ಶಹಾಬಾದ: ಬಂಡವಾಳಶಾಹಿ ವ್ಯವಸ್ಥೆಯ ಕೊನೆಗಾಲ ಹತ್ತಿರವಾಗುತ್ತಿದೆ. ಕಾರ್ಖಾನೆಗಳು ಮುಚ್ಚುತ್ತಿವೆ, ನಿರುದ್ಯೋಗ ಹೆಚ್ಚಾಗುತ್ತಿದೆ. ಎಲ್ಲೆಡೆ ಬಂಡವಾಳಶಾಹಿ ವ್ಯವಸ್ಥೆ ಜನರ ಹಕ್ಕುಗಳನ್ನು ಕಸಿಯುತ್ತಿದೆ, ಬದುಕನ್ನು ದುಸ್ತರಗೊಳಿಸುತ್ತಿವೆ ಎಂದು ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಕೇಂದ್ರ ಸಮಿತಿ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ. ರಾಧಾಕೃಷ್ಣ ಆಪಾದಿಸಿದರು.
ಎಸ್.ಯೂ.ಸಿ.ಐ ಕಮ್ಯೂನಿಸ್ಟ್ ಪಕ್ಷದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿ ಗಣಪತಾರಾವ್ ಕೆ. ಮಾನೆ
ಅವರ ಚುನಾವಣೆ ಪ್ರಚಾರದ ಅಂಗವಾಗಿ ಮಂಗಳವಾರ ನಗರದ ರೈಲ್ವೆ ಸ್ಟೇಶನ್ ಬಳಿ ಆಯೋಜಿಸಲಾಗಿದ್ದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣೆಯ ಮೂಲಕ ಯಾವುದೇ ಮೂಲಭೂತ ಪರಿಹಾರ ಸಾಧ್ಯವಾಗುತ್ತಿಲ್ಲ ಎನ್ನುವುದು ಕಳೆದ 70 ವರ್ಷಗಳಲ್ಲಿ ಸಿದ್ಧವಾಗಿದೆ. ಅದನ್ನು ಜನತೆ ಇಂದು ಗುರುತಿಸಬೇಕಾಗಿದೆ ಎಂದರು. ಇಲ್ಲಿರುವುದು ಎರಡೇ ವರ್ಗ: ಇಡೀ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಆಗರ್ಭ ಶ್ರೀಮಂತರಾಗುತ್ತಿರುವ ಕೆಲವೇ ಕೆಲವು ಬಂಡವಾಳಶಾಹಿಗಳು, ಇನ್ನೊಂದೆಡೆ ಇಡೀ ಸಂಪತ್ತನ್ನು ಸೃಷ್ಟಿಸುವ ಬಹುದೊಡ್ಡ ಕಾರ್ಮಿಕ ವರ್ಗ ಎಂದು ಹೇಳಿದರು.
ಕಾಮ್ರೇಡ್ ಎಚ್. ವ್ಹಿ. ದಿವಾಕರ್ ಮಾತನಾಡಿದರು. ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಅಭ್ಯರ್ಥಿಯಾದ ಗಣಪತರಾವ್ ಮಾನೆ, ಕಾ. ರಾಮಣ್ಣ. ಎಸ್.ಇಬ್ರಾಹಿಂಪುರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಕಾ.ವಿ. ನಾಗಮ್ಮಾಳ, ಕಾ. ಆರ್.ಕೆ. ವೀರಭದ್ರ ಹಾಗೂ ಬೆಂಬಲಿಗರು ಇದ್ದರು.