Advertisement

16 ಸಾವಿರ ಖಾತೆ ಡೇಟಾ ಹೊಂದಿದ್ದವರ ಸೆರೆ

11:53 AM Jul 26, 2017 | Team Udayavani |

ಬೆಂಗಳೂರು: ವಿಲಾಸಿ ಜೀವನ ನಡೆಸಲು ಹಣಕಾಸು ಸಂಸ್ಥೆಗಳ  ವೆಬ್‌ಸೈಟ್‌ ಮೂಲಕ  ಖಾತೆದಾರರ ಮಾಹಿತಿ ಪಡೆದು ಲಕ್ಷಾಂತರ ರೂ. ವಂಚ‌ನೆ ಮಾಡುತ್ತಿದ್ದ ಜಾರ್ಖಂಡ್‌ ಮೂಲದ ಇಬ್ಬರು ಸಹೋದರರು ಸೇರಿದಂತೆ ನಾಲ್ವರು ಸಿಐಡಿ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಬಂಧಿತರ ಬಳಿ ಬರೋಬ್ಬರಿ 16 ಸಾವಿರ ಬ್ಯಾಂಕ್‌ ಗ್ರಾಹಕರ ಮಾಹಿತಿ ಪತ್ತೆಯಾಗಿದೆ. 

Advertisement

ಜಾರ್ಖಂಡ್‌ನ‌ ಬೊಕಾರೋ ನಗರದ ಸುಶೀಲ್‌ ಕುಮಾರ್‌ ಸುಮನ್‌ (23), ಕಪಿಲ್‌ದೇವ್‌ ಸುಮನ್‌ (19), ಸೂರಜ್‌ಕುಮಾರ್‌ (19), ಬಿಪ್ಲವ್‌ ಕುಮಾರ್‌ (23) ಬಂಧಿತರು. ಈ ಪೈಕಿ ಸುಶೀಲ್‌ ಕುಮಾರ್‌ ಮತ್ತು ಸಹೋದರ ಕಪಿಲ್‌ದೇವ್‌ ಸುಮನ್‌ ನಗರದ ಖಾಸಗಿ ಕಾಲೇಜುವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, ಅನುತ್ತೀರ್ಣಗೊಂಡಿದ್ದರು. 

ಆರೋಪಿ ಸುಶೀಲ್‌ ಕುಮಾರ್‌ paymaza.com, ideamoney.com ಮೂಲಕ ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮಾರಾಟ ಮಾಡುವುದಾಗಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದ. ಹೀಗೆ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ ಗ್ರಾಹಕ ವಸ್ತುಗಳನ್ನು ಖರೀದಿಸುವ ವೇಳೆ ದಾಖಲಿಸುವ ಬ್ಯಾಂಕ್‌ನ ಮಾಹಿತಿಯನ್ನು ರಹಸ್ಯವಾಗಿ ಕದಿಯುತ್ತಿದ್ದ. ನಂತರ ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಎಂದು ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಕಿಶೋರ್‌ಚಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಆರೋಪಿಗಳು ಮೇ 15ರಂದು ಕಾರು ಚಾಲಕ ಸುರೇಶ್‌ ಎಂಬುವರ ಖಾತೆಯಿಂದ 5000 ಮತ್ತು 2000 ರೂ. ಕಡಿತ ಮಾಡಿಕೊಂಡಿದ್ದರು. ಈ ಬಗ್ಗೆ ಬ್ಯಾಂಕ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ವಿಚಾರಣೆ ನಡೆಸಿದ ಬ್ಯಾಂಕ್‌ ಸಿಬ್ಬಂದಿ ಅಪರಿಚಿತರು ಖಾತೆಗೆ ಕನ್ನ ಹಾಕಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇದೇ ಜುಲೈ 13ರಂದು ಸುರೇಶ್‌ ಸೈಬರ್‌ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಸೈಬರ್‌ ಪೊಲೀಸರು ಆನ್‌ಲೈನ್‌ ಮೂಲಕ ವಂಚನೆ ಮಾಡುತ್ತಿದ್ದ ದೊಡ್ಡ ಜಾಲವನ್ನು ಪತ್ತೆ ಹಚ್ಚಿದ್ದಾರೆ. 

ಜಾರ್ಖಂಡ್‌, ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು: ಆರೋಪಿಗಳ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡ ರಚಿಸಿದ್ದರು. ಒಂದು ತಂಡ ತಾಂತ್ರಿಕವಾಗಿ ತನಿಖೆ ನಡೆಸಿದರೆ, ಮತ್ತೂಂದು ಬ್ಯಾಂಕ್‌ ಖಾತೆಗಳ ವಿವರಣೆ ಪಡೆದುಕೊಂಡಿತು. ಇನ್ನೊಂದು ತಂಡ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿತ್ತು. ಪ್ರಾಥಮಿಕ ಮಾಹಿತಿಯಲ್ಲಿ ಹಣ ಕಳೆದುಕೊಂಡವರ ಖಾತೆಯಿಂದ ಜೆ.ಪಿ.ನಗರದ ಎಸ್‌ಬಿಎಂ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿರುವುದು ಕಂಡು ಬಂದಿತು.

Advertisement

ಈ ಬ್ಯಾಂಕ್‌ನ ಕೆವೈಸಿ ನಿಯಮಗಳನ್ನು ಉಲ್ಲಂಘಿಸಿ ಆರೋಪಿಗಳು ಖಾತೆ ತೆರೆದಿರುವುದು ಬೆಳಕಿಗೆ ಬಂದಿತು.  ಆರೋಪಿ ಹಣ ಪಡೆಯಲು ಆಗಾಗ್ಗ ಬ್ಯಾಂಕ್‌ಗೆ ಬರುವ ಮಾಹಿತಿ ಸಂಗ್ರಹಿಸಿದ ತಂಡ ಮೊದಲಿಗೆ ಕಪಿಲ್‌ದೇವ್‌ ಸುಮನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೂಬ್ಬ ಆರೋಪಿ ಸೂರಜ್‌ಕುಮಾರ್‌ ಬಗ್ಗೆ ಬಾಯಿಬಿಟ್ಟಿದ್ದ.

ಅಷ್ಟರಲ್ಲಿ ಸುಶೀಲ್‌ ಕುಮಾರ್‌ ಸುಮನ್‌ ಮತ್ತು ಬಿಪ್ಲವ್‌ ಕುಮಾರ್‌ ನಗರದಲ್ಲಿ ಹತ್ತಾರು ಮಂದಿಗೆ ವಂಚಿಸಿ ಜಾರ್ಖಂಡ್‌ಗೆ ತೆರಳಿದ್ದರು. ಆದರೆ, ಆರೋಪಿಗಳು ಪೊಲೀಸರು ಹುಡುಕಾಟ ನಡೆಸುತ್ತಿರುವ ಮಾಹಿತಿ ತಿಳಿದು ಬೊಕಾರೋದಿಂದ ರಾಂಚಿಗೆ, ರಾಂಚಿಯಿಂದ ಬುದ್ಧಗಯಾ-ಪಟ್ನಾಗೆ ತೆರಳಿದ್ದರು. ಕೊನೆಗೆ ಬೊಕಾರೋಕ್ಕೆ ಬರುವಾಗ ರೈಲ್ವೆ ನಿಲ್ದಾಣದಲ್ಲೇ ಆರೋಪಿಗಳನ್ನು ಸೆರೆ ಹಿಡಿಯಲಾಯಿತು ಎಂದು ಅವರು ತಿಳಿಸಿದರು.

ಮಾಸ್ಟರ್‌ ಮೈಂಡ್‌ ಸುಶೀಲ್‌ ಕುಮಾರ್‌: ಪ್ರಮುಖ ಆರೋಪಿ ಸುಶೀಲ್‌ ಕುಮಾರ್‌ ವಿದ್ಯಾಭ್ಯಾಸ ಮೊಟಕುಗೊಳಿಸಿ ನಕಲಿ ವೆಬ್‌ಸೈಟ್‌ಗಳ ಮೂಲಕ ಗ್ರಾಹಕರ ಬ್ಯಾಂಕ್‌ ಮಾಹಿತಿ ಪಡೆಯುವುದನ್ನು ಕರಗತ ಮಾಡಿಕೊಂಡಿದ್ದ. ಬಳಿಕ ಜಾರ್ಖಂಡ್‌ನಿಂದ ಸಹೋದರ ಕಪಿಲ್‌ದೇವ್‌ ಸುಮನ್‌ನನ್ನು ನಗರಕ್ಕೆ ಕರೆಸಿಕೊಂಡು ಇನ್ನಷ್ಟು ವೆಬ್‌ಸೈಟ್‌ಗಳನ್ನು ಖರೀದಿಸಿದ್ದ ಎಂದು ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಕಿಶೋರ್‌ಚಂದ್ರ ತಿಳಿಸಿದರು.

 ಆರೋಪಿಗಳು ಜಾರ್ಖಂಡ್‌ನ‌ಲ್ಲಿ ಪ್ರತ್ಯೇಕ ಕಚೇರಿ ತೆರೆದಿದ್ದರು. ಇಲ್ಲಿ ನಾಲ್ಕೈದು ಮಂದಿ ಕೆಲಸ ಮಾಡುತ್ತಿದ್ದು, ಮೊಬೈಲ್‌ ಮೂಲಕ ಗ್ರಾಹಕರಿಗೆ ತಮ್ಮ ವಸ್ತುಗಳು ಮತ್ತು ವ್ಯವಹಾರದ ಬಗ್ಗೆ ಮಾಹಿತಿ ನೀಡಿ ಮನವೊಲಿಸುತ್ತಿದ್ದರು. ಅಲ್ಲದೇ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಕಚೇರಿ ತೆರೆಯುವ ಇರಾದೆ ಹೊಂದಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ವಂಚಿಸುತ್ತಿದ್ದದ್ದು ಹೀಗೆ…: ಅತೀ ಕಡಿಮೆ ಬೆಲೆಗೆ ಸಿಗುವ ವಸ್ತುಗಳ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗಳನ್ನು ನೊಂದಾಯಿಸುತ್ತಾರೆ. ಆಗ ರಹಸ್ಯ ಮಾಹಿತಿ ಕದಿಯುತ್ತಿದ್ದರು. ಸಾಮಾನ್ಯವಾಗಿ ಯಾವುದಾದರೂ ಹಣಕಾಸು ಸಂಸ್ಥೆಗಳ  ವೆಬ್‌ಸೈಟ್‌ನಲ್ಲಿ ಖರೀದಿಸುವಾಗ ಆ ವೆಬ್‌ಸೈಟ್‌ ಮೇಲ್ಭಾಗದಲ್ಲಿ “ಬೀಗ’ ಆಕಾರದ ಚಿಹ್ನೆ ಇರುತ್ತದೆ.

ಆದರೆ, ಆರೋಪಿಗಳು ತೆರೆದಿದ್ದ ವೆಬ್‌ಸೈಟ್‌ನಲ್ಲಿ ಈ ಚಿಹ್ನೆ ಹಾಕಿಲ್ಲ. ಆದ್ದರಿಂದ ಪ್ರತಿಯೊಬ್ಬ ಗ್ರಾಹಕನ ಮಾಹಿತಿಯು ಇದೇ ವೆಬ್‌ಸೈಟ್‌ನಿಂದ ಆರೋಪಿಗಳು ಸೃಷ್ಟಿಸಿರುವ ಮತ್ತೂಂದು ವೆಬ್‌ಸೈಟ್‌ನಲ್ಲಿ ದಾಖಲಾಗುತ್ತಿತ್ತು. ನಂತರ ಈ ಮಾಹಿತಿ ಪಡೆದು ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ಈ ವಂಚನೆಯ ಜಾಲದಲ್ಲಿ ವೆಬ್‌ಸೈಟ್‌ಗಳನ್ನು ಡೆವಲಪ್‌ ಮಾಡಿದ ವೆಬ್‌ ಡಿಸೈನರ್‌ ಪಾತ್ರವು ಇದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

16 ಸಾವಿರ ಖಾತೆದಾರರ ಮಾಹಿತಿ ಸಂಗ್ರಹಣೆ: ಸುಮಾರು 28 ನಕಲಿ ಖಾತೆಗಳನ್ನು ಆರೋಪಿಗಳು ಹೊಂದಿದ್ದು, ಇದುವರೆಗೂ ಸುಮಾರು 16 ಸಾವಿರ ಬ್ಯಾಂಕ್‌ ಗ್ರಾಹಕರ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇವರಿಂದ 4 ನಕಲಿ ಪಾನ್‌ ಕಾರ್ಡ್‌,  460ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳು, 15 ಮೊಬೈಲ್‌ಗ‌ಳು, 1 ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್ಗಳು, ಮೆಮೋರಿ ಕಾರ್ಡ್‌ಗಳು ಡೇಟಾಕಾರ್ಡ್‌ಗಳು, ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿವೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸಿ.ಎಚ್‌.ಪ್ರತಾಪ್‌ ರೆಡ್ಡಿ ಹೇಳಿದರು.

-080-22094507, 9480800197 ಆನ್‌ಲೈನ್‌ ವ್ಯವಹಾರದಲ್ಲಿನ ವಂಚನೆ, ಅನುಮಾನಗಳಿಗಾಗಿ ನಾಗಕರಿಕರು ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next