Advertisement

ನಕಲಿ ಅಂಕಪಟ್ಟಿ ಸೂತ್ರದಾರರ ಸೆರೆ

12:43 PM Jan 27, 2018 | |

ಬೆಂಗಳೂರು: ನಗರದಲ್ಲಿ ಮತ್ತೂಂದು ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿದ್ದು, ಈ ಸಂಬಂಧ ಮಹಾಲಕ್ಷ್ಮೀ ಲೇಔಟ್‌ನ ಇಬ್ಬರು ಆರೋಪಿಗಳನ್ನು ಸಿಸಿಬಿ ವಿಶೇಷ ತಂಡ ಬಂಧಿಸಿದೆ.

Advertisement

ಶ್ರೀನಿವಾಸರೆಡ್ಡಿ (39) ಮತ್ತು ಸುನಿಲ್‌ ಕುಮಾರ್‌(36) ಬಂಧಿತರು. ಇವರಿಂದ ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿಗೆ ಸಂಬಂಧಿಸಿದ 1,500ಕ್ಕೂ ಹೆಚ್ಚು ಅಂಕಪಟ್ಟಿಗಳು, ಅಂಕಪಟ್ಟಿ ಸಿದ್ಧಪಡಿಸಲು ಬಳಲುತ್ತಿದ್ದ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು, ಜೆರಾಕ್ಸ್‌ ಯಂತ್ರ ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಮಹಾಲಕ್ಷ್ಮೀಪುರದ 12 ನೇ ಕ್ರಾಸ್‌ನಲ್ಲಿ ಶ್ರೀವೆಂಕಟೇಶ್ವರ ಇನ್ಸ್‌ಟಿಟ್ಯೂಟ್‌ ಆಫ್ ಎಜುಕೇಷನ್‌ ಎಂಬ ಕಚೇರಿ ತೆರೆದು ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರು. ಬಳಿಕ ಗ್ರಾಹಕರ ಬೇಡಿಕೆಯಂತೆ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಹಾಗೂ ಪ್ರತಿಷ್ಠಿತ ಶಾಲಾ, ಕಾಲೇಜುಗಳ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳು, ವರ್ಗಾವಣೆ ಪತ್ರಗಳನ್ನು ಸಿದ್ಧಪಡಿಸುತ್ತಿದ್ದರು.

ವಿಶ್ವವಿದ್ಯಾಲಯಗಳ ಹೆಸರಿಗನುಗುಣವಾಗಿ ದರ ನಿಗದಿಪಡಿಸುತ್ತಿದ್ದ ಆರೋಪಿಗಳು ಇದುವರೆಗೂ ಸಾವಿರಾರು ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯ ಹಾಗೂ ವಿದ್ಯಾಸಂಸ್ಥೆಗಳ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರಕರಣದ ಕಿಂಗ್‌ಪಿನ್‌ ಶ್ರೀನಿವಾಸರೆಡ್ಡಿ, ಮಹಾಲಕ್ಷ್ಮೀಪುರಂನಲ್ಲಿ ಮುಖ್ಯ ಕಚೇರಿ ಹೊಂದಿದ್ದು, ಹೆಬ್ಟಾಳ, ರಾಜಾಜಿನಗರ,ರಾಜರಾಜೇಶ್ವರಿನಗರ, ಇಂದಿರಾನಗರ ಹಾಗೂ ನಗರದ ಇತರೆಡೆ ಶಾಖೆಗಳನ್ನು ನಡೆಸುತ್ತಿದ್ದು, ಆನ್‌ಲೈನ್‌ ಹಾಗೂ ದಿನಪತ್ರಿಕೆಗಳಲ್ಲಿ ದೂರಶಿಕ್ಷಣ ಪದವಿ ಶಿಕ್ಷಣ ನಡೆಸುತ್ತಿರುವುದಾಗಿ ಜಾಹಿರಾತು ನೀಡುತ್ತಿದ್ದರು. ಇದನ್ನು ಗಮನಿಸಿ ಕಚೇರಿಗೆ ಬರುತ್ತಿದ್ದ ಗ್ರಾಹಕರಿಗೆ ಪರೀಕ್ಷೆ ಬರೆಯದೆ ಪದವಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದರು.

Advertisement

ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಈ ಹಿಂದೆಯೇ ವ್ಯಾಸಂಗ ಮಾಡಿರುವಂತೆ ಅಂದರೆ ಕಳೆದ ವರ್ಷಗಳ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಹೀಗೆ ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಆರೋಪಿಗಳಿಂದ ಅಂಕಪಟ್ಟಿ ಖರೀದಿ ಮಾಡಿದ್ದು, ಕೆಲವರು ಖಾಸಗಿ ಹಾಗೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಕೆಲವರು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಬಂಧಿತರು ಕೆಲ ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದು, ಕರ್ನಾಟಕ ಮಾತ್ರವಲ್ಲದೇ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೂ ನಕಲಿ ಅಂಕಪಟ್ಟಿ ಮಾರಾಟ ಮಾಡಿರುವ  ಮಾಹಿತಿಯಿದೆ ಎಂದು ಸಿಸಿಬಿ ಪೊಲೀಸ್‌ ಮೂಲಗಳು ತಿಳಿಸಿವೆ.

10ಸಾವಿರದಿಂದ 2 ಲಕ್ಷವರೆಗೆ: ಆರೋಪಿಗಳು ನಗರದಲ್ಲಿ ಐದಾರು ಶಾಖೆಗಳನ್ನು ಹೊಂದಿದ್ದು, ಎಸ್‌ಎಸ್‌ಎಲ್‌ಸಿಯಿಂದ ಪದವಿವರೆಗೆ ಒಂದು ದರ, ಪದವಿಯಿಂದ ಪಿಎಚ್‌ಡಿವರಗೆ ಮತ್ತೂಂದು ದರ ನಿಗದಿ ಪಡಿಸಿ ಅಂಕ ಪಟ್ಟಿಗಳನ್ನು ಸಿದ್ದಪಡಿಸುತ್ತಿದ್ದರು. ಹೀಗೆ 10 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ದರ ನಿಗದಿ ಪಡಿಸಿ ಮಾರಾಟ ಮಾಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

2017ರಲ್ಲಿ ಸಿಸಿಬಿ ಡಿಸಿಪಿ ಆನಂದ್‌ ಕುಮಾರ್‌ ನೇತೃತ್ವದ ತಂಡ ನಕಲಿ ಅಂಕಪಟ್ಟಿ ಸಿದ್ಧಪಡಿಸಿ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಮಧ್ಯಪ್ರದೇಶ, ಮುಂಬೈ ಹಾಗೂ ಕರ್ನಾಟಕ ಇಬ್ಬರು ಸೇರಿದಂತೆ ಐವರನ್ನು ಬಂಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next