ್ತು. ಜಾಮೀನು ಪಡೆದು ಮತ್ತೆ ಗಾಂಜಾ ಪೂರೈಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಹೇಳಲಾಗಿದೆ.