ಬೆಂಗಳೂರು: ವಿಲಾಸಿ ಜೀವನ ನಡೆಸಲು ಮನೆಗಳವನ್ನೇ ಕಸುಬು ಮಾಡಿಕೊಂಡಿರುವ ಕಳ್ಳ ಶಿವರಾಜ್ ಅಲಿಯಾಸ್ ಕಪ್ಪೆ ಹಾಗೂ ಆತನ ಸಹಚರನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಶಿವರಾಜ್ ಹಾಗೂ ಅರುಣ್ ಬಂಧನದಿಂದ ದಾವಣಗೆರೆ, ಮೈಸೂರು ಸೇರಿ ಹಲವೆಡೆ ನಡೆದಿದ್ದ ಏಳು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣ, 250 ಗ್ರಾಂ. ಬೆಳ್ಳಿ ಸಾಮಗ್ರಿ, ಕಾರು, ಒಂದು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.
ಶಿವರಾಜ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳಿವೆ. ದಿನವಿಡೀ ನಗರದಲ್ಲಿ ಕಾರು ಅಥವಾ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಆರೋಪಿ, ಬೀಗ ಹಾಕಿದ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದ. ಬಳಿಕ ರಾತ್ರಿ ಸಹಚರನ ಜತೆ ಕಳ್ಳತನ ಮಾಡುತ್ತಿದ್ದ. ಕದ್ದ ಆಭರಣಗಳನ್ನು ಮಾರಿದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದ.
ಮಸಾಜ್ ಪಾರ್ಲರ್ ಹುಚ್ಚು: ಆರೋಪಿ ಶಿವರಾಜ್‌ಗೆ ಮಸಾಜ್ ಪಾರ್ಲರ್‌ಗೆ ಹೋಗುವುದು ಶೋಕಿ. ಕಳವು ಮಾಡಿದ ಬಳಿಕ ತಪ್ಪದೇ ಪಾರ್ಲರ್‌ಗೆ ಹೋಗಿ, ದಿನಗಟ್ಟಲೆ ಕಳೆಯುತ್ತಿದ್ದ. ಹಣ ಖಾಲಿಯಾಗುವ ತನಕ ಮತ್ತೆ ಕಳ್ಳತನಕ್ಕೆ ಇಳಿಯುತ್ತಿರಲಿಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಅಜಿತ್ ಗ್ಯಾಂಗ್ ಬಂಧನ – 30 ಲಕ್ಷ ಮೌಲ್ಯದ ವಸ್ತು ಜಪ್ತಿ: ಬಿಬಿಎಂಪಿ ಅಧಿಕಾರಿಯನ್ನು ಅಡ್ಡಗಟ್ಟಿ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕೆಂಪೇಗೌಡ ನಗರ ಠಾಣೆ ಪೊಲೀಸರು, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ. ಅಜಿತ್‌ಕುಮಾರ್, ರಾಜು, ಅಪ್ಪು ಬಂಧಿತರು.
ತಲೆಮರೆಸಿಕೊಂಡಿರುವ ಚಾಪು ಹಾಗೂ ಕಾಂತಾ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾ.13ರಂದು ರಾತ್ರಿ 9 ಗಂಟೆಗೆ ಕೆಂಪಾಂಬುಧಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಿಬಿಎಂಪಿ ಅಧಿಕಾರಿಗೆ ಆರೋಪಿಗಳು ಚಾಕು ತೋರಿಸಿ, ಚಿನ್ನದ ಸರಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ದಾಖಲಾದ ಪ್ರಕರಣದ ಅನ್ವಯ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕೋರಮಂಗಲ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಂಎಗಳ ವ್ಯಾಪ್ತಿಯಲ್ಲಿ ನಡೆಸಿದ್ದ ಮನೆಕಳವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದರು.