Advertisement

Cap Auction: ಬೇಕೇ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಕ್ಯಾಪ್‌?

12:54 AM Dec 03, 2024 | Team Udayavani |

ಸಿಡ್ನಿ: “ಕ್ರಿಕೆಟ್‌ ಧ್ರುವತಾರೆ’ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಧರಿಸಿದ್ದ ಕ್ಯಾಪ್‌ ಒಂದು ಮಂಗಳವಾರ ಸಿಡ್ನಿಯಲ್ಲಿ ಹರಾಜಾಗಲಿದೆ. ಸಂಘಟಕರ ಪ್ರಕಾರ ಇದು 2.2 ಕೋ. ರೂ.ಗೆ (260,000 ಯುಎಸ್‌ ಡಾಲರ್‌) ಮಾರಾಟವಾಗುವ ನಿರೀಕ್ಷೆ ಇದೆ.

Advertisement

ಡಾನ್‌ ಬ್ರಾಡ್‌ಮನ್‌ 1947-48ರ ಪ್ರವಾಸಿ ಭಾರತದೆದುರಿನ ಸರಣಿಯ ವೇಳೆ ಧರಿಸಿದ ಉಣ್ಣೆಯ ಕ್ಯಾಪ್‌ ಇದಾಗಿದೆ. ಭಾರತ ಸ್ವಾತಂತ್ರ್ಯ ಪಡೆದ ಬಳಿಕ ವಿದೇಶದಲ್ಲಿ ಆಡಿದ ಮೊದಲ ಟೆಸ್ಟ್‌ ಸರಣಿ ಇದಾಗಿತ್ತು. ಈಗ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿರುವಾಗಲೇ ಈ ಕ್ಯಾಪ್‌ ಹರಾಜಾಗುತ್ತಿರುವುದು ಕಾಕತಾಳೀಯ.

“ಆಕ್ಷನ್‌ ಹೌಸ್‌’ ಬೋನ್ಹಾಮ್ಸ್‌ ನೀಡಿದ ಹೇಳಿಕೆಯೊಂದರ ಪ್ರಕಾರ, ಇದು ಈ ಸ್ಮರಣೀಯ ಸರಣಿಯಲ್ಲಿ ಬ್ರಾಡ್‌ಮನ್‌ ಧರಿಸಿದ ಏಕೈಕ ಬ್ಯಾಗಿ ಗ್ರೀನ್‌ ಕ್ಯಾಪ್‌. ಸರಣಿಯ 6 ಇನ್ನಿಂಗ್ಸ್‌ ಗಳಲ್ಲಿ ಬ್ರಾಡ್‌ಮನ್‌ 178.75ರಷ್ಟು ಉತ್ಕೃಷ್ಟ ಸರಾಸರಿಯಲ್ಲಿ 715 ರನ್‌ ಪೇರಿಸಿದ್ದರು. ಇದರಲ್ಲಿ 3 ಶತಕ ಹಾಗೂ ಒಂದು ದ್ವಿಶತಕ ಸೇರಿತ್ತು.

ಈ ಕ್ಯಾಪ್‌ನ ಬಣ್ಣ ಮಸುಕಾಗಿದೆ. ಅಲ್ಲಲ್ಲಿ ಕೀಟಗಳು ಕೊರೆದಿವೆ. ಟೋಪಿಯ ಶಿರಭಾಗ ಸ್ವಲ್ಪ ಹರಿದಿದೆ. ಆದರೂ ಇದು 1,95,000ದಿಂದ 2,60,000 ಡಾಲರ್‌ ಮೊತ್ತಕ್ಕೆ ಮಾರಾಟವಾಗಲಿದೆ ಎಂಬ ನಂಬಿಕೆ ಬೋನ್ಹಾಮ್ಸ್‌ನದ್ದು.

ಅಂದು ಸಿಕ್ಕಿತ್ತು 2.5 ಕೋ.ರೂ.
ಇದಕ್ಕೂ ಮುನ್ನ 2020ರಲ್ಲಿ ಸಿಡ್ನಿಯಲ್ಲೇ ನಡೆದ ಹರಾಜಿನಲ್ಲಿ ಬ್ರಾಡ್‌ಮನ್‌ ಧರಿಸಿದ್ದ ಪ್ರಪ್ರಥಮ ಬ್ಯಾಗಿ ಗ್ರೀನ್‌ ಕ್ಯಾಪ್‌ 2.5 ಕೋಟಿ ರೂ.ಗಳ ದೊಡ್ಡ ಮೊತ್ತಕ್ಕೆ ಹರಾಜಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next