Advertisement

ಧಾರವಾಡ: ಅನ್ನದ ಬಟ್ಟಲಿಗೆ ನಶೆ ಪೀಡೆಯ ಹುಣ್ಣು|ಗಾಂಜಾ ಬೆಳೆ ಅವ್ಯಾಹತ

01:46 PM Sep 19, 2021 | Team Udayavani |

ವರದಿ : ಬಸವರಾಜ ಹೊಂಗಲ್‌

Advertisement

ಧಾರವಾಡ: ಹೊಲಗಳಲ್ಲಿ ನಳನಳಿಸುವ ಹತ್ತಿ ಬೆಳೆ, ಮಧ್ಯದಲ್ಲಿ ಕೇವಲ ಎರಡೇ ಸಾಲು ತಪ್ಪಲು (ಗಾಂಜಾ), ಒಳಗಡೆ ಹೋಗಲು ಆಗದಂತೆ ದಟ್ಟವಾಗಿ ಬೆಳೆದ ಕಬ್ಬು, ಬೆಳೆದವರಿಗೆ ಮಾತ್ರ ಸಿಕ್ಕುತ್ತಿದೆ ನಶೆಗಿಡ. ಗುಡ್ಡದ ವಾರಿಯ ಕಡ್ಡದಲ್ಲೂ ಗಡ್ಡಧಾರಿಗಳ ಕೃತ್ಯ. ಉಡತಾ ಪಂಜಾಬ್‌ ಆಗಿತ್ತು. ಈಗ ಉಡತಾ ಗೋವಾ, ಈ ಗೋವಾ ಲಿಂಕ್‌ಗೆ ಧಾರವಾಡ ಜಿಲ್ಲೆಯೇ ಹೆಡ್‌ ಕ್ವಾಟರ್‌!

ಹೌದು, ಉತ್ತಮ ಗುಣಮಟ್ಟದ ಹಾಗೂ ದೇಶ-ವಿದೇಶಗಳಿಗೆ ರಫ್ತಾಗುವಂತಹ ಆಲ್ಫೋನ್ಸೋ ಮಾವಿನ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲು ಹೆಸರುವಾಸಿಯಾದ ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ “ಕಳ್ಳ ತಪ್ಪಲು ಕೃಷಿ’ ಸದ್ದು ಗದ್ದಲವಿಲ್ಲದೆ ಸಾಗಿದೆ. ಕಹಿಯಾದರೂ ಧಾರವಾಡಿಗರು ಈ ಸತ್ಯವನ್ನು ಅರಗಿಸಿಕೊಳ್ಳಲೇಬೇಕಾಗಿದ್ದು, ಯಾವ ಭೂಮಿಯಲ್ಲಿ ಹೂವು, ಹಣ್ಣು, ಅನ್ನ, ರೊಟ್ಟಿ ಬೆಳೆಯುತ್ತಿತ್ತೋ ಅದೇ ಮಣ್ಣಿನಲ್ಲಿ ನಕಲಿ ಮಣ್ಣಿನ ಮಕ್ಕಳು ನಶೆ ತಪ್ಪಲು ಬೆಳೆಯುವ ಕೈ ಚಳಕ ಆರಂಭಿಸಿದ್ದಾರೆ.

ಲಾವಣಿ ಹೊಲಗಳಲ್ಲಿ ಲಗಾಮಿಲ್ಲದ ಬೆಳೆ: ಇನ್ನು ಧಾರವಾಡ ಜಿಲ್ಲೆಯಲ್ಲಿ ಈಗಲೂ ಹೊಲಗಳಲ್ಲಿ ಕೃಷಿ ಮಾಡಲಾಗದ ನೌಕರರು, ಕಡು ಬಡವರು ಅನಿವಾರ್ಯವಾಗಿ ತಮ್ಮ ಹೊಲಗಳನ್ನು ಲಾವಣಿ ಅಂದರೆ ಭೂ ಬಾಡಿಗೆಯ ಆಧಾರದ ಮೇಲೆ ಇತರ ರೈತರಿಗೆ ಕೊಡುತ್ತಾರೆ. ಇಂತಹ ಹೊಲಗಳನ್ನು ಕೊಟ್ಟ ಮಾಲೀಕರು ಹೆಚ್ಚಾಗಿ ಅವರ ಹೊಲದಲ್ಲಿ ಏನು ಬೆಳೆಯುತ್ತಾರೆ ಎಂಬುದನ್ನು ಗಮನಿಸುವುದಿಲ್ಲ. ಯುಗಾದಿಯಿಂದ ಯುಗಾದಿವರೆಗಿನ ಈ ಲಾವಣಿ ಪದ್ಧತಿಯೇ ನಶೆ ಬೆಳೆಸುವ ಮಾಫಿಯಾಗೆ ದೊಡ್ಡ ಆಸರೆಯಾಗಿ ನಿಂತಿದೆ.

ಹುಬ್ಬಳ್ಳಿ, ಬೆಳಗಾವಿಯಲ್ಲಿನ ನಶೆ ನಂಟಿರುವ ಪೆಡ್ಲರ್‌ಗಳು ಲಾವಣಿ ರೂಪದಲ್ಲಿ ಪರಿಚಯಸ್ಥ ಕಳ್ಳ ರೈತರನ್ನು ಹಣ ಕೊಟ್ಟು ಬುಟ್ಟಿಗೆ ಹಾಕಿಕೊಂಡು ಅವರಿಂದ ನಶೆಪೀಡೆಯಾದ ಗಾಂಜಾ ಬೆಳೆ ಬೆಳೆಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಕ್ಕ, ಹಣದ ಅಡಚಣೆ ಇರುವ ರೈತರೇ ಇದಕ್ಕೆ ಬಲಿಯಾಗುತ್ತಿದ್ದಾರೆ.

Advertisement

ಗುಡ್ಡದ ಮೇಲೆಕಡ್ಡದ ಮಧ್ಯೆ: ಇನ್ನು ಗಾಂಜಾ ಕೇವಲ ಹೊಲಗಳಲ್ಲಿ ಬೆಳೆಯಲಾಗುತ್ತಿಲ್ಲ. ಬದಲಿಗೆ ಹೊಲಗಳ ಬದುಗಳಿಗೆ ಅಂಟಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ಕೂಡ ಅಲ್ಲಲ್ಲಿ ಗಾಂಜಾ ಬೆಳೆ ತಲೆ ಎತ್ತುತ್ತಿದೆ . ಕಾರಣ ಅರಣ್ಯದ ಪಕ್ಕದ ಹೊಲಗಳಲ್ಲಿ ಜನರ ಒಡನಾಟವೇ ಇರುವುದಿಲ್ಲ. ತಮ್ಮ ಹೊಲಗಳಲ್ಲಿಯೇ ಕೆಲಸ ಮಾಡುತ್ತಲೇ ಪಕ್ಕದ ಅರಣ್ಯದ ಮಧ್ಯದಲ್ಲಿ ಅಜ್ಞಾತ ಸ್ಥಳಗಳನ್ನು ಗುರುತು ಹಾಕಿ ಅಲ್ಲಲ್ಲಿ ಗಾಂಜಾ ಬೀಜಗಳನ್ನು ಬೀಸಾಡಿ ಬರುವ ಕಳ್ಳರು, ಆಗಾಗ ಅವುಗಳ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಅವು ಬೆಳೆದು ದೊಡ್ಡವಾಗುತ್ತಿದ್ದಂತೆಯೇ ಅವುಗಳನ್ನು ಕಳ್ಳದಾರಿ ಮೂಲಕ ಸಾಗಾಟ ಮಾಡುತ್ತಾರೆ. ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹೊಲಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಗೋವಾದ ನಂಟು: ಗಾಂಜಾಕ್ಕೆ ಅತ್ಯಂತ ದೊಡ್ಡ ಮಾರುಕಟ್ಟೆ ಕರ್ನಾಟಕದ ಪಕ್ಕದ ರಾಜ್ಯ ಗೋವಾ. ಹೀಗಾಗಿಯೇ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಂಜಾ ನಂಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ರೈತರಿಗಿಂತಲೂ ಹೆಚ್ಚಾಗಿ ಇದರ ಸಾಗಾಟ ಮಾಡುವ ರೌಡಿಶೀಟರ್‌ಗಳು, ಡ್ರಗ್ಸ್‌ ಪೆಡ್ಲರ್‌ ಗಳ ಪಾತ್ರ ದೊಡ್ಡದಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆಯಾದ ಗಾಂಜಾ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿಗೆ ತೀವ್ರ ನಶೆ ನೀಡುವ ಟಾಪ್‌-1 ಮಾದಕ ವಸ್ತುವಾಗಿ ಬೆಳೆದು ನಿಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next