ಮಂಗಳೂರು: ಭಾರತೀಯ ಸೇನೆಯ ಕುರಿತ ಕಥಾಹಂದರವಿರುವ ” ಲಕ್ಷ್ಯ’ ಸಿನೆಮಾವನ್ನು ಚಿಕ್ಕಂದಿನಲ್ಲಿ ಆಗಾಗ ನೋಡುತ್ತ ಭಾರತೀಯ ಸೇನೆಗೆ ಸೇರುವುದನ್ನೇ ಗುರಿ ಯಾಗಿಸಿಕೊಂಡಿದ್ದ ಪ್ರಾಂಜಲ್ ತರಗತಿಯಲ್ಲಿ ಶಿಸ್ತಿನ ವಿದ್ಯಾರ್ಥಿ, ಸಹಪಾಠಿಗಳಿಗೆ ಪ್ರೀತಿಯ ಗೆಳೆಯ.
ಸಹಪಾಠಿಗಳು ತಮ್ಮ ತಮ್ಮ ಬದುಕಿನಲ್ಲಿ ಬಿಝಿ ಇದ್ದರೂ ಯಾವತ್ತಾದರೂ ಒಟ್ಟಾಗಬೇಕು, ಖುಷಿ, ಬೇಸರ ಹಂಚಿಕೊಳ್ಳಬೇಕು ಎಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಎಲ್ಲರನ್ನೂ ಒಟ್ಟಾಗಿಸಿದ್ದ ಮಿತ್ರ.
“ಕಂಧೋ ಸೇ ಮಿಲ್‌ತೇ ಹೈಂ ಕಂಧೇ ಕದ್‌ಮೋಂಸೇ ಮಿಲೆ¤à ಹೈಂ, ಹಂ ಚಲೆ¤à ಹೆಂ ಜಬ್ ಜೈಸೇ ತೋ ದಿಲ್ ದುಷ್ಮನ್ ಕೇ ಹಿಲ್ತೇ ಹೈಂ’ (ನಾವು ಹೆಗಲಿಗೆ ಹೆಗಲು, ಹೆಜ್ಜೆ ಮಿಲಾಯಿಸಿ ನಡೆಯುತ್ತೇವೆ, ಆಗ ಶತ್ರುಗಳ ಎದೆ ನಡುಗುತ್ತದೆ…) ಇದು “ಲಕ್ಷ್ಯ’ ಸಿನೆಮಾದ ಒಂದು ಹಾಡು ಹಾಗೂ ಇದು ಪ್ರಾಂಜಲ್‌ನ ಫೇವರಿಟ್ ಕೂಡ. ಇದನ್ನು ಆಗಾಗ ಗುನುಗುವುದು, ಕೇಳುವುದು ಕೂಡ ಅವರಿಗೆ ಪ್ರಿಯ.
ಎಂಆರ್‌ಪಿಎಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಮತ್ತು ಅನುರಾಧಾ ದಂಪತಿಯ ಏಕೈಕ ಪುತ್ರನಾಗಿರುವ ಪ್ರಾಂಜಲ್ ಚಿಕ್ಕಂದಿನಿಂದಲೇ ಕಲಿತದ್ದು ಎಂಆರ್‌ಪಿಎಲ್ ಬಳಿಯಲ್ಲೇ ಇರುವ ಡಿಪಿಎಸ್ ಸ್ಕೂಲ್‌ನಲ್ಲಿ. ವಿಜ್ಞಾನದಲ್ಲಿ ಹೆಚ್ಚು ಆಸಕ್ತರಾಗಿದ್ದ ಅವರು ಪ್ರಾಜೆಕ್ಟ್ ಗಳನ್ನು ಸಿದ್ಧಪಡಿಸುವುದರಲ್ಲಿ ಎತ್ತಿದ ಕೈ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದರು. ಇಂತಹ ಅಪೂರ್ವ ನೆನಪುಗಳನ್ನು ಪ್ರಾಂಜಲ್‌ನ ಗೆಳೆಯರು ಸ್ಮರಿಸುತ್ತ ಗದ್ಗದಿತರಾಗುತ್ತಾರೆ.
ನಾವಿಬ್ಬರೂ ಆತ್ಮೀಯ ಸ್ನೇಹಿತರು. ನಾನು ಮೂರನೇ ತರಗತಿಯಲ್ಲಿದ್ದಾಗ ಪ್ರಾಂಜಲ್ ನನ್ನು ಭೇಟಿಯಾದೆ, ಸ್ನೇಹ ಕುದುರಿತು. ಒಟ್ಟಿಗೇ ವಿಜ್ಞಾನ ಪ್ರಾಜೆಕ್ಟ್ ಪ್ರದರ್ಶನಗಳಿಗೆ ಹೋಗುತ್ತಿದ್ದೆವು. ಆತನ ಕೋಣೆಯಲ್ಲಿ ಲಘು ಯುದ್ಧ ವಿಮಾನ, ಭಾರತೀಯ ವಾಯುಪಡೆಯ ಸ್ಫೂರ್ತಿದಾಯಕ ಫೋಟೋಗಳು ಅಂಟಿಸಿರುತ್ತಿದ್ದವು ಎನ್ನುತ್ತಾರೆ ಸ್ನೇಹಿತ, ಇಟಲಿಯಲ್ಲಿ ಉದ್ಯೋಗಿಯಾಗಿರುವ ಆದಿತ್ಯ ಸಾಯಿ ಶ್ರೀನಿವಾಸ್.
ದೇಶಸೇವೆಯ ಛಲ
ಚಿಕ್ಕಂದಿನಲ್ಲಿ ಪ್ರಾಂಜಲ್ ಕಬ್ಸ್, ಬಳಿಕ ಸ್ಕೌಟ್ಸ್‌ನಲ್ಲಿ ಸಕ್ರಿಯ ರಾಗಿದ್ದವರು. ದೇಶಸೇವೆ ಮಾಡಲೇ ಬೇಕೆಂಬ ಛಲ ಹುಟ್ಟಿನಿಂದಲೇ ಬಂದಿತ್ತು. ಇತರರಲ್ಲಿ ಇಲ್ಲದಿರುವ ಗಾಂಭೀರ್ಯ ಅವರಲ್ಲಿತ್ತು ಎಂದು ನೆನಪಿಸಿಕೊಂಡವರು ಮತ್ತೋರ್ವ ಸಹಪಾಠಿ ಎ.ಜೆ. ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿರುವ ವರ್ಷಾ ಶೆಟ್ಟಿ.
ಹೆತ್ತವರು ಮಗನ ಎಲ್ಲ ನಿರ್ಧಾರಗಳಿಗೆ ಬೆಂಬಲವಾಗಿ ದ್ದರು. ಅವರಲ್ಲಿ ಚಿಕ್ಕಂದಿನಲ್ಲೇ ನಾಯಕತ್ವ ಗುಣವಿತ್ತು, ಎಲ್ಲಕ್ಕಿಂತ ಮುಖ್ಯವಾಗಿ ಸಹಾಯ ಮಾಡುವ ಮನಸ್ಸು ಇತ್ತು. ವ್ಯಾಸಂಗದಲ್ಲೂ ಮುಂಚೂಣಿಯಲ್ಲಿದ್ದರು. ಪಿಯುಸಿ ಬಳಿಕ ಕೆಮಿಕಲ್ ಎಂಜಿ ನಿಯರಿಂಗ್ ಅಧ್ಯಯನಕ್ಕೆಂದು ಬೆಂಗಳೂರಿನ ಆರ್.ವಿ. ಕಾಲೇಜಿಗೆ ಸೇರಿದರೂ ಸೈನ್ಯಕ್ಕೆ ಸೇರುವ ಪ್ರಯತ್ನದಲ್ಲೇ ಇದ್ದರು. 4 ತಿಂಗಳಲ್ಲಿ ಕಾಲೇಜು ಬಿಟ್ಟು ಎನ್ ಡಿಎ ಸೇರುವ ಮೂಲಕ ಅದರಲ್ಲಿ ಯಶಸ್ವಿಯಾದರು.
ವಾಟ್ಸ್‌ಆ್ಯಪ್ ಬಳಗ ರಚಿಸಿದ್ದರು!
ನಾವೆಲ್ಲ ಬೇರೆ ಬೇರೆ ಕ್ಷೇತ್ರಗಳಿಗೆ ಸೇರಿ 10 ವರ್ಷ ಆಯಿತು. ಆದರೆ ಯಾವತ್ತೂ ಎಲ್ಲರನ್ನೂ ನೆನಪಿನಲ್ಲಿ ಇರಿಸಿಕೊಂಡಿದ್ದ ಪ್ರಾಂಜಲ್ ಸೇನೆಗೆ ಸೇರಿದ ಬಳಿಕವೂ 32 ಸಹಪಾಠಿಗಳನ್ನೂ ಒಟ್ಟು ಸೇರಿಸುವ ಯತ್ನದಲ್ಲಿದ್ದರು. ಶಾಲೆಯಲ್ಲಿ ರಿಯೂನಿಯನ್ ಮಾಡುವ ಆಸೆ ಹೊಂದಿದ್ದರು. ಅದಕ್ಕಾಗಿಯೇ ವಾಟ್ಸ್‌ಆ್ಯಪ್ ಗ್ರೂಪ್ ಕೂಡ ರಚಿಸಿದ್ದರು. ಆದರೆ ರಿಯೂನಿಯನ್ ಕನಸು ನನಸಾಗಲಿಲ್ಲ, ಈಗ ನಾವು ಅವರ ಗೌರವದಲ್ಲೇ ಶೀಘ್ರ ರಿಯೂನಿಯನ್ ಮಾಡುತ್ತೇವೆ ಎನ್ನುತ್ತಾರೆ ಸಹಪಾಠಿ ವರ್ಷಾ ಶೆಟ್ಟಿ.
ರಜೆ ಸಾರಿದ ಡಿಪಿಎಸ್ ಶಾಲೆ
ಸುರತ್ಕಲ್: ಜಮ್ಮುವಿನ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗ ದಲ್ಲಿ ಹುತಾತ್ಮರಾದ ವೀರಯೋಧ ಪ್ರಾಂಜಲ್ ಗೌರವಾರ್ಥ ಅವರು ಕಲಿತ ಸುರತ್ಕಲ್ ಸಮೀಪದ ಕುತ್ತೆತ್ತೂರು ಡಿಪಿಎಸ್ ಶಾಲೆಗೆ ಗುರುವಾರ ರಜೆ ಸಾರಲಾಗಿತ್ತು. ಅವರ ಹತ್ತಿರದ ಸ್ನೇಹಿತರಲ್ಲಿ ಹಲವರು ಅಂತಿಮ ದರ್ಶನಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.
ಚುರುಕುಮತಿಯಾಗಿದ್ದ ಪ್ರಾಂಜಲ್ ಎಳವೆಯಲ್ಲಿಯೇ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರು. ಸ್ಕೌಟ್ ಮೂಲಕ ಜೀವನದಲ್ಲಿ ಶಿಸ್ತು ಹಾಗೂ ಗುರಿಯನ್ನು ಕಂಡುಕೊಂಡು ಮುಂದಿದ್ದರು. ಸೈನ್ಯ ಸೇರುವ ಕನಸು ಆತನಲ್ಲಿ ಎಳವೆಯಲ್ಲಿಯೇ ಹುಟ್ಟಿಕೊಂಡಿತ್ತು. ಡಿಪಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೋದರೂ ಶಾಲೆಯನ್ನು ಮರೆಯಲಿಲ್ಲ. ಊರಿಗೆ ಬಂದಾಗಲೆಲ್ಲಾ ಭೇಟಿ ನೀಡುತ್ತಿದ್ದರು. ವೀರ ಯೋಧ ಪ್ರಾಂಜಲ್ ಕಳೆದ ಜೂನ್‌ನಲ್ಲಿ ನಿವೃತ್ತರಾದ ತನ್ನ ತಂದೆಯ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಶಾಲೆಗೂ ಭೇಟಿ ನೀಡಿ ಶಿಕ್ಷಕರ ಜತೆ ಸೌಹಾರ್ದವಾಗಿ ಮಾತನಾಡಿ ಹೋಗಿದ್ದರು ಎಂದು ಶಿಕ್ಷಕಿ ಸುಮಾ ಸ್ಮರಿಸಿಕೊಂಡರು.
ವೆಂಕಟೇಶ್ ಎಂ.ವಿ. ಅವರ ಕುಟುಂಬ ಸ್ನೇಹಿತ ಬಳಗದಲ್ಲಿರುವ ರಾಜೇಂದ್ರ ಕಲ್ಬಾವಿ ಅವರೂ ಪ್ರಾಂಜಲ್ ಅವರ ಸಂಯಮ, ನಡೆ ನುಡಿ, ಬಾಲ್ಯದಲ್ಲಿದ್ದ ದೇಶ ಪ್ರೇಮ, ಹಿರಿಯರಿಗೆ ನೀಡುವ ಗೌರವ, ಕುಟುಂಬದೊಂದಿಗಿನ ಸಂದರ್ಭ ವನ್ನು ಸ್ಮರಿಸಿಕೊಂಡರು. ದೇಶಕ್ಕಾಗಿ ಪ್ರಾಂಜಲ್ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶ ಅವರನ್ನು ಸದಾ ಸ್ಮರಿಸಿಕೊಳ್ಳಲಿದೆ. ಏಕೈಕ ಪುತ್ರನನ್ನು ದೇಶ ಸೇವೆಗೆ ಕಳಿಸಿದ ವೆಂಕಟೇಶ್ ದಂಪತಿಯ ದೇಶಪ್ರೇಮ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿಯೂ ಪ್ರಾಂಜಲ್ ಅವರಿಗೆ ಶ್ರದ್ಧಾಂಜಲಿ ಕೋರಿ ಪೋಸ್ಟರ್‌ಗಳು ಭಾರೀ ಪ್ರಮಾಣದಲ್ಲಿ ಪ್ರಸಾರವಾಗುತ್ತಿತ್ತು.