ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ. ಈ ‘ಕಾಯುವಿಕೆ’ಗೂ ಒಂದು ಧೈರ್ಯ ಬೇಕು. ಕಾಯಿಸುವವರಿಗಿಂತ ಕಾಯುವವರ ಕರ್ಮ ಹೇಳತೀರದು. ಅದೊಂದು ರೀತಿ ನಗು ತಾಳದಷ್ಟು ಕಚಗುಳಿ, ಹೃದಯ ಹಿಂಡುವಷ್ಟು ಕಿರುಕುಳ.
ನನ್ನವಳೇ,
ಪರೀಕ್ಷೆ ಇದೆ, ಓದಬೇಕು ಅನ್ನೋ ಕಾರಣಕ್ಕೆ ನನ್ನಿಂದ ತಾತ್ಕಾಲಿಕ ಅಂತರ ಬಯಸಿದ ನಿನಗೆ ಮೊದಲಿಗೆ- ಆಲ್ ದಿ ಬೆಸ್ಟ್. ಪರೀಕ್ಷೆಯ ನೆಪವೊಡ್ಡಿ ಪ್ರೀತಿಗೆ ತಿಲಾಂಜಲಿ ಇಡುವ ಬಹುತೇಕ ಹುಡುಗಿಯರ ಮಧ್ಯೆ, ಓದಿನ ಹಂಬಲದ ನಡುವೆಯೂ ಪ್ರೀತಿ ಉಳಿಸಿಕೊಳ್ಳಬೇಕೆಂಬ ನಿನ್ನ ತುಡಿತಕ್ಕೆ ಸಾವಿರ ಶರಣು. ಪರೀಕ್ಷೆ ನಡುವೆಯೂ ನಿನಗೆ ಈ ಪತ್ರ ಬರೆದು ಡಿಸ್ಟರ್ಬ್ ಮಾಡ್ತಿದ್ದೇನೆ, ಸಾರಿ.
ಈ ನಿನ್ನ ಪ್ರೀತಿಯ ರಜೆಯಲ್ಲಿ, ನೆನಪಿನ ಗರ್ಭದಲ್ಲಿ ಹುದುಗಿದ್ದ ಎಲ್ಲ ನೆನಪುಗಳನ್ನೂ ಇಂಚಿಂಚೂ ಬಿಡದೇ ಕೆದಕಿ ಕಣ್ಮುಂದೆ ತಂದು ಸೇಡು ತೀರಿಸಿಕೊಳ್ಳುತ್ತಿದೆ. ನೆತ್ತಿ ಸುಡುವ ಬಿಸಿಲಲ್ಲಿ ನಿನಗೆ ನಾ ನೆರಳಾಗಿದ್ದು, ನಡುಗುವ ಚಳಿಯಲ್ಲಿ ಬೆಚ್ಚನೆಯ ಕಾವಾಗಿದ್ದು, ಮೊನ್ನೆ ಕಾಲೇಜು ಕಾರ್ಯಕ್ರಮದಲ್ಲಿ ನಾನು ಭಾಷಣ ಮಾಡುತ್ತಿದ್ದಾಗ ನಿನ್ನತ್ತ ಕಣ್ಣು ನೆಟ್ಟ ಕೂಡಲೇ ನನ್ನ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಬಂದು ತಲೆ ಹಿಡಿದು ಕುಳಿತಿದ್ದು, ಅತ್ತಿಂದಿತ್ತ ಬೀಸಿದ ಬಿರುಗಾಳಿಗೆ ನಿನ್ನ ಕೈಯಲ್ಲಿದ್ದ ಕೊಡೆ ಗಾಳಿಪಾಲಾಗಿ ಮೇಲೆ ಹಾರಿದಾಗ ನಿಸ್ಸಹಾಯಕಳಾಗಿ ನಿಂತಿದ್ದ ನಿನಗೆ, ಮಳೆಹನಿ ತಾಗದಂತೆ ಓಡಿ ಬಂದು ನಾನು ಕೊಡೆಯಾಗಿದ್ದು, ಇವೆಲ್ಲ ಈಗ ಕಣ್ಮುಂದೆ ಗಿರಕಿ ಹೊಡೆಯುತ್ತಿವೆ. ಸುರಿದು ತೆರೆಗೆ ಸರಿದ ಮಳೆಗಿಂತ ನಾನೇನೂ ಕಡಿಮೆ ಇಲ್ಲ ಎನ್ನುವಂತೆ, ಎಲೆಯಿಂದ ಚಿಟಪಟ ಉದುರುತ್ತಿರುವ ಹನಿಗಳೂ ನಿನ್ನ ಕಾಲ್ಗೆಜ್ಜೆಯ ನಾದಕ್ಕೆ ಸೆಡ್ಡು ಹೊಡೆಯುತ್ತಿವೆ.
ಈ ವಿಚಿತ್ರ ಚಡಪಡಿಕೆಗೆ ಕಚಗುಳಿ ಎನ್ನಬೇಕೋ, ಕಿರುಕುಳ ಎನ್ನಬೇಕೋ ಅರ್ಥವಾಗುತ್ತಿಲ್ಲ. ಈ ‘ಕಾಯುವಿಕೆ’ಗೂ ಒಂದು ಧೈರ್ಯ ಬೇಕು. ಕಾಯಿಸುವವರಿಗಿಂತ ಕಾಯುವವರ ಕರ್ಮ ಹೇಳತೀರದು. ಅದೊಂದು ರೀತಿ ನಗು ತಾಳದಷ್ಟು ಕಚಗುಳಿ, ಹೃದಯ ಹಿಂಡುವಷ್ಟು ಕಿರುಕುಳ.
ಶುಭಾಶಯ ಹೇಳುವ ನೆಪದಲ್ಲಿ ಪುಟಗಟ್ಟಲೇ ಪುರಾಣ ಗೀಚಿದನೆಂದು ಬೇಸರಿಸಿಕೊಳ್ಳದಿರು ಗೆಳತಿ. ನೀ ಚೆನ್ನಾಗಿ ಪರೀಕ್ಷೆ ಬರೆ. ಪರೀಕ್ಷೆಯ ಮರುಕ್ಷಣವೇ ಭೇಟಿಯಾಗೋಣ. ಬಳಿಕ ಮಡುಗಟ್ಟಿದ ಮೌನ ಕರಗಿ ಮಾತಿನ ಮಳೆ ಸುರಿಯಬೇಕು. ಈ ಮೌನಕ್ಕೊಂದು ತಿಲಾಂಜಲಿ ಇಡಬೇಕು.
ಅಂದಹಾಗೆ, ನಿನ್ನ ಪ್ರೀತಿ ಪರೀಕ್ಷೆಯಲ್ಲಿ ನಾನು ಫೇಲಾಗುವ ಮಾತೇ ಇಲ್ಲ.
ಮತ್ತೂಮ್ಮೆ ಆಲ್ ದಿ ಬೆಸ್ಟ್…
-ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ