Advertisement

ಎಟಿಎಂಗೆ ಸ್ಕಿಮ್ಮರ್‌ ಅಳವಡಿಸಿದ್ದ ವಿದೇಶಿಯರ ಸೆರೆ

01:18 AM Jul 07, 2019 | Lakshmi GovindaRaj |

ಬೆಂಗಳೂರು: ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್‌ಗಳನ್ನು ಅಳವಡಿಸಿ ಗ್ರಾಹಕರ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕಳವು ಮಾಡಲು ಸಂಚು ರೂಪಿಸಿದ್ದ ಇಬ್ಬರು ವಿದೇಶಿಗರನ್ನು ತಿಲಕನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Advertisement

ದಕ್ಷಿಣ ಅಮೆರಿಕದ ಚಿಲಿಯಾ ಮೂಲದ ಇಬ್ಬರು ಆರೋಪಿಗಳನ್ನು (ಹೆಸರು ತಿಳಿದುಬಂದಿಲ್ಲ) ಬಂಧಿಸಲಾಗಿದ್ದು, ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಪ್ರವಾಸಿ ಮತ್ತು ವಾಣಿಜ್ಯ ವೀಸಾದಡಿ ಭಾರತಕ್ಕೆ ಬಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದು, ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಆರೋಪಿಗಳು ಗ್ರಾಹಕರ ಬ್ಯಾಂಕ್‌ ಡೇಟಾ ಕಳವು ಮಾಡಲು ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್‌ ಅಳವಡಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಕೆನರಾ ಬ್ಯಾಂಕ್‌ ಎಟಿಎಂ ಯಂತ್ರಗಳಿಗೆ ಹಣ ತುಂಬಲು ಹೊರ ಗುತ್ತಿಗೆ ಪಡೆದಿದ್ದ ಎಪಿಎಸ್‌ ಪ್ರೈ.ವಿ.ನಲ್ಲಿ ಉಸ್ತುವಾರಿ ಅಧಿಕಾರಿಯಾಗಿರುವ ಹುಸೇನ್‌, ಜು.2ರಂದು ಸಂಜೆ 4.30ರ ಸುಮಾರಿಗೆ ಜಯನಗರದ 9ನೇ ಬ್ಲಾಕ್‌ 37ನೇ ಅಡ್ಡ ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಬಂದಿದ್ದು, ಹಣ ತುಂಬಿಸಿದ ನಂತರ ಯಂತ್ರಕ್ಕೆ ಎಟಿಎಂ ಕಾರ್ಡ್‌ ಹಾಕಿ ಪರಿಶೀಲಿಸಿದ್ದಾರೆ.

ಈ ವೇಳೆ ಕಾರ್ಡ್‌ ರೀಡರ್‌ ಸ್ಥಳದಲ್ಲಿ ಯಾರೋ ಸ್ಕಿಮ್ಮರ್‌ ಅಳವಡಿಸಿರುವುದು ಕಂಡು ಬಂದಿದೆ. ಕೂಡಲೇ ಹುಸೇನ್‌ ಅವರು ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಬ್ಯಾಂಕ್‌ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಅನಂತರ ಸ್ಥಳಕ್ಕೆ ಬಂದ ಬ್ಯಾಂಕ್‌ನ ತಾಂತ್ರಿಕ ತಂಡ ಪರಿಶೀಲಿಸಿದಾಗ ಸ್ಕಿಮ್ಮರ್‌ ಅಳವಡಿಸಿ, ಎಟಿಎಂ ಯಂತ್ರದ ಮೂಲಕ ಗ್ರಾಹಕರ ಡೇಟಾ ಕದ್ದು ಕ್ಲೋನಿಂಗ್‌ ಕಾರ್ಡ್‌ಗಳನ್ನು ತಯಾರಿಸಿ ಗ್ರಾಹಕರ ಖಾತೆಗಳಿಂದ ಹಣ ಕಳವು ಮಾಡಲು ಸಂಚು ರೂಪಿಸಿರುವುದು ಗೊತ್ತಾಗಿದೆ.

ಈ ಸಂಬಂಧ ಬ್ಯಾಂಕ್‌ನ ಹಿರಿಯ ಅಧಿಕಾರಿ ಗಿರೀಶ್‌ ವಿ.ಗೋಕರ್ಣ ಎಂಬವರು ಜು.2ರಂದು ತಿಲಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಟಿಎಂ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿಗಳು ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸ್ಕಿಮ್ಮರ್‌ ಅಳವಡಿಸಿರುವುದು ಮತ್ತು ಆರೋಪಿಗಳ ಚಹರೆ ಪತ್ತೆಯಾಗಿತ್ತು.

Advertisement

ಈ ಆಧಾರದ ಮೇಲೆ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಆರೋಪಿಗಳ ಬಗ್ಗೆ ವಿಚಾರಣೆ ನಡೆಸಿದಾಗ ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ತಿಲಕನಗರ ಪೊಲೀಸರು ಆರೋಪಿಗಳು ವಾಸವಾಗಿದ್ದ ಮನೆ ಮೇಲೆ ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಬಂಧಿತರು ನಗರದ ಎಷ್ಟು ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮರ್‌ ಅಳವಡಿಸಿದ್ದಾರೆ, ನಗರದಲ್ಲಿ ನಡೆದಿದ್ದ ಈ ಹಿಂದಿನ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂಬ ಬಗ್ಗೆ ವಿಚಾರಣೆ ನಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರ ಡೇಟಾ ಕಳವು ಹೇಗೆ?: ಗ್ರಾಹಕರು ಎಟಿಎಂ ಯಂತ್ರಕ್ಕೆ ಕಾರ್ಡ್‌ ಹಾಕಿ ಹಣ ಪಡೆಯುವಾಗ ಅಥವಾ ವಹಿವಾಟು ಪರಿಶೀಲಿಸುವಾಗ ದಾಖಲಿಸುವ ಪಿನ್‌ ನಂಬರ್‌ ನೇರವಾಗಿ ಸ್ಕಿಮ್ಮರ್‌ನಲ್ಲಿ ಸಂಗ್ರಹವಾಗುತ್ತದೆ. ನಂತರ ಸ್ಕಿಮ್ಮರ್‌ಗಳನ್ನು ಕೊಂಡೊಯ್ಯುವ ಕಳ್ಳರು, ಅದರಲ್ಲಿರುವ ಗ್ರಾಹಕರ ಕಾರ್ಡ್‌ಗಳು ಮತ್ತು ಬ್ಯಾಂಕ್‌ನ ಮಾಹಿತಿಯನ್ನು ವಿಶೇಷ ತಾಂತ್ರಿಕತೆ ಮೂಲದ ಮತ್ತೂಂದು ನಕಲಿ ಕಾರ್ಡ್‌ಗೆ ದಾಖಲಿಸಿ, ಬೇರೆಡೆ ವಹಿವಾಟು ನಡೆಸಿ ಅಥವಾ ವಸ್ತುಗಳನ್ನು ಖರೀದಿಸಿ ವಂಚಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next