Advertisement

ಸಿಬಿಐ ಅಧಿಕಾರಿಗಳ ಸೋಗಿನ ದರೋಡೆಕೋರರ ಸೆರೆ

11:42 AM Jul 19, 2017 | Team Udayavani |

ಮೈಸೂರು: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಹಾಡಹಗಲೇ ಖಾಸಗಿ ಕಾರ್ಖಾನೆಯ ಕಚೇರಿಗೆ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದ 8 ಮಂದಿ ದರೋಡೆಕೋರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 8.69 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಆರೋಪಿಗಳ 5 ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬೆಂಗಳೂರು ಮೂಲದ ಅಪ್ಸರ್‌ ಪಾಷ (52), ಜಾಕೀರ್‌(26) ಹಾಗೂ ಸೈಯದ್‌ ಶಬ್ಬೀರ್‌(45), ಇಸ್ಮಾಯಿಲ್‌ ಪಾಷ (33), ಸೈಯದ್‌ ಅಲೀಂ (23), ತಬ್ರೇಜ್‌ ಪಾಷ (25), ಆಸೀಫ್(30) ಹಾಗೂ ಪ್ರಮುಖ ಆರೋಪಿ ಖಲೀಮ್‌(35) ಎಂಬುವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನೆ ವಿವರ: ಜೂ.23ರಂದು ಬೆಳಗ್ಗೆ 11.30ರ ಸುಮಾರಿಗೆ ಮೈಸೂರಿನ ಗೋಕುಲಂ 3ನೇ ಹಂತದಲ್ಲಿರುವ ಖ್ಯಾತಿ ಸ್ಟೀಲ್‌ ಪ್ರ„.ಲಿ. ಕಚೇರಿಗೆ ನುಗ್ಗಿದ 8 ಮಂದಿ ಆರೋಪಿಗಳು ತಾವು ಸಿಬಿಐನಿಂದ ಬಂದಿರುವುದಾಗಿ ತಿಳಿಸಿ ಕಚೇರಿಯ ಬೀರುವಿನ ಕೀ ನೀಡುವಂತೆ ಅಲ್ಲಿನ ಸಿಬ್ಬಂದಿಯನ್ನು ಕೇಳಿದ್ದಾರೆ.

ಆದರೆ ಈ ವೇಳೆ ಕಚೇರಿಯಲ್ಲಿದ್ದ ಸಿಬ್ಬಂದಿ ವಿನೋದ್‌ಕುಮಾರ್‌ ಐಡಿ ಕಾರ್ಡ್‌ ತೋರಿಸುವಂತೆ ಕೇಳಿದಾಗ ಅವರ ಮೇಲೆ ಹಲ್ಲೆ ನಡೆಸಿ ಬೀರುವಿನಲ್ಲಿದ್ದ 29.66 ಲಕ್ಷ ರೂ.ನಗದು, ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಹಾರ್ಡ್‌ಡಿಸ್ಕ್ ಹಾಗೂ ಕಚೇರಿ ಸಿಬ್ಬಂದಿಯ ಮೊಬೈಲ್‌ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಚೇರಿ ಸಿಬ್ಬಂದಿ ವಿನೋದ್‌ಕುಮಾರ್‌ ವಿ.ವಿ.ಪುರಂ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು.

ಪೆರೋಲ್‌ ಮೇಲೆ ಬಂದು ಹೋದ: ಬಂಧಿತರ ಪೈಕಿ ಪ್ರಮುಖ ಆರೋಪಿ ಖಲೀಮ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಪೆರೋಲ್‌ ಮೇಲೆ ಹೊರ ಬಂದಿದ್ದ ಸಂದರ್ಭದಲ್ಲಿ ಈ ಕೃತ್ಯವೆಸಗಿ ಬಳಿಕ ಜೈಲಿಗೆ ಹಿಂತಿರುಗಿದ್ದ.

Advertisement

ಒಳಗಿನವರು ಭಾಗಿ?: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇವರುಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ಪ್ರಕರಣದಲ್ಲಿ ಒಳಗಿನವರು ಸಹ ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಡಿಸಿಪಿಗಳಾದ ಡಾ.ಎಚ್‌.ಟಿ.ಶೇಖರ್‌, ವಿಕ್ರಂ ಅಮಟೆ  ಹಾಜರಿದ್ದರು.

ಮೊಬೈಲ್‌ ಕಳ್ಳರ ಬಂಧನ
ನಗರದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮೊಬೈಲ್‌ ಕಳವು ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಮೊಬೈಲ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೈಸೂರಿನ ಮೊಹಮ್ಮದ್‌ ಕಾಶಿಪ್‌ ಷರೀಫ್(34), ಮೊಹಮ್ಮದ್‌ ಶೋಹೇಬ್‌(29) ಹಾಗೂ ಅಸ್ಮಾ ಬಾನು(25) ಅವರನ್ನು ಬಂಧಿಸಿ, ಇವರಿಂದ 2.5 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 22 ಮೊಬೈಲ್‌ಗ‌ಳನ್ನು ಉದಯಗಿರಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿದ್ದಾರ್ಥನಗರದ ವಿನಯ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ನಜ‚ರ್‌ಬಾದ್‌ ಪೊಲೀಸರು ರೆಹಮಾನ್‌ ಷರೀಪ್‌(24), ನೌಷಾದ್‌(19) ಹಾಗೂ ನವೀದ್‌ ಪಾಷ(21) ಅವರುಗಳನ್ನು ಬಂಧಿಸಿ, 1.12 ಲಕ್ಷ ರೂ. ಮೌಲ್ಯದ 8 ಮೊಬೈಲ್‌ ಹಾಗೂ 1 ಬೈಕ್‌ ವಶಕ್ಕೆ ಪಡೆದಿದ್ದಾರೆ. ನಗರದ ಬಿಗ್‌ಬಜಾರ್‌ನಲ್ಲಿ ವ್ಯಾಪಾರಕ್ಕೆಂದು ಇಟ್ಟಿದ್ದ ಐ ಪೋನ್‌ ಕಳವು ಮಾಡಿದ್ದ ಹೇಮಂತ್‌(26) ಎಂಬಾತನನ್ನು ಲಕ್ಷ್ಮೀಪುರಂ ಪೊಲೀಸರು ಬಂಧಿಸಿದ್ದು, ಈತನಿಂದ 30 ಸಾವಿರ ರೂ. ಮೌಲ್ಯದ ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಐಎಂಇಐ ಸಂಖ್ಯೆ ಬದಲು: ವಿವಿಧ ಕಡೆಗಳಲ್ಲಿ ಮೊಬೈಲ್‌ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಕಳವು ಮಾಡಿದ ಮೊಬೈಲ್‌ಗ‌ಳ ಐಎಂಇಐ ಸಂಖ್ಯೆ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದರು. 

ನಗರದಲ್ಲಿ ಸೈಬರ್‌ ಕ್ರೈಮ್ ಠಾಣೆ ಆರಂಭಕ್ಕೆ ಈಗಾಗಲೇ ಸರ್ಕಾರದಿಂದ ಒಪ್ಪಿಗೆ ದೊರೆತಿದ್ದು, ಈ ಹಿನ್ನೆಲೆ ಮುಂದಿನ ಒಂದು ತಿಂಗಳಲ್ಲಿ ಸೈಬರ್‌ ಕ್ರೈಮ್ ಠಾಣೆ ಹಾಗೂ ಎಕನಾಮಿಕ್‌ ಆ್ಯಂಡ್‌ ನಾರೊಟಿಕ್‌ ಠಾಣೆ ಆರಂಭಿಸಲಾಗುವುದು.
-ಸುಬ್ರಹ್ಮಣ್ಯೇಶ್ವರ ರಾವ್‌, ಪೊಲೀಸ್‌ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next