ಮಂಗಳೂರು : 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಬಳಿಕ ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನ, ರಾಷ್ಟ್ರೀಯ ಮೌಲ್ಯಗಳ ಪ್ರತಿಬಿಂಬ, ದೇಶದ ಕಾನೂನಿನಲ್ಲಿ ಅಗತ್ಯ ಬದಲಾವಣೆ ಸೇರಿದಂತೆ ಅನೇಕ ನಿರ್ಧಾರಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿದೆ. ವಿಶ್ವದ ಎದುರು ಭಾರತ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೋವಿಡ್ ಬಳಿಕ ಜಗತ್ತಿನಲ್ಲಿ ಆರ್ಥಿಕ ವ್ಯತ್ಯಯಗಳು ಸಂಭವಿಸಿದಾಗ ಭಾರತದ ಜಿಡಿಪಿ, ಕರೆನ್ಸಿ ಇತರ ದೇಶಗಳಿಗೆ ಹೋಲಿಸಿದರೆ ಅಷ್ಟಾಗಿ ಅಪಮೌಲ್ಯವಾಗಿಲ್ಲ. ಅಮೆರಿಕದಲ್ಲಿ ಕೂಡ ಹಣದುಬ್ಬರ ಪರಿಸ್ಥಿತಿ ಉಂಟಾಗಿದೆ ಎಂದರು.
ಉಕ್ರೇನ್ ಯುದ್ಧ ಸಂದರ್ಭ ಭಾರತ ರಾಜತಾಂತ್ರಿಕವಾಗಿ ನಿಲುವು ತೆಗೆದುಕೊಂಡಿದೆ. ಭಾರತದ ಡಿಜಿಪಿ ಶೇ. 8.7ರ ಬೆಳವಣಿಗೆ ಬಗ್ಗೆ ವಿಶ್ವ ಹಣಕಾಸು ಸಂಸ್ಥೆ ಹೇಳಿದೆ. ಭಾರತದಲ್ಲಿ ನಿರುದ್ಯೋಗ ಬೃಹತ್ ಸಂಖ್ಯೆಯಲ್ಲಿ ಇರುತ್ತಿದ್ದರೆ, ಅಗಾಧ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹ ಹೇಗೆ ಸಾಧ್ಯ? ಇನ್ನೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗಬೇಕಾಗಿದ್ದು, ಅದಕ್ಕಾಗಿ ಕೌಶಲ ಸುಧಾರಣೆಯಾಗಬೇಕಿದೆ, ಅದಕ್ಕೆ ಪೂರಕವಾಗಿ ಸ್ಕಿಲ್ ಇಂಡಿಯಾ ಮಾದರಿಯ ಯೋಜನೆ ರೂಪಿಸಲಾಗಿದೆ ಎಂದರು.
ಪ್ರವಾದಿ ನಿಂದನೆ ಆರೋಪಕ್ಕೆ ಒಳಗಾದ ಬಿಜೆಪಿ ಮಾಜಿ ವಕ್ತಾರೆ ನೂಪುರ ಶರ್ಮಾ ಮಾಡಿರುವ ಪ್ರವಾದಿ ನಿಂದನೆಯಂತಹ ಘಟನೆ ನಡೆದಾಗ ಆ ಬಗ್ಗೆ ಕೇಂದ್ರ ಸರಕಾರವೇ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಅಂತಾರಾಷ್ಟ್ರೀಯ ಸ್ತರದಲ್ಲಿ ವಿವಾದ ತಲೆದೋರಿದ ಕಾರಣ ಪಕ್ಷ ಕೂಡ ನೂಪುರ ಶರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸುವ ತೀರ್ಮಾನ ಕೈಗೊಳ್ಳಬೇಕಾಯಿತು ಎಂದರು.
ಸಂವೇದನಾಶೀಲ ಸರಕಾರ
ಪ್ರಧಾನಿಯಾಗಿ ನರೇಂದ್ರ ಮೋದಿ 8 ವರ್ಷಗಳಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುವ ಮೂಲಕ ಇದೊಂದು ಸಂವೇದನಾಶೀಲ ಸರಕಾರವಾಗಿದೆ. ಸ್ವತ್ಛ ಭಾರತ್, ಮನ್‌ಕಿ ಬಾತ್, ಆಂತರಿಕ ಭದ್ರತೆ, ಪಾರದರ್ಶಕತೆ, ಮೂಲಸೌಕರ್ಯ, ವಿದೇಶಾಂಗ ನೀತಿ, ಚೀನ ವಿರುದ್ಧ ಆಮದು ನೀತಿ, ಆತ್ಮನಿರ್ಭರ ಭಾರತ ಪರಿಕಲ್ಪನೆ, ಕೋವಿಡ್ ಲಸಿಕೆ ಪೂರೈಕೆ, ಗರೀಬ್ ಕಲ್ಯಾಣ್ ಯೋಜನೆ, ಕೃಷಿ ಆದಾಯ, ಹೊಸ ಶಿಕ್ಷಣ ನೀತಿ, ಎನ್‌ಆರ್‌ಸಿ, ಸಿಎಎ, ಜಾಗತಿಕ ಉತ್ಪಾದನಾ ಕೇಂದ್ರವಾಗಿಸಲು ಕೈಗೊಂಡ ಕ್ರಮಗಳು ಭಾರತದ ಬಗ್ಗೆ ಮೋದಿ ಅವರ ವಿಶ್ವಾಸ ನಾಯಕತ್ವದ ಪರಿಣಾಮಕ್ಕೆ ಸಾಕ್ಷಿಯಾಗಿದೆ. ಭ್ರಷ್ಟಾಚಾರ ರಹಿತವಾಗಿ, ಅಭಿವೃದ್ಧಿಯನ್ನು ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಗೆಲ್ಲಲಾಗಿದೆ ಎಂದರು.
ಮುಡಾ ಅಧ್ಯಕ್ಷ ಹಾಗೂ ಬಿಜೆಪಿ ವಕ್ತಾರ ರವಿಶಂಕರ ಮಿಜಾರು, ರಂದೀಪ್ ಕಾಂಚನ್, ಸಂದೇಶ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.