Advertisement

ಅರ್ಧ ವರ್ಷ ಕಳೆದರೂ ಕನ್ನಡ ಪಠ್ಯ ಪುಸ್ತಕ ಸಿಕ್ಕಿಲ್ಲ !

10:44 AM Oct 18, 2019 | Team Udayavani |

ಕುಂದಾಪುರ: ಶಿಕ್ಷಣದ ಗುಣಮಟ್ಟ ಸುಧಾರಣೆ, ಬಡ ಮಕ್ಕಳು ಕೂಡ ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಆಶಯದೊಂದಿಗೆ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದೆ. ಆದರೆ ಅರ್ಧ ವಾರ್ಷಿಕ ರಜೆ ಮುಗಿದು ಶಾಲಾರಂಭವಾಗುತ್ತಿದ್ದರೂ ಇನ್ನೂ ಈ ಮಕ್ಕಳಿಗೆ ಕನ್ನಡ ಪಠ್ಯಪುಸ್ತಕವೇ ಸಿಕ್ಕಿಲ್ಲ.

Advertisement

ದ.ಕ. ಜಿಲ್ಲೆಯ 42, ಉಡುಪಿ ಜಿಲ್ಲೆಯ 22 ಸರಕಾರಿ
ಪ್ರಾಥಮಿಕ ಶಾಲೆಗಳ ಸಹಿತ ರಾಜ್ಯಾದ್ಯಂತ 1 ಸಾವಿರ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲಾಗಿದ್ದು ಒಟ್ಟಾರೆ ಒಂದನೇ ತರಗತಿಯಲ್ಲಿ 25,156 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೇರೆ ಎಲ್ಲ ಪಠ್ಯ ಪುಸ್ತಕಗಳನ್ನು ನೀಡಲಾಗಿದ್ದರೂ ಮಾತೃಭಾಷೆ ಕನ್ನಡ ಬೋಧನೆಯ “ಸವಿಕನ್ನಡ’ ಪಠ್ಯಪುಸ್ತಕ ಮಾತ್ರ ಪೂರೈಸಿಲ್ಲ.

ಬೇರೆ – ಬೇರೆ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬೋಧಿಸುವ “ನಲಿ- ಕಲಿ’ ಪಠ್ಯ ಪುಸ್ತಕ ಹಾಗೂ ಆಂಗ್ಲ ಮಾಧ್ಯಮದ 1ನೇ ತರಗತಿ ಮಕ್ಕಳಿಗೆ ಕಲಿಸುವ “ಸವಿಕನ್ನಡ’ ಪಠ್ಯ ಪುಸ್ತಕದಲ್ಲಿರುವ ಪಠ್ಯ ಕ್ರಮಗಳು ಬೇರೆ ಬೇರೆಯಾಗಿವೆ. ಆದ್ದರಿಂದ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ತರಬೇತಿ ವೇಳೆ ನೀಡಿದ ಪ್ರತಿಗಳನ್ನು ತಂದು ಪಾಠ ಮಾಡುತ್ತಿರುವುದಾಗಿ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಕನ್ನಡದ ನಿರ್ಲಕ್ಷ್ಯವೇ?
ಸರಕಾರಿ ಶಾಲೆಗಳಲ್ಲೂ ಆಂಗ್ಲ ಕಲಿಕೆಗೆ ಒತ್ತು ನೀಡುವ ತರಾತುರಿಯಲ್ಲಿ ಮಾತೃಭಾಷೆ ಕನ್ನಡದ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರಿದೆಯೇ ಎನ್ನುವ ಮಾತುಗಳು ವ್ಯಕ್ತವಾಗಿವೆ. ಯಾಕೆಂದರೆ ಈ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಪ್ರಥಮ ಭಾಷೆಯಾದರೆ, ಕನ್ನಡ ದ್ವಿತೀಯ ಭಾಷೆ. ಆದರೆ ಈ ಕನ್ನಡ ಪುಸ್ತಕವನ್ನು ಅರ್ಧ ವರ್ಷ ಕಳೆದರೂ ಇನ್ನೂ ವಿದ್ಯಾರ್ಥಿಗಳಿಗೆ ನೀಡಿಲ್ಲ.

ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನ್ನಡ ಭಾಷಾ ಪಠ್ಯಪುಸ್ತಕ ಇನ್ನೂ ಬಂದಿಲ್ಲ. ಉಡುಪಿ ಜಿಲ್ಲೆಯಿಂದ 500 ಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದಿದ್ದರಿಂದ ಅಲ್ಲಿಗೆ ಎರಡೆರಡು ಬಾರಿ ಪುಸ್ತಕ ಮುದ್ರಣವಾಗಬೇಕಿದ್ದರಿಂದ ಈ ಪುಸ್ತಕ ಮುದ್ರಣದಲ್ಲಿ ವಿಳಂಬವಾಗಿರಬಹುದು. ಕೂಡಲೇ ತರಿಸಿ ಕೊಡಲಾಗುವುದು.
– ಶೇಷಶಯನ ಕಾರಿಂಜ, ಉಪ ನಿರ್ದೇಶಕರು, ಶಿಕ್ಷಣ ಇಲಾಖೆ ಉಡುಪಿ

Advertisement

13,510 ಸವಿಕನ್ನಡ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ದಸರಾ ರಜೆಯಿಂದಾಗಿ ಪೂರೈಕೆ ಸ್ವಲ್ಪ ವಿಳಂಬವಾಗಿದೆ. ಕೂಡಲೇ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕ ಪೂರೈಸಲಾಗುವುದು.
– ರಂಗಯ್ಯ ಕೆ.ಜಿ., ಉಪ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ, ಬೆಂಗಳೂರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next