ಬೆಂಗಳೂರು: ಕೇಪ್‌ಟೌನ್ ನಗರದ ಬಗ್ಗೆ ಕೆಲ ನಕಾರಾತ್ಮಕ ಅಂಶಗಳನ್ನೊಳಗೊಂಡ ಊಹಾಪೋಹಗಳನ್ನು ಹರಡಲಾಗುತ್ತಿದೆ. ಆದರೆ ಅಂಥ ಯಾವುದೇ ಅಪಾಯಕಾರಿ ಪರಿಸ್ಥಿತಿ ಕೇಪ್‌ಟೌನ್‌ನಲ್ಲಿಲ್ಲ. ಕೇಪ್‌ಟೌನ್ ದಕ್ಷಿಣ ಆಫ್ರಿಕಾದ ಅತ್ಯಂತ ಸುರಕ್ಷಿತ ಮತ್ತು ಎಲ್ಲ ಅಗತ್ಯ ಮೂಲ ಸೌಲಭ್ಯಗಳನ್ನು ಒಳಗೊಂಡಿರುವ ಪ್ರವಾಸಿ ತಾಣವಾಗಿದೆ ಎಂದು ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮ ನಿಯೋಗದ ಪ್ರಧಾನ ವ್ಯವಸ್ಥಾಪಕಿ ಹನೇಲಿ ಸ್ಲಾಬರ್ ಹೇಳಿದರು.
ದಕ್ಷಿಣ ಆಫ್ರಿಕಾದತ್ತ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ನಿಯೋಗ ನಗರದ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು. ಕೇಪ್‌ಟೌನ್ ನಗರಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ ಎಂದು ಬಿಬಿಸಿ ವರದಿ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸ್ಲಾಬರ್ ಅವರು, “ದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕೇಪ್‌ಟೌನ್ ಬಗ್ಗೆ ಕೆಲ ವದಂತಿಗಳು ಹರಿದಾಡುತ್ತಿವೆ.
ಆದರೆ ಅಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆಯಿಲ್ಲ. ಹವಾಮಾನ ವೈಪರಿತ್ಯ ಕೂಡ ಸಂಭವಿಸುತ್ತಿಲ್ಲ. ಕೇಪ್‌ಟೌನ್ ಅತ್ಯಂತ ಸುರಕ್ಷಿತ ತಾಣವಾಗಿದೆ,’ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಆಫ್ರಿಕಾದ ಪ್ರವಾಸಿ ತಾಣಗಳಿಗೆ ಪ್ರತಿ ವರ್ಷ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 2017ರಲ್ಲಿ ದ.ಆಫ್ರಿಕಾಗೆ ಆಗಮಿಸಿದ್ದ ಭಾರತೀಯರ ಪೈಕಿ ಶೇ.8 ಮಂದಿ ಬೆಂಗಳೂರಿಗರಿದ್ದಾರೆ.
ಹೀಗಾಗಿ, ಪ್ರವಾಸಿಗರಿಗೆ ಅನುಕೂಲತೆಗಳು, ಸೌಕರ್ಯ, ರಿಯಾಯಿತಿ ದರ ಪ್ಯಾಕೇಜ್ ಟೂರ್, ಇನ್ನಿತರೆ ನಿಖರ ಮಾಹಿತಿ ತಿಳಿಸಿಕೊಡುವ ಸಲುವಾಗಿ “ಮುಕ್ತ ಸಂವಾದ’ ನಡೆಸಲಾಗುತ್ತಿದೆ. ದೇಶದ ಆರ್ಥಿಕ ಪ್ರಗತಿಗೆ ಪ್ರವಾಸೋದ್ಯಮ ಅಪಾರ ಕೊಡುಗೆ ನೀಡುತ್ತಿದೆ. ಹಾಗೇ ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಇದುವರೆಗೆ 7 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂಧು ಮಾಹಿತಿ ನೀಡಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಆಫ್ರಿಕಾದ 60 ಸದಸ್ಯರನ್ನೊಳಗೊಂಡ ನಿಯೋಗ, ಕೇಪ್‌ಟೌನ್, ಜೊಹಾನ್ಸ್‌ಬರ್ಗ್ ಸೇರಿದಂತೆ ಅಲ್ಲಿನ ಪ್ರವಾಸಿತಾಣಗಳು, ಪ್ರವಾಸಿಗರಿಗಿರುವ ಮೂಲ ಸೌಕರ್ಯಗಳು, ಪ್ಯಾಕೇಜ್ ಟೂರ್‌ನ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿತು.