Advertisement

ಕೌನ್ಸಿಲ್‌ ಸಭೆಗೆ ಕ್ಯಾಂಟೀನ್‌ ಊಟ ಬಂದ್‌?

12:17 AM Jan 05, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯ ಪ್ರತಿ ಕೌನ್ಸಿಲ್‌ ಸಭೆಗೂ ಸರಬರಾಜು ಆಗುತ್ತಿದ್ದ ಇಂದಿರಾ ಕ್ಯಾಂಟೀನ್‌ ಊಟವನ್ನು ಇನ್ನು ಮುಂದೆ ನೀಡಲು ಆಗುವುದಿಲ್ಲ ಎಂದು ರಿವಾರ್ಡ್ಸ್‌ ಗುತ್ತಿಗೆ ಸಂಸ್ಥೆ ಕೌನ್ಸಿಲ್‌ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆರಂಭದಲ್ಲಿ ಇಂದಿರಾ ಕ್ಯಾಂಟೀನ್‌ ಊಟಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಆದರೆ, ನಂತರದ ದಿನಗಳಲ್ಲಿ ಆಹಾರ ಕಳಪೆಯಾಗಿದೆ ಎಂಬ ಆರೋಪಗಳು ಕೇಳಲಾರಂಭಿಸಿದವು.

Advertisement

ಇದನ್ನು ಮನಗಂಡು 2018 ಸೆಪ್ಟೆಂಬರ್‌ನಲ್ಲಿ ಅಂದಿನ ಮೇಯರ್‌ ಗಂಗಾಂಬಿಕೆ ಮಲ್ಲಿ ಕಾರ್ಜುನ್‌, ಇಂದಿರಾ ಕ್ಯಾಂಟೀನ್‌ನಿಂದಲೇ ಬಿಬಿಎಂಪಿ ಕೌನ್ಸಿಲ್‌ ಸಭೆಗೂ ಆಹಾರ ಸರಬರಾಜು ಮಾಡಬೇಕು ಎಂದು ಆದೇಶಿಸಿದರು. ಜನಪ್ರತಿನಿಧಿಗಳೇ ಕ್ಯಾಂಟೀನ್‌ ಊಟ ಮಾಡುತ್ತಾರೆ ಎಂದರೆ ಜನರಿಗೆ ಸೂಕ್ತ ಸಂದೇಶ ರವಾನೆಯಾಗುತ್ತದೆ ಎಂಬ ಉದ್ದೇಶವೂ ಅವರದ್ದಾಗಿತ್ತು. ಅದರಂತೆ ರಿವಾರ್ಡ್ಸ್‌ ಗುತ್ತಿಗೆ ಸಂಸ್ಥೆ ಪಾಲಿಕೆ ಸಭೆಗೆ ಆಹಾರ ಸರಬರಾಜು ಮಾಡುತ್ತಿತ್ತು.

ಸುಮಾರು ಒಂದು ವರ್ಷದಿಂದ ಪ್ರತಿ ಕೌನ್ಸಿಲ್‌ ಸಭೆಗೆ 350 ಟೀ, ಕಾಫಿ, ತಿಂಡಿ, 450 ಊಟ ಸರಬರಾಜು ಮಾಡಲಾಗುತ್ತಿತ್ತು. ಆದರೆ ರಿವಾರ್ಡ್ಸ್‌ ಸಂಸ್ಥೆ ಏಕಾಏಕಿ, “ಇನ್ನುಮುಂದೆ ಕೌನ್ಸಿಲ್‌ ಸಭೆಗೆ ಊಟ ಸರಬರಾಜು ಮಾಡುವುದಿಲ್ಲ. ಇಷ್ಟು ದಿನ ಊಟ ಸರಬರಾಜು ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಪತ್ರ ಬರೆದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಊಟ ಮಾಡಲು ಹಿಂಜರಿಕೆ?: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನ ಬಹುತೇಕ ಸದಸ್ಯರು ಇಂದಿರಾ ಕ್ಯಾಂಟೀನ್‌ ಊಟ ಮಾಡಲು ಹಿಂಜರಿ ಯುತ್ತಿದ್ದರು. ಅಂದಿನ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಆಯುಕ್ತ ಮಂಜುನಾಥ್‌ ಪ್ರಸಾದ್‌, ಪಾಲಿಕೆ ಸದಸ್ಯ ಶಿವರಾಜು, ಅಬ್ದುಲ್‌ ವಾಜಿದ್‌, ನೇತ್ರಾ ನಾರಾಯಣ್‌ ಸೇರಿ ಕೆಲ ಸದಸ್ಯರು ಮಾತ್ರ ಕ್ಯಾಂಟೀನ್‌ ಊಟ ಮಾಡುತ್ತಿದ್ದರು. ಇನ್ನುಳಿದಂತೆ ಬಹುತೇಕ ಸದಸ್ಯರು ಹೋಟೆಲ್‌ಗ‌ಳಿಂದ ಊಟ ತರಿಸುತ್ತಿದ್ದರು.

ಬಿಜೆಪಿ ಕೈವಾಡ: ಕಾಂಗ್ರೆಸ್‌ ಆರೋಪ: ಬಿಜೆಪಿ ಸದಸ್ಯರು ಮೊದಲಿನಿಂದಲೂ ಕ್ಯಾಂಟೀನ್‌ ಊಟ ವಿರೋಧಿಸುತ್ತಿದ್ದರು. ಅಧಿಕಾರಕ್ಕೆ ಬಂದ ಬಳಿಕ ಆಹಾರ ಸರಬರಾಜು ಮಾಡುವುದನ್ನು ನಿಲ್ಲಿಸಲು ಗುತ್ತಿಗೆ ಸಂಸ್ಥೆ ಮೇಲೆ ಒತ್ತಡ ಹೇರಿದ್ದಾರೆ. ಬಿಜೆಪಿ ನಾಯಕರ ಲಾಬಿ ಮತ್ತು ಒತ್ತಡಕ್ಕೆ ಮಣಿದ ರಿವಾರ್ಡ್ಸ್‌ ಸಂಸ್ಥೆ ಊಟ ಸರಬರಾಜು ಮಾಡದಿರಲು ಪತ್ರ ಬರೆದಿದೆ ಎಂದು ವಿರೋಧ ಪಕ್ಷದ ನಾಯಕ ವಾಜಿದ್‌ ಆರೋಪಿಸಿದ್ದಾರೆ.

Advertisement

ಅರ್ಧದಷ್ಟು ಹಣ ಉಳಿತಾಯ: ಕೌನ್ಸಿಲ್‌ ಸಭೆಗೆ ಹೋಟೆಲ್‌ನಿಂದ ತರಿಸುತ್ತಿದ್ದ ಒಂದು ಊಟಕ್ಕೆ ನೂರಾರು ರೂ. ದರ ಇರುತ್ತಿತ್ತು. ವಾರ್ಷಿಕ ಸುಮಾರು 25ರಿಂದ 30 ಲಕ್ಷ ರೂ. ಬಿಲ್‌ ಆಗುತ್ತಿತ್ತು. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ ಮೇಲಿನ ಅಪ ವಾದ ಕಳೆಯಲು ಮತ್ತು ಹಣ ಉಳಿತಾಯಕ್ಕಾಗಿ ಕ್ಯಾಂಟೀನ್‌ ಊಟ ಸರಬರಾಜು ಆರಂಭಿಸಿದರು. ರಿವಾರ್ಡ್‌ ಸಂಸ್ಥೆ ಪಾಲಿಕೆಯ ಎಲ್ಲ ಕೌನ್ಸಿಲ್‌ ಸಭೆಗಳು, ಇತರೆ ಸಣ್ಣ ಪುಟ್ಟ ಸಭೆಗಳಿಗೆ ಇಂದಿರಾ ಕ್ಯಾಂಟೀನ್‌ನಿಂದ ಉಪಹಾರ, ಸಸ್ಯಾಹಾರ ಊಟ, ಗೋಡಂಬಿ, ಚಹಾ, ಕಾಫಿ, ಬಾದಾಮಿ ಹಾಲು ಹಾಗೂ ಬಿಸ್ಕತ್‌ ಸರಬರಾಜು ಮಾಡು ತ್ತಿದ್ದು, ಇದಕ್ಕೆ ವಾರ್ಷಿಕ 10 ರಿಂದ 12 ಲಕ್ಷ ರೂ. ಹಣ ಸಂದಾಯವಾಗುತ್ತಿದೆ.

ವಿವಿಧ ಕಾರ್ಯಗಳಿಂದಾಗಿ ಕೌನ್ಸಿಲ್‌ ಸಭೆಗೆ ಇಂದಿರಾ ಕ್ಯಾಂಟೀನ್‌ ಊಟ ಸರಬರಾಜು ಮಾಡಲು ಆಗುತ್ತಿಲ್ಲ. ಈಗಾಗಲೇ ಕೌನ್ಸಿಲ್‌ ಕಾರ್ಯದರ್ಶಿಗೆ ಎರಡು ಬಾರಿ ಪತ್ರ ಬರೆಯಲಾಗಿತ್ತು. ಆದರೆ, ಆಯುಕ್ತರು ಆಹಾರ ಸರಬರಾಜು ಮಾಡಲು ತಿಳಿಸಿದ್ದರು.
-ಬಲ್‌ದೇವ್‌ ಸಿಂಗ್‌, ರಿವಾರ್ಡ್ಸ್‌ ಸಂಸ್ಥೆ ಸಹಾಯಕ ವ್ಯವಸ್ಥಾಪಕ

ಎಲ್ಲರಿಗೂ ಸಮಾನತೆಯ ಸಂದೇಶ ರವಾನಿಸಲು ಹಾಗೂ ಸಾರ್ವಜನಿಕರ ತೆರಿಗೆ ಹಣ ಉಳಿತಾಯ ಮಾಡುವ ಉದ್ದೇಶದಿಂದ ಕೌನ್ಸಿಲ್‌ ಸಭೆಗೆ ಇಂದಿರಾ ಕ್ಯಾಂಟೀನ್‌ನಿಂದ ಊಟ ತರಿಸಲಾಗುತ್ತಿತ್ತು. ಪ್ರಸ್ತುತ ಗುತ್ತಿಗೆ ಸಂಸ್ಥೆ ಊಟ ನಿಲ್ಲಿಸಲು ಕಾರಣ ತಿಳಿಯುತ್ತಿಲ್ಲ.
-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next