Advertisement

ಪ್ರಿಯತಮೆಗಾಗಿ ಪರಪುರುಷರ ವಂಚಿಸಿದವ ಸೆರೆ

12:14 PM Apr 11, 2018 | Team Udayavani |

ಬೆಂಗಳೂರು: ತನ್ನ ಪ್ರಿಯತಮೆಗೆ ಉಡುಗೊರೆ ಕೊಡಿಸುವ ಉದ್ದೇಶದಿಂದ ಡೇಟಿಂಗ್‌ ವೆಬ್‌ಸೈಟ್‌ ಮೂಲಕ ಹುಡುಗಿ ಹೆಸರಿನಲ್ಲಿ ಹುಡುಗರನ್ನು ಡೇಟಿಂಗ್‌ಗೆ ಆಹ್ವಾನಿಸಿ ಹಣ ವಸೂಲಿ ಮಾಡುತ್ತಿದ್ದ ವಂಚಕನನ್ನು ಸಿಸಿಬಿ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Advertisement

ವೈಟ್‌ಫೀಲ್ಡ್‌ನ ವಿನಾಯಕ ಲೇಔಟ್‌ ಇಮ್ಮಡಿಹಳ್ಳಿ ಮುಖ್ಯರಸ್ತೆಯ ನಿವಾಸಿ ಸಾಗರ್‌ ರಾವ್‌ (25) ಬಂಧಿತ. ಯುವಕನೊಬ್ಬನಿಗೆ ಈತ 71 ಸಾವಿರ ರೂ. ವಂಚಿಸಿದ ಬಗ್ಗೆ ದಾಖಲಾದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ಅನೇಕರಿಗೆ ವಂಚಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೇಟಿಂಗ್‌ ವೆಬ್‌ಸೈಟ್‌ನಲ್ಲಿ ಯುವತಿಯ ಹೆಸರಿನಲ್ಲಿ ನೊಂದಣಿಯಾಗಿ ನಕಲಿ ಹೆಸರು ಮತ್ತು ನಕಲಿ ಫೋಟೋ ಹಾಕುತ್ತಿದ್ದ ಆರೋಪಿ ಆನ್‌ಲೈನ್‌ನಲ್ಲಿ ಸಂಪರ್ಕಕ್ಕೆ ಬರುವ ಯುವಕರ ಜತೆ ಚಾಟ್‌ ಮಾಡಿ ಡೇಟಿಂಗ್‌ಗೆ ಆಹ್ವಾನಿಸುತ್ತಿದ್ದ. ಇದಕ್ಕೆ ಒಪ್ಪಿದ ಯುವಕರಿಗೆ ಮುಂಗಡ ಹಣ ನೀಡಬೇಕು. ಅನಂತರ ಖಾಸಗಿಯಾಗಿ ಭೇಟಿಯಾಗುತ್ತೇನೆ ಎಂದು ಹೇಳಿ ತನ್ನ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಿಕೊಳ್ಳುತ್ತಿದ್ದ.

ಹಣ ಖಾತೆಗೆ ಜಮೆಯಾದ ಬಳಿಕ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಿ.ಕಾಂ ಪದವೀಧರನಾಗಿದ್ದು, ನಿರುದ್ಯೋಗಿಯಾಗಿದ್ದಾನೆ. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಈ ಕೃತ್ಯಕ್ಕೆ ಇಳಿದಿದ್ದ. ಫ್ರೀ ಡೇಟಿಂಗ್‌ ಡಾಟ್‌ ಕಾಮ್‌’ ವೆಬ್‌ಸೈಟ್‌ ಹಾಗೂ ಫ್ರೀ ಡೇಟಿಂಗ್‌ ಆ್ಯಪ್‌ ಬಳಕೆ ಮೂಲಕ ವಂಚಿಸುತ್ತಿದ್ದ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಉತ್ತರ ಭಾರತದ ಯುವತಿಯರ ಹೆಸರಿನಲ್ಲಿ, ಸುಂದರವಾದ ಯುವತಿಯ ಫೋಟೋ ಹಾಕಿ ಯುವಕರನ್ನು ಆಕರ್ಷಿಸುತ್ತಿದ್ದ. ಹೊಸದಾಗಿ ಡೇಟಿಂಡ್‌ ವೆಬ್‌ಸೈಟಿಗೆ ಬರುವ ಯುವಕರಿಗೆ ಆರಂಭದ ಕೆಲವು ದಿನ ಆನ್‌ಲೈನ್‌ ಚಾಟ್‌ ಮಾಡುತ್ತಿದ್ದ.

Advertisement

ಬಳಿಕ ಸಲುಗೆ ಬೆಳೆಸಿ ಚಾಟ್‌ ಮಾಡುವ ಯುವಕರ ಮೊಬೈಲ್‌ ನಂಬರ್‌ ಪಡೆದು, ವಾಟ್ಸ್‌ ಆ್ಯಪ್‌ ಚಾಟ್‌ ಮಾಡುತ್ತಿದ್ದ. ಫೋನ್‌ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ನೇರವಾಗಿ ಭೇಟಿಯಾದಾಗ ಮಾತ್ರ ಮಾತನಾಡುತ್ತೇನೆ. ಇಲ್ಲದಿದ್ದರೆ ಬರೇ ಚಾಟಿಂಗ್‌ ಸಾಕು ಎಂದು ಹೇಳುತ್ತಿದ್ದ. ಯುವಕರು ಭೇಟಿಗೆ ಒಪ್ಪಿದರೆ ಮೊದಲು ಬ್ಯಾಂಕ್‌ ಖಾತೆಗೆ ಹಣ ಹಾಕಿ ಎಂದು ಹೇಳುತ್ತಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ನಾನಾ ಹೆಸರಿನಲ್ಲಿ ವಂಚನೆ: ಶಿಲ್ಪಾ, ಸೋನಿಯಾ ಜೈನ್‌, ಮನೀಷಾ ಜೈನ್‌ ಎಂಬ ನಾನಾ ಹೆಸರುಗಳಿಂದ ವಂಚಿಸುತ್ತಿದ್ದ ಸಾಗರ್‌ ರಾವ್‌, ಅದಕ್ಕೆ ತಕ್ಕಂತೆ ಪ್ರೋಫೈಲ್‌ ಪೋಟೋಗಳನ್ನು ಹಾಕುತ್ತಿದ್ದ. ಯುವತಿಯಂತೆ ನಟಿಸಿ ಇದುವರೆಗೂ ಸುಮಾರು 12 ಯುವಕರಿಗೆ ವಂಚಿಸಿದ್ದಾನೆ. ಇತ್ತೀಚೆಗೆ ಆರೋಪಿ ಯುವಕನೊಬ್ಬನಿಗೆ 71 ಸಾವಿರ ರೂ. ವಂಚಿಸಿದ್ದ. ಈ ಸಂಬಂಧ ದಾಖಲಾದ ದೂರಿನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲವೂ ಐಶಾರಾಮಿ ಗಿಫ್ಟ್ಗಾಗಿ: ಸಾಗರ್‌ರಾವ್‌ ತಾನೂ ಪ್ರೀತಿಸುತ್ತಿದ್ದ ಯುವತಿಗೆ ಐಷಾರಾಮಿ ಉಡುಗೊರೆಗಳನ್ನು ತಂದು ಕೊಡಲು ಈ ರೀತಿ ಮಾಡುತ್ತಿದ್ದ. ಯುವಕರಿಗೆ ವಂಚಿಸಿದ ಹಣವನ್ನು ಬೇರಾವುದಕ್ಕೂ ಬಳಸದೆ ತನ್ನ ಪ್ರಿಯತಮೆಗೆ ಉಡುಗೊರೆ ಕೊಡುವುದಕ್ಕಾಗಿ ಮತ್ತು ಆಕೆಯನ್ನು ಸುತ್ತಾಡಿಸುವುದಕ್ಕಾಗಿಯೇ ಮೀಸಲಿಡುತ್ತಿದ್ದ. ಮಾಲ್‌, ಸಿನಿಮಾ ಎಂದೆಲ್ಲ ಪ್ರಿಯತಮೆಯನ್ನು ಕರೆದೊಯ್ದು ಹಣ ಖರ್ಚು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next