Advertisement

ತೂಕದಲ್ಲೂ ಕ್ಯಾಪ್ಟನ್‌ ಅರ್ಜುನನೇ ನಂಬರ್‌ 1

11:32 AM Aug 19, 2017 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಲಕ್ಷಾಂತರ ಜನರ ಗೌಜು ಗದ್ದಲದ ನಡುವೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗುವ ಅರ್ಜುನನನ್ನು ತೂಕದಲ್ಲೂ ಇತರೆ ಆನೆಗಳು ಮೀರಿಸಲಾಗಿಲ್ಲ.

Advertisement

ದಸರಾ ಗಜಪಡೆ ಅರಮನೆ ಪ್ರವೇಶಿಸಿದ ನಂತರ ವಾಡಿಕೆಯಂತೆ ಎಲ್ಲ ಆನೆಗಳನ್ನು ತೂಕ ಮಾಡಿಸಿದ ನಂತರ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಆನೆಗಳ ತಾಲೀಮು ನಡೆಸಲಾಗುತ್ತದೆ. ಅದರಂತೆ, ಶುಕ್ರವಾರ ಬೆಳಗ್ಗೆ ನಗರದ ಧನ್ವಂತರಿ ರಸ್ತೆಯಲ್ಲಿನ ಸಾಯಿರಾಮ್‌ ಅಂಡ್‌ ಕಂ. ಎಲೆಕ್ಟ್ರಾನಿಕ್‌ ವೇ ಬ್ರಿಡ್ಜ್ ಕೇಂದ್ರದಲ್ಲಿ ಎಲ್ಲಾ ಎಂಟು ಆನೆಗಳನ್ನು ತೂಕ ಮಾಡಿಸಲಾಯಿತು.

ಗಜಪಡೆಯ ಕ್ಯಾಪ್ಟನ್‌ ಅರ್ಜುನ ಬರೋಬ್ಬರಿ 5250 ಕೆಜಿ ತೂಕ ಇದ್ದಾನೆ. ಆದರೆ, ಕಳೆದ ವರ್ಷ ದಸರೆ ಮುಗಿದ ನಂತರ ಮೈಸೂರಿನಿಂದ ಕಾಡಿಗೆ ಕಳುಹಿಸಿಕೊಡುವಾಗ 5870 ಕೆ.ಜಿ ತೂಕವಿದ್ದ ಅರ್ಜುನ, ಈ ಒಂದು ವರ್ಷದಲ್ಲಿ 620 ಕೆ.ಜಿ ತೂಕ ಕಳೆದುಕೊಂಡಿದ್ದಾನೆ. ದಸರಾ ಗಜಪಡೆಯಲ್ಲೇ ಅತ್ಯಂತ ಬಲಶಾಲಿಯಾಗಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ 4990 ಕೆ.ಜಿ ತೂಕವಿದ್ದು, 580 ಕೆಜಿ ತೂಕ ಕಳೆದುಕೊಂಡಿದೆ.

ಅಭಿಮನ್ಯು 4850 ಕೆಜಿ ತೂಕವಿದ್ದು, 420 ಕೆಜಿ ತೂಕ ಕಳೆದುಕೊಂಡಿದೆ. ವಿಜಯ ಆನೆ 2770 ಕೆಜಿ ತೂಕವಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 85 ಕೆಜಿ ತೂಕ ಕಳೆದುಕೊಂಡಿದೆ. ಗಜೇಂದ್ರ ಆನೆ 4600 ಕೆಜಿ ತೂಕ, ಕಾವೇರಿ 2820 ಕೆಜಿ, ವರಲಕ್ಷ್ಮೀ 2830 ಕೆಜಿ ತೂಕ ಇದೆ. ಇನ್ನು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಕರೆತರಲಾಗಿರುವ ಆನೆಚೌಕೂರು ವಲಯದ ಭೀಮಕಟ್ಟೆ ಬಳಿ ಅನಾಥವಾಗಿ ದೊರೆತಿದ್ದ ಅಂದಾಜು 17 ವರ್ಷ ವಯಸ್ಸಿನ ಭೀಮ 3410 ಕೆಜಿ ತೂಕವಿದೆ.

ವಿಶೇಷ ಆಹಾರ: ಗಜಪಡೆಗೆ ಶುಕ್ರವಾರದಿಂದ ವಿಶೇಷ ಆಹಾರವನ್ನು ನೀಡಲಾಗುತ್ತಿದೆ. ಭತ್ತದ ಒಣಹುಲ್ಲಿನ ಕುಸುರೆ ಕಟ್ಟಿ ಅದರ ಒಳಗೆ ಹಿಡಿಯಷ್ಟು ಭತ್ತ ಹಾಕಿ ನಿತ್ಯ ಎರಡು ಬಾರಿ ನೀಡಲಾಗುತ್ತದೆ. ಜತೆಗೆ ಹೆಸರುಕಾಳು, ಉದ್ದಿನಕಾಳು, ಕುಚಲಅಕ್ಕಿ, ಗೋಧಿಯ ಜತೆಗೆ ಈರುಳ್ಳಿಯನ್ನು ಹಾಕಿ ಬೇಯಿಸಿ, ಆರಿಸಿದ ನಂತರ ಅದಕ್ಕೆ ತುಪ್ಪ ಬೆರಸಿ, ಪ್ರತಿಯೊಂದು ಆನೆಗಳಿಗೂ ನೀಡಲಾಗುತ್ತದೆ.

Advertisement

ಆರೈಕೆಯಲ್ಲಿ ಮಾವುತರು: ಅರ್ಜುನನ ಮಾವುತ ಸಣ್ಣಪ್ಪ ಹಾಗೂ ಕವಾಡಿ ವಿನು, ಬಲರಾಮನ ಮಾವುತ ತಿಮ್ಮ ಮತ್ತು ಕವಾಡಿ ಗೋಪಾಲ, ಅಭಿಮನ್ಯುವಿನ ಮಾವುತ ವಸಂತ ಮತ್ತು ಕವಾಡಿ ರಾಜು, ಗಜೇಂದ್ರನ ಮಾವುತ ಶಂಕರ ಮತ್ತು ಕವಾಡಿ ಸುನಿಲ್‌, ಭೀಮನ ಮಾವುತ ರಾಧಾಕೃಷ್ಣ ಮತ್ತು ಕವಾಡಿ ರಾಜು, ಕಾವೇರಿಯ ಮಾವುತ ದೋಬಿ ಮತ್ತು ಕವಾಡಿ ರಘು, ವಿಜಯ ಆನೆಯ ಮಾವುತ ಭೋಜಪ್ಪ ಮತ್ತು ಕವಾಡಿ ದೊರೆಯಪ್ಪ, ವರಲಕ್ಷ್ಮೀ ಆನೆಯ ಮಾವುತ ಗುಂಡ ಮತ್ತು ಕವಾಡಿ ಚಿನ್ನ ಅವರುಗಳು ಅರಮನೆ ಆವರಣದ ಆನೆ ಕ್ಯಾಂಪ್‌ನಲ್ಲಿ ಆನೆಗಳಿಗೆ ಮಜ್ಜನ ಮಾಡಿಸುವ, ಕುಸುರೆ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು, ಗಜಪಡೆಯ ವಿಶೇಷ ಆರೈಕೆಯಲ್ಲಿ ತೊಡಗಿದ್ದಾರೆ.

ಅರ್ಜುನನಿಗೆ ವಿಶೇಷ ಮುತುವರ್ಜಿವಹಿಸಿ ಆಹಾರ ನೀಡಲಾಗುತ್ತದೆ. ಕಬ್ಬು, ಕೊಬ್ಬರಿ, ಬೆಲ್ಲ, ಬೆಣ್ಣೆಯನ್ನು ತಿನ್ನಿಸಿ ದಷ್ಟಪುಷ್ಟಗೊಳಿಸಿ ಚಿನ್ನದ ಅಂಬಾರಿ ಹೊರಲು ಪುಷ್ಟಿ ನೀಡಲಾಗುತ್ತದೆ. ಜತೆಗೆ ಎಲ್ಲಾ ಆನೆಗಳ ಹಣೆಗೂ ಹರಳೆಣ್ಣೆ ಹಚ್ಚಿ, ನಿತ್ಯ ಮಜ್ಜನ ಮಾಡಿಸಲಾಗುತ್ತದೆ.
-ಡಾ.ನಾಗರಾಜ್‌, ಅರಣ್ಯ ಇಲಾಖೆ ಪಶುವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next