Advertisement

ವಿಶ್ವದಾಖಲೆ ಬರೆದ ಟೊರ್ನಾಡೋಸ್: 127 ಮೀ. ಬೆಂಕಿ ಸುರಂಗದಲ್ಲಿ ಸಾಗಿದ ಕ್ಯಾ.ಶಿವಂ ಸಿಂಗ್

09:21 AM Nov 11, 2020 | keerthan |

ಬೆಂಗಳೂರು: ಭಾರತೀಯ ಸೈನ್ಯದ ವಿಶ್ವವಿಖ್ಯಾತ ಎಎಸ್‌ಸಿ (ಆರ್ಮಿ ಸಪ್ಲೈ ಕಾಪ್ಸ್‌) ಮೋಟಾರುಬೈಕ್‌ ಪ್ರದರ್ಶನ ತಂಡ “ಟೊರ್ನಾಡೋಸ್‌’ ಸದಸ್ಯ ಬುಲೆಟ್‌ನಲ್ಲಿ ಅತಿ ಉದ್ದ 127 ಮೀಟರ್‌ ಬೆಂಕಿಯ ಸುರಂಗದಲ್ಲಿ ಹಾದುಬರುವ ಮೂಲಕ ಮಂಗಳವಾರ ವಿಶ್ವ ದಾಖಲೆ ಬರೆದರು.

Advertisement

ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯ ಎಎಸ್‌ಸಿ ಮೈದಾನದ ಒಂದು ತುದಿಯಿಂದ ಮತ್ತೂಂದು ತುದಿಯವರೆಗೆ ಹೊತಿ ಉರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆ ಬಿಸಿ ನೂರು ಮೀ. ದೂರದಲ್ಲಿ ಕುಳಿತಿದ್ದ ಪ್ರೇಕ್ಷಕರಿಗೂ ತಟ್ಟುತ್ತಿತ್ತು. ಈ ಬಲೆಯಲ್ಲಿ ಟೊರ್ನಾಡೋಸ್‌ ತಂಡದ ಕ್ಯಾಪ್ಟನ್‌ ಶಿವಂ ಸಿಂಗ್‌ ಮಿಂಚಿನಂತೆ ನುಗ್ಗಿ, ಹೊರಬಂದರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಈ ಅತಿ ಉದ್ದದ ಟನಲ್‌ ಅನ್ನು ಯಶಸ್ವಿಯಾಗಿ ಕ್ರಮಿಸಿದರು. ಇದರಿಂದ ಪ್ರೇಕ್ಷಕರು ರೋಮಾಂಚನಗೊಂಡರು.

2014ರಲ್ಲಿ ದಕ್ಷಿಣ ಆಫ್ರಿಕದ ಎನ್ರಿಕೊ ಶೂಮ್ಯಾನ್‌ ಮತ್ತು ಆ್ಯಂಡ್ರಿ ಡಿ ಕಾಕ್‌ 120.40 ಮೀಟರ್‌ ಉದ್ದದ ಬೆಂಕಿಯ ಟನಲ್‌ನಲ್ಲಿ ಹಾದುಹೋಗುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು. ಭಾರತೀಯ ಸೇನೆಯ ಕ್ಯಾಪ್ಟನ್‌ ಶಿವಂ ಸಿಂಗ್‌ ಅದನ್ನು ಸರಿಗಟ್ಟಿದರು. 130 ಮೀಟರ್‌ ಸುರಂಗದ ಗುರಿಯನ್ನು ಅವರು ಇಟ್ಟುಕೊಂಡಿದ್ದರು. ಆದರೆ, 127.40 ಮೀ. ಪೂರ್ಣಗೊಳಿಸಿ ದಾಖಲೆ ಬರೆದರು.

ಇದನ್ನೂ ಓದಿ:ಬಿಹಾರ ಮಹಾತೀರ್ಪು: ಸರಳ ಬಹುಮತ ಸಾಧಿಸಿದ ನಿತೀಶ್‌ ನೇತೃತ್ವದ ಎನ್‌ಡಿಎ

ಸುರಂಗದಿಂದ ಹೊರಬಂದಾಗ ಅವರ ಬೈಕ್‌ ಸುಟ್ಟು ಕರಕಲಾಗಿತ್ತು. ಶಿವಂ ಅವರಿಗೆ ಸಣ್ಣಪುಟ್ಟ ಗಾಯಗಳೂ ಆಗಿದ್ದವು. ತಕ್ಷಣ ಅವರನ್ನು ಸೇನೆಯ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.

Advertisement

“ಟೊರ್ನಾಡೋಸ್‌’ಗೆದಾಖಲೆಗಳಸರಮಾಲೆ: ಕಳೆದೆರಡು ದಿನಗಳಲ್ಲಿ ಟೊರ್ನಾಡೋಸ್‌ ದಾಖಲೆಗಳ ಸರಮಾಲೆ ನಿರ್ಮಿಸಿದೆ. ಈ ಪೈಕಿ ಒಂದು ಮೋಟಾರುಬೈಕ್‌ನಲ್ಲಿ 12 ಜನ ಸವಾರಿ ಮಾಡುತ್ತ ಅತಿ ವೇಗದ ಚಾಲನೆಯಲ್ಲಿ ಪಿರಾಮಿಡ್‌ ನಿರ್ಮಿಸುವ ಮೂಲಕ ತಂಡವು ಹೊಸ ದಾಖಲೆ ಬರೆಯಿತು. 1 ಕಿ.ಮೀ. ದೂರವನ್ನು ಕೇವಲ 51.30 ಸೆಕೆಂಡ್‌ಗಳಲ್ಲಿ ಇದನ್ನು ಕ್ರಮಿಸಿತು. ಕ್ಯಾಪ್ಟನ್‌ ಶಿವಂ ಸಿಂಗ್‌ ಬೈಕ್‌ ಚಾಲನೆ ಮಾಡುತ್ತಿದ್ದರು.

ಅದೇ ರೀತಿ, ಎರಡು ಬೈಕ್‌ ಮೇಲೆ 17 ಜನರನ್ನು ಹೊತ್ತು, ಅತಿ ವೇಗದ ಚಾಲನೆಯಲ್ಲಿ ಪಿರಾಮಿಡ್‌, ಮೂರು ಬೈಕ್‌ ಮೇಲೆ 34 ಜನ, 5 ಬೈಕ್‌ ಮೇಲೆ44 ಜನ ಸವಾರರು ಒಂದುಕಿ.ಮೀ. ವೇಗವನ್ನು ಅತಿ ವೇಗದ ಚಾಲನೆಯಲ್ಲಿ ಪಿರಾಮಿಡ್‌ ನಿರ್ಮಿಸುವ ಮೂಲಕ ಪೂರೈಸಿದರು. ಇದಲ್ಲದೆ, 39 ಜನ ಏಳು ಮೋಟಾರು ಬೈಕ್‌ನಲ್ಲಿ 209 ಇಂಚು ಎತ್ತರದ ಪಿರಾಮಿಡ್‌ ರೂಪಿಸಿ, 1,200 ಮೀ. ದೂರವನ್ನು ಕೇವಲ 1.11 ನಿಮಿಷದಲ್ಲಿ ಕ್ರಮಿಸಿದರು. ಇದು ಹೊಸ ದಾಖಲೆಯಾಗಿದೆ.

ಸೋಮವಾರ ಮತ್ತು ಮಂಗಳವಾರ ಎರಡೂ ದಿನಗಳಲ್ಲಿ ಒಟ್ಟಾರೆ ಒಂಬತ್ತು ದಾಖಲೆಗಳು ಎಎಸ್‌ಸಿ ಟೊರ್ನಾಡೋಸ್‌ ತಂಡದ ಖಾತೆಗೆ ಸೇರಿದವು. ಪ್ರತಿ ಸಾಹಸ ಪ್ರದರ್ಶನವೂ ಪ್ರೇಕ್ಷಕರ ಮೈಜುಮ್ಮೆನಿಸುತ್ತಿದ್ದವು.

ಭೂಸೇನೆಯ ಡೇರ್‌ಡೆವಿಲ್‌

ವೈಮಾನಿಕ ಪ್ರದರ್ಶನದಲ್ಲಿ ಏರೋಬಾಟಿಕ್‌ ತಂಡ ಇದ್ದಂತೆಯೇ ವಿಶ್ವದಾದ್ಯಂತ ಇರುವ ಭೂಸೇನೆಗಳು ಡೇರ್‌ಡೆವಿಲ್‌ ತಂಡಗಳನ್ನು ಹೊಂದಿರುತ್ತವೆ. ಇವು ದೇಶ-ವಿದೇಶಗಳಲ್ಲಿ ನಡೆಯುವ ಸಾಹಸ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುತ್ತವೆ. ಅದೇ ರೀತಿ, ಭಾರತೀಯ ಸೇನೆಯಲ್ಲಿ ಎಎಸ್‌ಸಿ ಟೊರ್ನಾಡೋಸ್‌ ತಂಡವನ್ನು 1982ರಲ್ಲಿ ಸ್ಥಾಪಿಸಲಾಗಿದೆ. ಇದು ವಿವಿಧೆಡೆ ನಡೆಯುವ ಸಾಹಸ ಪ್ರದರ್ಶನಗಳಲ್ಲಿ ತನ್ನ ಚಮತ್ಕಾರವನ್ನು ತೋರಿಸುತ್ತ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next