Advertisement

ಹಿನ್ನಡೆ-ಮುನ್ನಡೆ ಕ್ಷೇತ್ರದತ್ತ ಕಣ್ಣಿಟ್ಟ ಅಭ್ಯರ್ಥಿಗಳು

03:35 PM Jul 16, 2019 | Team Udayavani |
ಕೊಪ್ಪಳ: ಕ್ಷೇತ್ರವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಕಾವು ರಂಗೇರಿದೆ. ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಎಡೆಬಿಡದೇ ಅಬ್ಬರದ ಪ್ರಚಾರ ನಡೆಸಿದ್ದು, ಅದರಲ್ಲೂ ಕಳೆದ ಬಾರಿ ಚುನಾವಣೆಯಲ್ಲಿ
ಹಿನ್ನಡೆ-ಮುನ್ನಡೆ ಕೊಟ್ಟ ಕ್ಷೇತ್ರಗಳ ಮೇಲೆಯೇ ಹೆಚ್ಚು ಪ್ರಚಾರಕ್ಕಿಳಿದಿದ್ದಾರೆ.
ಹೌದು.. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಸವರಾಜ ಹಿಟ್ನಾಳ ಹಾಗೂ ಬಿಜೆಪಿಯಿಂದ ಸಂಗಣ್ಣ ಕರಡಿ ಅವರು ಸ್ಪರ್ಧಿಸಿದ್ದರು. ವಿಶೇಷವೆಬಂತೆ, ಕಳೆದ ಅವಧಿಯಲ್ಲಿ ಕುಷ್ಟಗಿಯಲ್ಲಿ ಬಿಜೆಪಿಯ ದೊಡ್ಡನಗೌಡ ಪಾಟೀಲ್‌ ಅವರನ್ನು ಹೊರತುಪಡಿಸಿ ಇನ್ನುಳಿದ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಶಾಸಕರೇ ಅಧಿಕಾರದಲ್ಲಿದ್ದರು. ಅದರ ಮಧ್ಯೆಯೂ ಸಂಗಣ್ಣ ಕರಡಿ ಮೋದಿ ಅಲೆಯಲ್ಲೇ ಗೆಲುವಿನ ನಗೆ ಬೀರಿದ್ದರು.
ಕರಡಿಗೆ ನಾಲ್ಕು ಕ್ಷೇತ್ರದಲ್ಲಿ
 ಮುನ್ನಡೆ: ಕಳೆದ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರು ನಾಲ್ಕು ಬಾರಿ ಶಾಸಕರಾಗಿದ್ದ ಕೊಪ್ಪಳ ಕ್ಷೇತ್ರದ ಮತದಾರರೇ ಅವರಿಗೆ ಕೈ ಕೊಟ್ಟಿದ್ದರು. ಕರಡಿ ಸಿಂಧನೂರು ಕ್ಷೇತ್ರದಲ್ಲಿ-69,752, ಮಸ್ಕಿ ಕ್ಷೇತ್ರದಲ್ಲಿ -53,421, ಕನಕಗಿರಿ
ಕ್ಷೇತ್ರದಲ್ಲಿ-69,337, ಯಲಬುರ್ಗಾ ಕ್ಷೇತ್ರದಲ್ಲಿ 63,401 ಮತ ಪಡೆದಿದ್ದರು.
ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಸವರಾಜ ಹಿಟ್ನಾಳ ಅವರಿಗೆ ಸಿಂಧನೂರು ಕ್ಷೇತ್ರದಲ್ಲಿ 49,660, ಮಸ್ಕಿಯಲ್ಲಿ 38,956, ಕನಕಗಿರಿ ಕ್ಷೇತ್ರದಲ್ಲಿ 55,809, ಯಲಬುರ್ಗಾದಲ್ಲಿ 55,683 ಮತಗಳು ಬಂದಿದ್ದವು. ಕರಡಿ ಈ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದರು.
ನಾಲ್ಕು ಕ್ಷೇತ್ರಗಳಲ್ಲಿ ಹಿಟ್ನಾಳ ಕೈ ಮೇಲು: ಕರಡಿ ಅವರಿಗೆ ನಾಲ್ಕು ಕ್ಷೇತ್ರ ಮುನ್ನಡೆ ಕೊಟ್ಟಿದ್ದರೆ, ಹಿಟ್ನಾಳ ಅವರಿಗೆ ನಾಲ್ಕು ಕ್ಷೇತ್ರಗಳು ಮುನ್ನಡೆ ಕೊಟ್ಟಿವೆ. ಗಂಗಾವತಿ-63,705, ಕೊಪ್ಪಳ-79,349, ಸಿರಗುಪ್ಪ-54,921, ಕುಷ್ಟಗಿ-55,793 ಮತದಾರರು ಹಿಟ್ನಾಳ ಕೈ ಹಿಡಿದಿದ್ದರು. ಕರಡಿ ಗಂಗಾವತಿ-53,460, ಕೊಪ್ಪಳ- 68,541, ಸಿರಗುಪ್ಪಾ-53,913, ಕುಷ್ಟಗಿ-54,363 ಮತ ಪಡೆದು ಹಿನ್ನಡೆ ಅನುಭವಿಸಿದ್ದರು. ಅಚ್ಚರಿಯ ವಿಷಯವೆಂದರೆ ಕುಷ್ಟಗಿಯಲ್ಲಿ ಬಿಜೆಪಿ ಶಾಸಕರಿದ್ದರೂ ಕರಡಿ ಮತ ಪಡೆಯುವಲ್ಲಿ ಹಿನ್ನಡೆ ಅನುಭವಿಸಿದ್ದರು.
ಹಿನ್ನಡೆ-ಮುನ್ನಡೆಯದ್ದೆ ಲೆಕ್ಕಾಚಾರ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಸವರಾಜ ಹಿಟ್ನಾಳ ಪುತ್ರ ರಾಜಶೇಖರ ಕಣದಲ್ಲಿದ್ದಾರೆ. ಬಿಜೆಪಿಯಿಂದ ಮತ್ತೆ ಕರಡಿ ಸಂಗಣ್ಣ ಸ್ಪರ್ಧಿಸಿದ್ದಾರೆ. ಈ ಬಾರಿ ವಿಶೇಷವೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈ-ಕಮಲಕ್ಕೆ ಹಿನ್ನಡೆ ಹಾಗೂ ಮುನ್ನಡೆ ಕೊಟ್ಟ ಕ್ಷೇತ್ರಗಳ ಮೇಲೆಯೇ ಹೆಚ್ಚಿನ ಕಾಳಜಿ
ವಹಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಸಿಂಧನೂರು, ಮಸ್ಕಿ, ಕನಕರಿಗಿ, ಯಲಬುರ್ಗಾ ಭಾಗದಲ್ಲೇ ಹೆಚ್ಚಿನ ಪ್ರಚಾರ ಮಾಡುತ್ತಿದ್ದಾರೆ.
ಈಗಾಗಲೇ 2-3 ಬಾರಿ ಸಭೆ, ಸಮಾರಂಭ ನಡೆಸಿ ಮತಯಾಚನೆ ಮಾಡಿದ್ದಾರೆ. ಶಿವರಾಜ ತಂಗಡಗಿ ಸೇರಿದಂತೆ ಹಲವು ಮುಖಂಡರ ಪಡೆ ಕಟ್ಟಿಕೊಂಡು ಹಿಟ್ನಾಳ ಕುಟುಂಬ ಹಗಲಿರುಳು ಮತಬೇಟೆಗೆ ಮುಂದಾಗಿದೆ. ಇನ್ನೂ ಸಂಗಣ್ಣ
ಕರಡಿಯೂ ಟಿಕೆಟ್‌ ಘೋಷಣೆಯಾದ ಬೆನ್ನಲ್ಲೇ ಎಲ್ಲ ಸ್ವಾಮೀಜಿಗಳನ್ನು, ಮಸೀದಿಗಳ ಧರ್ಮಗುರುಗಳನ್ನು ಭೇಟಿ ಮಾಡಿದ್ದು ಈ ಬಾರಿ ವಿಶೇಷವಾಗಿದೆ.
ಕೈ ಸಮಾವೇಶ, ಕಮಲದ ರ್ಯಾಲಿ: ಕಾಂಗ್ರೆಸ್‌ನ ಅಭ್ಯರ್ಥಿ ಜಿಲ್ಲಾ ಕೇಂದ್ರ ಕೊಪ್ಪಳ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಪ್ರಚಾರ ನಡೆಸುತ್ತಿದ್ದರೆ, ಹೊರ ಕ್ಷೇತ್ರಗಳಲ್ಲಿಯೇ ಹೆಚ್ಚು ಮುತುವರ್ಜಿ ವಹಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್‌ ಸಿದ್ದರಾಮಯ್ಯ ಅವರಿಂದ ಬೃಹತ್‌ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿದೆ. ಆದರೆ ಕಮಲ ಕೇವಲ ರ್ಯಾಲಿ ನಡೆಸುವ ಮೂಲಕ ಮತಯಾಚಿಸಿದೆ. ಅದರ ಜೊತೆಗೆ ಮೋದಿ ಅವರನ್ನು ಗಂಗಾವತಿಗೆ ಕರೆಸುವ
ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು ಹಿನ್ನಡೆ-ಮುನ್ನಡೆ ಕೊಟ್ಟ ಕ್ಷೇತ್ರಗಳ ಮೇಲೆಯೇ ಕಾಳಜಿ ವಹಿಸಿ ಪ್ರಚಾರದಲ್ಲಿ ತೊಡಗಿದ್ದಾರೆ.
„ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next