Advertisement

ಕ್ಯಾಪ್ಸಿಕಾಮ್‌ ಇನ್‌ಕಮ್‌

11:46 AM May 28, 2019 | Sriram |

ಬನಹಟ್ಟಿಯ ಗೊಲಭಾ ಗ್ರಾಮದ ರಮೇಶ ಸವದಿ ಬಿ.ಎ, ಎಲ್‌ಎಲ್‌ಬಿ
ಪದವೀದರರು. ವಕೀಲ ವೃತ್ತಿಯ ಜೊತೆಗೆ ಕೃಷಿಯಲ್ಲಿ ನೂತನ ಪ್ರಯೋಗಗಳನ್ನು ಮಾಡುತ್ತಾ ಸಾಕಷ್ಟು ಲಾಭವನ್ನೂ ಮಾಡುತ್ತಿದ್ದಾರೆ. ತೋಟದಲ್ಲಿ ಕ್ಯಾಪ್ಸಿಕಾಂ(ಡಬ್ಬು ಮೆನಸಿನಕಾಯಿ) ಬೆಳೆದು ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

Advertisement

ಕೇವಲ ಕಬ್ಬು ಅರಿಶಿಣದಂಥ ವಾಣಿಜ್ಯ ಬೆಳೆ ಮಾತ್ರ ಬೆಳೆಯದೆ, ಸ್ವಲ್ಪ ಕಠಿಣ ಪರಿಶ್ರಮವನ್ನು ಹಾಕಿದರೆ ಐದಾರು ತಿಂಗಳಲ್ಲಿ ಲಕ್ಷಾಂತರ ರೂ. ಲಾಭ ಪಡೆಯಬಹುದು ಎಂಬುದಕ್ಕೆ ರಮೇಶ ಸವದಿ ಮಾದರಿಯಾಗಿದ್ದಾರೆ.
ಪ್ರಸ್ತುತ ರಮೇಶ, ತಮ್ಮ ತೋಟದ ಮೂವತ್ತು ಗುಂಟೆಯಲ್ಲಿ ನೆಟ್‌ ಹೌಸ್‌ ನಿರ್ಮಿಸಿದ್ದಾರೆ. ಎಸ್‌ಎಸ್‌ಪಿ 3ಚೀಲ, ಯೂರಿಯಾ 30 ಕೆ.ಜಿ, ಪೊಟ್ಯಾಶ್‌ 1ಚೀಲ, ಮೈಕ್ರೋ ನ್ಯೂಟ್ರಂಟ್‌ 5 ಕೆ.ಜಿ, ಬೇವಿನ ಹಿಂಡಿ 4 ಕೆ.ಜಿ ಸೇರಿಸಿ ಬೆಡ್‌ ಮಾಡಿಕೊಂಡಿದ್ದಾರೆ. ಸಾಲಿನಿಂದ ಸಾಲಿಗೆ 6 ಅಡಿಯಂತೆ ಜಿಗಜಾಗ್‌ ಪದ್ಧತಿಯಲ್ಲಿ ಇಂದ್ರಾ ತಳಿಯ ಒಟ್ಟು ಹತ್ತು ಸಾವಿರ ಕ್ಯಾಪ್ಸಿಕಾಮ್‌ ಸಸಿಗಳನ್ನು ನಾಟಿ ಮಾಡಿದ್ದಾರೆ. ನಂತರದ ಐವತ್ತು ದಿನಗಳಲ್ಲಿ ಕಾಯಿಗಳು ಕಟಾವಿಗೆ ಬರುತ್ತವೆ. ಹವಾಗುಣಕ್ಕೆ ತಕ್ಕಂತೆ ಬರುವ ರೋಗಗಳಿಗೆ ಔಷಧಿಯನ್ನು ಸಿಂಪರಿಸಲಾಗಿದೆ. ಕೃಷಿ ಹೊಂಡ ನಿರ್ಮಿಸಿಕೊಂಡು ಅಲ್ಲಿಂದ ಡ್ರಿಪ್‌ ಮೂಲಕ ಜೀವಾಮೃತ ಹಾಯಿಸುತ್ತಿದ್ದಾರೆ ರಮೇಶ್‌.

ಒಂದು ಗಿಡ ಅಂದಾಜು ಮೂರು ಕೆ.ಜಿ.ಯಷ್ಟು ಕಾಯಿಗಳನ್ನು ಕೊಡುತ್ತದೆ. ಆರು ತಿಂಗಳ ಅವಧಿಯಲ್ಲಿ ಅಂದಾಜು ಇಪ್ಪತೈದು ಟನ್‌ ಬೆಳೆಯನ್ನು ಪಡೆದುಕೊಳ್ಳಬಹುದು. ಸದ್ಯ ಮಾರುಕಟ್ಟೆಯಲ್ಲಿ ಕ್ಯಾಪ್ಸಿಕಾಮ್‌ ಒಂದು ಕೆ.ಜಿಗೆ 35ರೂ. ನಿಂದ 40ರೂ. ರವರೆಗೆ ಮಾರಾಟವಾಗುತ್ತಿದೆ. ಇದಕ್ಕೆ ಬೆಳಗಾವಿ ಪ್ರಮುಖ ಮಾರುಕಟ್ಟೆ. ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದರಿಂದ ಹೂಗಳು ಉದುರುತ್ತಿವೆ. ಇದರಿಂದಾಗಿ ಸ್ವಲ್ಪ ಪ್ರಮಾಣದ ಲಾಭ ಕಡಿಮೆಯಾಗಿದೆ. ಕಡಿಮೆ ಅವಧಿಯ ಬೆಳೆಗಳಿಗೆ ಸ್ವಲ್ಪ ಶ್ರಮ ಹಾಕಿದರೆ ಉತ್ತಮವಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ರಮೇಶ ಸವದಿ.

ತೋಟದಲ್ಲಿ ನಿಂತಾಗ ಕ್ಯಾಪ್ಸಿಕಾಂದ ವಾಸನೆ ಬರುತ್ತದೆ. ಇದಕ್ಕೆ ಕಾರಣ, ಅವರು ಹೆಚ್ಚಾಗಿ ರಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಗೊಬ್ಬರವನ್ನು ಮಾತ್ರ ಹಾಕುತ್ತಾರೆ. ತೀರಾ ಅವಶ್ಯವಿದ್ದಾಗ ಮಾತ್ರ ರಸಾಯನಿಕ ಗೊಬ್ಬರ ಬಳಸುತ್ತೇನೆ ಎನ್ನುತ್ತಾರೆ ರಮೇಶ.
ಸಾಧನೆಗೆ ಕೃಷಿಪಂಡಿತ, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.

– ಕಿರಣ ಶೀಶೈಲ ಆಳಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next