Advertisement

ಕ್ಯಾಪಿಟಲ್ ಗೈನ್ಸ್‌ ಟ್ಯಾಕ್ಸ್‌ –ಈ ಬಾರಿ ಲೆಕ್ಕಾಚಾರ ಹೇಗೆ?

02:18 AM Aug 05, 2019 | mahesh |

ಆದಾಯ ತೆರಿಗೆ ಕಾನೂನಿನ ಪ್ರಕಾರ ಕ್ಯಾಪಿಟಲ್ ಅಥವಾ ಮೂಲಧನ ಎಂದರೆ ಭೂಮಿ, ಮನೆ, ಕಟ್ಟಡ, ಚಿನ್ನ, ಶೇರು, ಮ್ಯೂಚುವಲ್ ಫ‌ಂಡ್‌, ಬಾಂಡ್‌ ಇತ್ಯಾದಿ ಇತ್ಯಾದಿ ಆಸ್ತಿಗಳು. ಅಂತಹ ಆಸ್ತಿಗಳಿಂದ ಆಗಾಗ್ಗೆ ನಮ್ಮ ಕೈಗೆ ಬರುವ ಬರುವ ಬಾಡಿಗೆ, ಡಿವಿಡೆಂಡ್‌ ಇತ್ಯಾದಿಗಳು ಆದಾಯ ಕರದ ಭಾಷೆಯಲ್ಲಿ ‘ಇತರ ಆದಾಯ’ ಆಗುತ್ತದೆ. ಬಾಡಿಗೆ ಆದಾಯದಿಂದ ಅನ್ವಯ ರಿಯಾಯಿತಿಗಳನ್ನು ಕಳೆದು ಸಂಬಳ, ಬಿಸಿನೆಸ್‌ ಇತ್ಯಾದಿ ಆದಾಯಗಳೊಂದಿಗೆ ಜೊತೆಗೂಡಿ ಯಥಾ ಪ್ರಕಾರ ತೆರಿಗೆ ಕಟ್ಟಬೇಕು. ಶೇರು, ಮ್ಯೂಚುವಲ್ ಫ‌ಂಡುಗಳ ಡಿವಿಡೆಂಡ್‌ ಆದಾಯ ಪಡೆದವರ ಕೈಯಲ್ಲಿ ಕರಮುಕ್ತ; ಆದರೆ ಅದಕ್ಕೆ ಕಂಪೆನಿ ಅಥವಾ ಮ್ಯೂಚುವಲ್ ಫ‌ಂಡುಗಳೇ ಮೂಲದಲ್ಲಿ ಡಿವಿಡೆಂಟ್ ಡಿಸ್ಟ್ರಿಬ್ಯೂಶನ್‌ ಟ್ಯಾಕ್ಸ್‌ (ಡಿಡಿಟಿ) ಕಟ್ಟಿರುತ್ತಾರೆ. ಈಕ್ವಿಟಿ ಮೇಲೆ ಮತ್ತು ಕನಿಷ್ಠ ಶೇ.65 ಈಕ್ವಿಟಿ ಇರುವ ಈಕ್ವಿಟಿ ಪ್ರಾಧಾನ್ಯ ಫ‌ಂಡುಗಳ (Equity Oriented Funds or EOF) ಮೇಲೆ ಶೇ.10 ಡಿಡಿಟಿ ಮತ್ತು ಶೇ.12 ಸರ್ಚಾರ್ಜ್‌ ಮತ್ತು ಶೇ.4 ಎಜುಕೇಶನ್‌ ಸೆಸ್‌ (ಒಟ್ಟು ಶೇ.11.648 ಇರುತ್ತದೆ). ಡೆಟ್ ಮತ್ತು ಇತರ (ಶೇ.65ಕ್ಕಿಂತ ಕಡಿಮೆ ಈಕ್ವಿಟಿಯ) ಫ‌ಂಡುಗಳ ಮೇಲೆ ಶೇ.25 ಡಿಡಿಟಿ, ಶೇ.12 ಸರ್ಚಾರ್ಜ್‌ ಮತ್ತು ಶೇ.4 ಎಜುಕೇಶನ್‌ ಸೆಸ್‌ (ಒಟ್ಟು ಶೇ.29.12 ಇರುತ್ತದೆ) – ಈ ರೀತಿ ಕ್ಯಾಪಿಟಲ್ ಆಸ್ತಿ ಮೇಲೆ ಬರುವ ಆದಾಯದ ಮೇಲೆ ಕರಕಾನೂನು ಅನ್ವಯವಾಗುತ್ತದೆ.

Advertisement

ಇವಿಷ್ಟು ಕ್ಯಾಪಿಟಲ್ ಆಸ್ತಿಗಳಿಂದ ವರ್ಷ ವರ್ಷ ಬರುವ ಆದಾಯದ ಮಾತಾಯ್ತು. ಆದರೆ ಅದೇ ಭೂಮಿ, ಚಿನ್ನ, ಶೇರು, ಮ್ಯೂಚುವಲ್ ಫ‌ಂಡ್‌ ಇತ್ಯಾದಿ ಕ್ಯಾಪಿಟಲ್ ಆಸ್ತಿಯನ್ನು ಕೊನೆಗೊಮ್ಮೆ ಮಾರಿಬಿಟ್ಟಾಗ ಬರುವ ಮೂಲ ವೆಚ್ಚ ಹಾಗೂ ಅಭಿವೃದ್ಧಿ ವೆಚ್ಚವನ್ನು ಕಳೆದು ಬರುವ ಲಾಭವನ್ನು ಕಾಪಿಟಲ್ ಗೈನ್ಸ್‌ (ಕ್ಯಾಪಿಟಲ್ ಗಳಿಕೆ) ಅನ್ನುತ್ತಾರೆ. ಕರ ಲೆಕ್ಕಾಚಾರದ ದೃಷ್ಟಿಯಿಂದ ಈ ಕ್ಯಾಪಿಟಲ್ ಗಳಿಕೆಯನ್ನು ಬೇರೆ ಆದಾಯಗಳ ರೀತಿಯಲ್ಲಿ ಲೆಕ್ಕ ಹಾಕುವುದಿಲ್ಲ. ಅದಕ್ಕೆ ಅದರದ್ದೇ ಪ್ರತ್ಯೇಕವಾದ ವಿಶೇಷ ಲೆಕ್ಕಾಚಾರವಿದೆ.

ಕಾಪಿಟಲ್ ಗಳಿಕೆಯನ್ನು ದೀರ್ಘ‌ಕಾಲಿಕ (Long term Capital Gains) ಹಾಗೂ ಅಲ್ಪ ಕಾಲಿಕ (Short Term Capital gains) ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಷ್ಟೇ ಅಲ್ಲದೆ ಯಾವ ನಮೂನೆಯ ಕ್ಯಾಪಿಟಲ್ ಎನ್ನುವುದರ ಮೇಲೆ ಭೌತಿಕ ಮತ್ತು ವಿತ್ತೀಯ ಎಂಬ ಇನ್ನೆರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿತ್ತೀಯದ ಒಳಗೂ ಈಕ್ವಿಟಿ ಮತ್ತು ಈಕ್ವಿಟಿಯೇತರ ಹಾಗೂ ಈಕ್ವಿಟಿಯ ಒಳಗೆ ಎಸ್‌.ಟಿ.ಟಿ. (Securities Transaction Tax) ತೆತ್ತ ಹಾಗೂ ತೆರದ – ಹೀಗೆ ಇನ್ನೆರಡು ಕೆಟಗರಿಯಾನುಸಾರ ಕಾಪಿಟಲ್ ಗೈನ್ಸ್‌ ಟ್ಯಾಕ್ಸ್‌ ಬೇರೆ ಬೇರೆ ದರಗಳಲ್ಲಿ ವಿಧಿಸಲ್ಪಡುತ್ತದೆ. (ಟೇಬಲ್ ನೋಡಿ)

ಗ್ರಾಮೀಣ ಕೃಷಿ ಭೂಮಿ
ಮೊತ್ತ ಮೊದಲನೆಯದಾಗಿ ಕೃಷಿ ಭೂಮಿಯ ಮಾರಾಟದ ಮೇಲೆ ಯಾವುದೇ ರೀತಿಯ ಕ್ಯಾಪಿಟಲ್ ಗೈನ್ಸ್‌ ತೆರಿಗೆ ಇರುವುದಿಲ್ಲ. ಆದರೆ ಇದು ಎಲ್ಲಾ ರೀತಿಯ ಕೃಷಿ ಭೂಮಿಯ ಮೇಲೆ ಅನ್ವಯವಾಗುವುದಿಲ್ಲ ಎನ್ನುವುದು ಬಹಳಷ್ಟು ಜನರಿಗೆ ಅರಿವಿಲ್ಲ. ಕೇವಲ ಗ್ರಾಮೀಣ ಪ್ರದೇಶದ ಕೃಷಿ ಭೂಮಿಯ ಮೇಲೆ ಮಾತ್ರ ಈ ಶೂನ್ಯ ಕರದ ಸವಲತ್ತನ್ನು ನೀಡಲಾಗಿದೆ. ಯಾವುದು ಗ್ರಾಮೀಣ ಯಾವುದು ಟೌನ್‌ ಎನ್ನುವುದಕ್ಕೂ ಕಾನೂನಿನಲ್ಲಿ ಸ್ಪಷ್ಟವಾದ ಉಲ್ಲೇಖ ಇದೆ. ಈ ಕೆಳಗೆ ಕಾಣಿಸಿದ ಪ್ರದೇಶಗಳನ್ನು ಮಾತ್ರವೇ ಗ್ರಾಮೀಣ ಪ್ರದೇಶವೆಂದು ಪರಿಗಣಿಸಲಾಗುತ್ತದೆ:

1.ಹತ್ತು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿನ ಒಳಗಿನ ಪ್ರದೇಶ.

Advertisement

2.ಹತ್ತು ಸಾವಿರಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಲಿಮಿಟಿಗಿಂತ 2 ಕಿ.ಮೀ ವರೆಗಿನ ಪ್ರದೇಶ.

3.ಒಂದು ಲಕ್ಷಕ್ಕಿಂತ ಜಾಸ್ತಿ ಜನ ಸಂಖ್ಯೆಯುಳ್ಳ ಒಂದು ಮುನಿಸಿಪಾಲಿಟಿ ಸಭೆ ಲಿಮಿಟಿಗಿಂತ 6 ಕಿ.ಮೀ ವರೆಗಿನ ಪ್ರದೇಶ ಅಥವಾ,

4.ಹತ್ತು ಲಕ್ಷಕ್ಕಿಂತ ಜಾಸ್ತಿ ಜನಸಂಖ್ಯೆಯುಳ್ಳ ಮುನಿಸಿಪಾಲಿಟಿ ಲಿಮಿಟಿಗಿಂತ 8 ಕಿ.ಮೀ ವರೆಗಿನ ಪ್ರದೇಶ.

(ಇಲ್ಲಿ ಜನ ಸಂಖ್ಯೆಯನ್ನು ಹಿಂದಿನ ಅಧಿಕೃತ ಸೆನ್ಸಸ್‌ ಪ್ರಕಾರ ಹಾಗೂ ದೂರವನ್ನು ‘ಕಾಗೆ ಹಾರುವ’ ಪ್ರಕಾರ ನೇರವಾಗಿ ತೆಗೆದುಕೊಳ್ಳಬೇಕು).

ಟೌನ್‌ ಕೃಷಿ ಭೂಮಿ/ಕೃಷಿಯೇತರ ಭೂಮಿ/ಕಟ್ಟಡ:
ಮೇಲೆ ಹೇಳಿದ ಕೃಷಿ ಭೂಮಿಯ ಹೊರತಾಗಿ ಈಗ ಉಳಿದದ್ದು ಟೌನ್‌ ಪ್ರದೇಶವೆಂದು ಗಣನೆಯಾಗುವ ಗ್ರಾಮೀಣವಲ್ಲದ ಕೃಷಿ ಭೂಮಿ, ಯಾವುದೇ ಪ್ರದೇಶದ ಕೃಷಿಯೇತರ ಭೂಮಿ ಮತ್ತು ಕಟ್ಟಡ. ಇವೆಲ್ಲಾ ಸ್ತಿರಾಸ್ಥಿಗಳ ಮೇಲೆ ಕ್ಯಾಪಿಟಲ್ ಗೈನ್ಸ್‌ ತೆರಿಗೆ ಲಾಗೂ ಆಗುತ್ತದೆ.

ಶೇರುಗಳ ಮೇಲಿನ 10% ತೆರಿಗೆ:
ಶೇರು ಮತ್ತು ಶೇರು ಪ್ರಾಧಾನ್ಯ ಮ್ಯೂಚುವಲ್ ಫ‌ಂಡುಗಳು (ಕನಿಷ್ಠ ಶೇ. 65% ಶೇರುಗಳಲ್ಲಿ ಹೂಡಿಕೆಯುಳ್ಳವು) STT(Securities Transaction Tax) ತೆತ್ತು ಮಾರಾಟವಾದಲ್ಲಿ ಅಲ್ಪಕಾಲಾವಧಿಗೆ ಲಾಭಾಂಶದ ಮೇಲೆ ಶೇ.15 ಹಾಗೂ ದೀರ್ಘ‌ ಕಾಲಾವಧಿಗೆ ಶೂನ್ಯ ತೆರಿಗೆ ಈ ವರೆಗೆ ಇತ್ತು. ಹೂಡಿಕೆ ಮಾಡಿದ ದಿನದಿಂದ ಮಾರಾಟದ ದಿನದವರೆಗೆ 1 ವರ್ಷ ಅವಧಿಯು ಅಲ್ಪ ಹಾಗೂ 1 ವರ್ಷ ಮೀರಿದ ಅವಧಿಯು ದೀರ್ಘ‌ ಕಾಲಾವಧಿ ಎಂದು ಪರಿಗಣಿಸಲಾಗುತ್ತದೆ. 2018ರ ಬಜೆಟ್ಟಿನಲ್ಲಿ 1 ವರ್ಷ ಮೀರಿದ ದೀರ್ಘ‌ ಕಾಲಾವಧಿಯ ಹೂಡಿಕೆಯಲ್ಲಿ ಉಂಟಾದ ಲಾಭಾಂಶದ ಮೇಲೆ ವಾರ್ಷಿಕ ರೂ. 1 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. ಅದನ್ನು ಮೀರಿದ ಲಾಭಾಂಶದ ಮೇಲೆ ಶೇ. 10 ತೆರಿಗೆ ಹಾಕುವ ಪ್ರಸ್ತಾಪ ಇಡಲಾಗಿದೆ. ಈ ಶೇ. 10 ತೆರಿಗೆಯ ಲೆಕ್ಕಾಚಾರದಲ್ಲಿ ಯಾವುದೇ indexation benefit ನೀಡ ಲಾಗುವುದಿಲ್ಲ ಹಾಗೂ STT ಸಹಿತ ಇನ್ಯಾವುದೇ ವ್ಯಾವಹಾರಿಕಾ ವೆಚ್ಚ ಅಥವಾ ಅಭಿವೃದ್ಧಿ ವೆಚ್ಚಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ.

ಈ ಹೊಸ ಶೇ.10 ತೆರಿಗೆ ಎಪ್ರಿಲ್ 1 2018ರ ಅನಂತರ ಮಾರಾಟವಾದ ಶೇರು/ಶೇರು ಪ್ರಾಧಾನ್ಯ ಮ್ಯೂಚುವಲ್ ಫ‌ಂಡುಗಳಿಗೆ ಮಾತ್ರ ಅನ್ವಯ. (ಅದರ ಮೊದಲು ಮಾರಾಟವಾದವುಗಳ ಮೇಲೆ ಕರ ಇರಲಿಲ್ಲ) ಎರಡನೆಯದಾಗಿ, ಲಾಭಾಂಶ ನಿರ್ಣಯಕ್ಕೆ ಜನವರಿ 31, 2018ರ ಮಾರುಕಟ್ಟೆ ಬೆಲೆ ಅಥವಾ ಮೂಲ ಹೂಡಿಕಾ ಬೆಲೆ – ಎರಡರಲ್ಲಿ ಯಾವುದು ಜಾಸ್ತಿಯೋ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುವುದು. ಇದರಿಂದಾಗಿ ಆ ಕಾನೂನು ಬರುವ ಮೊದಲು ಮಾಡಿದ ಲಾಭಾಂಶದ ಮೇಲೆ ತೆರಿಗೆ ಕಟ್ಟಬೇಕಾದ್ದುದಿಲ್ಲ. (ಈ ಜನವರಿ 31ರ ಪ್ರಮೇಯ ಲಾಭಾಂಶ ನಿರ್ಣಯಕ್ಕೆ ಮಾತ್ರ. ಒಂದು ವರ್ಷದ ಹೂಡಿಕಾ ಅವಧಿಯ ನಿರ್ಣಯಕ್ಕೆ ನಿಜವಾದ ಹೂಡಿಕೆ ಮತ್ತು ಮಾರಾಟದ ತಾರೀಖುಗಳನ್ನೇ ತೆಗೆದುಕೊಳ್ಳಬೇಕು)

ಕ್ಯಾಪಿಟಲ್ ಗೈನ್ಸ್‌ ಲೆಕ್ಕ ಹೇಗೆ?

ಮೂಲಧನದಲ್ಲಿ ವೃದ್ಧಿ ಅಂದ ಮೇಲೆ ಕ್ಯಾಪಿಟಲ್ ಗೈನ್ಸ್‌ ಆದಾಯಕ್ಕೆ ಮಾರಾಟದ ಬೆಲೆ ಮೈನಸ್‌ ಮೂಲ ಹೂಡಿಕೆ ಎಂಬ ಸರಳ ಸಮೀಕರಣ ಬಳಸಬಹುದು.

ಕ್ಯಾಪಿಟಲ್ ಗೈನ್ಸ್‌=ಮಾರಾಟ ಬೆಲೆ-(ಮೂಲ ವೆಚ್ಚ+ಅಭಿವೃದ್ಧಿ ವೆಚ್ಚ)

ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್‌ ಲೆಕ್ಕಾಚಾರ ಈ ರೀತಿಯೇ ಹಾಕಲಾಗುತ್ತದೆ.

ಆದರೆ ಕ್ಯಾಪಿಟಲ್ ಗೈನ್ಸ್‌ ಕೇವಲ ಹಣದುಬ್ಬರದಿಂದಲೂ ಉಂಟಾಗಬಹುದಲ್ಲವೇ? ಅದರ ಮೇಲೂ ಕರ ವಿಧಿಸುವುದು ಸಾಧುವೇ ಎಂಬ ಪ್ರಶ್ನೆ ಬರುತ್ತದೆ.

ಹಾಗಾಗಿ ದೀರ್ಘ‌ಕಾಲಿಕ ಕ್ಯಾಪಿಟಲ್ ಗೈನ್ಸ್‌ ಲೆಕ್ಕ ಹಾಕುವಲ್ಲಿ ಸರಕಾರವು ಹಣದುಬ್ಬರದ ಪಾಲಿಸಿ ವೃದ್ಧಿಯನ್ನು ಹೊರತಾಗಿಸಿ ಉಳಿದ ನೈಜವಾದ ಧನವೃದ್ಧಿಯ ಮೇಲೆ ಮಾತ್ರ ಕರ ಬೀಳುವಂತೆ ಅನುಕೂಲ ಮಾಡಿಕೊಟ್ಟಿದೆ. ಹಣದುಬ್ಬರದ ಭಾಗವನ್ನು ಹೊರತಾಗಿಸಲು ಹಣದುಬ್ಬರ ಆಧಾರಿತ ಇಂಡಕ್ಸೇಶನ್‌ ಬಳಸಬೇಕು.

ಇಂಡಕ್ಸೇಶನ್‌
ಟೇಬಲ್ನಲ್ಲಿ ಕಾಣಿಸಿದಂತೆ ಕೆಲವೆಡೆ ಕರ ಲೆಕ್ಕ ಹಾಕುವಾಗ ಇಂಡಕ್ಸೇಶನ್‌ ಸೌಲಭ್ಯ ಇದೆ. ಈ ಇಂಡಕ್ಸೇಶನ್‌ ಪದ್ಧತಿಯಲ್ಲಿ ಪ್ರತಿ ವರ್ಷವೂ ಬೆಲೆಯೇರಿಕೆ ಸೂಚ್ಯಂಕಾಧಾರಿತ ಇಂಡೆಕ್ಸ್‌ ಸಂಖ್ಯೆಯನ್ನು (CII = Cost Inflation Index) ಸರಕಾರವು ಘೋಷಿಸುತ್ತದೆ. ಆ ಸಂಖ್ಯೆಯಿಂದ ಆ ಆಸ್ತಿಯ ಖರೀದಿ ಮತ್ತು ಅಭಿವೃದ್ಧಿ ವೆಚ್ಚವನ್ನು ಗುಣಾಕಾರ ಮೂಲಕ ಹೆಚ್ಚಿಸಿಕೊಂಡ ಮೇಲೆಯೇ ಮಾರಾಟ ಬೆಲೆಯಿಂದ ಕಳೆದು ಕ್ಯಾಪಿಟಲ್ ಗಳಿಕೆಯನ್ನು ಲೆಕ್ಕ ಹಾಕಬೇಕು. ಈ ರೀತಿ ಬೆಲೆಯೇರಿಕೆಯ ಅಂಶವನ್ನು ತೆಗೆದುಹಾಕಿ ಶುದ್ಧ ಲಾಭಕ್ಕೆ ಮಾತ್ರ ಕರ ನೀಡಿದಂತಾಗುತ್ತದೆ.

Set-off ಮತ್ತು ನಷ್ಟದ Carry&Forward
ಅಲ್ಪಕಾಲಿಕ ಕ್ಯಾಪಿಟಲ್ ನಷ್ಟವನ್ನು ಅಲ್ಪ ಅಥವಾ ದೀರ್ಘ‌ಕಾಲಿಕ ಕ್ಯಾಪಿಟಲ್ ಲಾಭದೊಡನೆ ಸೆಟ್-ಆಫ್ ಅಥವಾ ವಿಲೀನಗೊಳಿಸಬಹುದಾಗಿದೆ. ಆದರೆ ದೀರ್ಘ‌ಕಾಲಿಕ ನಷ್ಟವನ್ನು ಮಾತ್ರ ಇನ್ನೊಂದು ದೀರ್ಘ‌ಕಾಲಿಕ ಲಾಭದೊಡನೆ ಮಾತ್ರ ಸೆಟ್-ಆಫ್ ಮಾಡಬಹುದಾಗಿದೆ. ಅಲ್ಲದೆ ಯಾವುದೇ ಕ್ಯಾಪಿಟಲ್ ಗೈನ್‌ ನಷ್ಟವನ್ನು ಇತರ ಯಾವುದೇ ಆದಾಯದ ಕೆಟಗರಿಯೊಂದಿಗೆ ಸೆಟ್ – ಆಫ್ ಮಾಡಲೂ ಬರುವುದಿಲ್ಲ. ಒಂದು ವರ್ಷದಲ್ಲಿ ಸೆಟ್-ಆಫ್ ಆಗದ ನಷ್ಟವನ್ನು 8 ವರ್ಷಗಳವರೆಗೆ ಪೇರಿಸಿಗೊಂಡು ಹೋಗಿ (Carry forward) ಮುಂದಿನ ವರ್ಷಗಳಲ್ಲಿ ಬರುವ ಕ್ಯಾಪಿಟಲ್ ಲಾಭದೊಂದಿಗೆ ಸೆಟ್ – ಆಫ್ ಮಾಡಬಹುದಾಗಿದೆ.

ಕಾಪಿಟಲ್ ಗೈನ್ಸ್‌ ತೆರಿಗೆ ವಿನಾಯಿತಿ
1. ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ ಕ್ಯಾಪಿಟಲ್ ಗಳಿಕೆ (3 ವರ್ಷ ಮೀರಿ) ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆಗೆ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವಾ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕ್ಯಾಪಿಟಲ್ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಭಾಗಶಃ ಖರ್ಚುಮಾಡಿದರೆ ಅಷ್ಟೇ ಭಾಗದ (Pro rata) ವಿನಾಯಿತಿ ಸಿಗುತ್ತದೆ. ಖರೀದಿ ಮಾಡುವವರೆಗೆ ದುಡ್ಡನ್ನು ಕ್ಯಾಪಿಟಲ್ ಗೈನ್ಸ್‌ ಅಕೌಂಟ್ ಸ್ಕೀಂ (CGAS) ನಲ್ಲಿ ಇಡಬೇಕು.

2. ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು ಮನೆಯೇತರ ಬೇರೆ ಯಾವುದಾದರೂ ಕ್ಯಾಪಿಟಲ್ ಆಸ್ತಿಯನ್ನು ಮಾರಾಟ ಮಾಡಿ ಕ್ಯಾಪಿಟಲ್ ಗೈನ್ಸ್‌ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್‌ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು. ಅಲ್ಲದೆ, ಇಲ್ಲೂ CGAS Clause ಇದೆ.

3. ಭೂಮಿ ಯಾ ಕಟ್ಟಡ ರೂಪದ ಆಸ್ತಿಯ ಮಾರಾಟದ 6 ತಿಂಗಳೊಳಗೆ ಅದರ ಕ್ಯಾಪಿಟಲ್ ಗಳಿಕೆಯನ್ನು ರೂರಲ್ ಇಲೆಕ್ಟ್ರಿಫಿಕೇಶನ್‌ ಕಾರ್ಪೋರೇಶನ್‌ (REC) ಅಥವಾ ನ್ಯಾಶನಲ್ ಹೈವೆ ಅಥಾರಿಟಿಯ (NHAI) ಬಾಂಡುಗಳಲ್ಲಿ ಕನಿಷ್ಟ 5 ವರ್ಷಕ್ಕೆ (ಈ ಮೊದಲು ಇದು 3 ವರ್ಷ ಆಗಿತ್ತು) ಹೂಡಿದರೆ ಅಂತಹ ಕ್ಯಾಪಿಟಲ್ ಗಳಿಕೆ ವಾರ್ಷಿಕ ಮಿತಿ ರೂ. 50 ಲಕ್ಷದವರೆಗೆ ಸಂಪೂರ್ಣವಾಗಿ ಕರಮುಕ್ತ.

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next