Advertisement

ವಿಮಾನವೇರಿ ಬರುವ ಮನೆಗಳ್ಳರ ಸೆರೆ

12:51 PM Oct 07, 2018 | Team Udayavani |

ಬೆಂಗಳೂರು: ದೆಹಲಿಯಿಂದ ವಿಮಾನದ ಮೂಲಕ ನಗರಕ್ಕೆ ಬಂದು ಮಾರಾಟ ಪ್ರತಿನಿಧಿ ಸೋಗಿನಲ್ಲಿ ಮನೆಕಳವು ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿ ಮೂಲದ ಅರ್ಮಾನ್‌ ಖಾನ್‌ ಅಲಿಯಾಸ್‌ ಅಮಾನ್‌ ಸೋನಿ (26) ಬಂಧಿತ. ಆರೋಪಿಯಿಂದ 31,70 ಲಕ್ಷ ರೂ. ಮೌಲ್ಯದ 1 ಕೆ.ಜಿ. 40 ಗ್ರಾಂ ಚಿನ್ನಾಭರಣ, 1 ಕೆ.ಜಿ. 250 ಗ್ರಾಂ ಬೆಳ್ಳಿ, ಎರಡು ಲ್ಯಾಪ್‌ಟಾಪ್‌, ರೇಷ್ಮೆ ಸೀರೆಗಳು ಹಾಗೂ ಕೆಲ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚೆಗೆ ಜೆ.ಬಿ.ನಗರ ಠಾಣಾ ವ್ಯಾಪ್ತಿಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಅಶಿಶ್‌ ಕುಮಾರ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅರ್ಮಾನ್‌ ಖಾನ್‌ ಸಹಚರನಾಗಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದ. ಈ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ರೈಲಿನಲ್ಲಿ ದೆಹಲಿಗೆ ಹೋಗುವ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ. ಆರೋಪಿಯ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 12ಕ್ಕೂ ಹೆಚ್ಚು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಅರ್ಮಾನ್‌ ಖಾನ್‌ ಕಳೆದ ಐದಾರು ವರ್ಷಗಳಿಂದ ಮನೆಗಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ವಿಮಾನದಲ್ಲಿ ದೆಹಲಿಯಿಂದ ಚೆನ್ನೈ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಈತ, ಹೊಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗುತ್ತಿದ್ದ. ಬಳಿಕ ದಕ್ಷಿಣ ವಲಯ, ಕೇಂದ್ರ ವಲಯ ಹಾಗೂ ಆಗ್ನೇಯ ವಲಯಗಳ ನಾನಾ ಠಾಣಾ ವ್ಯಾಪ್ತಿಗಳಲ್ಲಿ ಮಾರಾಟ ಪ್ರತಿನಿಧಿ ಸೋಗಿನಲ್ಲಿ ಸುತ್ತಾಡಿ,

ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ಹೊತ್ತು ಮನೆಗಳ್ಳತನ ಮಾಡುತ್ತಿದ್ದ. ಬಳಿಕ ರೈಲಿನಲ್ಲಿ ಚೆನ್ನೈ ಮಾರ್ಗವಾಗಿ ದೆಹಲಿಗೆ ಹೋಗಿ ಕಳವು ವಸ್ತುಗಳನ್ನು ಮಾರಾಟ ಮಾಡಿ ಪತ್ನಿ, ಮಕ್ಕಳ ಜತೆಗೆ ಐಷಾರಾಮಿ ಜೀವನ ನಡೆಸುತ್ತಿದ್ದ. ಎರಡು ಕಾರುಗಳನ್ನು ಹೊಂದಿದ್ದು, ದೆಹಲಿಯ ಪ್ರತಿಷ್ಠಿತ ಪ್ರದೇಶಗಳಲ್ಲಿರುವ ಬಾಡಿಗೆ ಮನೆಗಳಲ್ಲಿ ವಾಸಿಸುತ್ತ ಆಗಾಗ್ಗೆ ಮನೆಗಳನ್ನು ಬದಲಿಸುತ್ತ ಉದ್ಯಮಿಯಂತೆ ನಟಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

Advertisement

ಸಿಮ್‌ ಕಾರ್ಡ್‌ಗಳ ಬಳಕೆ: ಪ್ರತಿ ಬಾರಿ ಬೆಂಗಳೂರಿಗೆ ಬರುವಾಗ ಆರೋಪಿ ಹೊಸ ಸಿಮ್‌ಕಾರ್ಡ್‌ ತರುತ್ತಿದ್ದ. ಕೃತ್ಯವೆಸಗಿ ವಾಪಸ್‌ ಹೋಗುವಾಗ ಆ ಸಿಮ್‌ಕಾರ್ಡ್‌ನ್ನು ಮಾರ್ಗ ಮಧ್ಯೆಯೇ ಬಿಸಾಡಿ ಹೋಗುತ್ತಿದ್ದ. ಅರ್ಮಾನ್‌ ಖಾನ್‌ನನ್ನು 2014ರಲ್ಲಿ ಅಶೋಕನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ತನ್ನ ಕೃತ್ಯ ಮುಂದುವರಿಸಿದ್ದಾನೆ. ಅಲ್ಲದೆ, ನಗರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸುಮಾರು 78 ಪ್ರಕರಣಗಳಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗಳ್ಳ ಬಂಧನ: ಜೆ.ಬಿ.ನಗರ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಮತ್ತೂಬ್ಬ ಮನೆಗಳ್ಳನನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ವಿನ್ಸೆಂಟ್‌ ಅಲಿಯಾಸ್‌ ಡೇವಿಡ್‌(62) ಬಂಧನ. ಈತನಿಂದ 16,25 ಲಕ್ಷ ರೂ.ಮೌಲ್ಯದ 525 ಗ್ರಾಂ ಚಿನ್ನಾಭರಣ ಹಾಗೂ ಟಿವಿ ವಶಕ್ಕೆ ಪಡೆಯಲಾಗಿದೆ.ಆರೋಪಿ ಕೆಲ ವರ್ಷಗಳಿಂದ ಕಲಾಸಿಪಾಳ್ಯದಲ್ಲಿ ವಾಸವಾಗಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.

ಈ ವೇಳೆ ಮೋಜಿನ ಜೀವನ ನಡೆಸಲು ಮನೆಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಗಲು ವೇಳೆ ಪ್ರತಿಷ್ಠಿತ ಪ್ರದೇಶಗಳಲ್ಲಿ ತಿರುಗಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ. ಬಳಿಕ ಅದೇ ದಿನ ರಾತ್ರಿ ಆ ಮನೆ ಬೀಗ ಮುರಿದು ಕಳ್ಳತನ ಮಾಡಿ, ತಮಿಳುನಾಡಿನಲ್ಲಿರುವ ಸ್ನೇಹಿತರ ಜತೆ ಸೇರಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next