ಬಾಗಲಕೋಟೆ: ಕಳೆದ ಒಂದು ತಿಂಗಳಿಂದ ಚುನಾವಣೆಯ ಪ್ರಚಾರದಲ್ಲಿ ಬ್ಯೂಸಿಯಾಗಿದ್ದ ಅಭ್ಯರ್ಥಿಗಳು ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
ಕಾಲಿಗೆ ಚಕ್ರ ಕಟ್ಟಿಕೊಂಡು ಬಿಸಿಲು, ಹಸಿವು, ಬಾಯಾರಿಕೆ ಲೆಕ್ಕಿಸದೇ ಮತಯಾಚಿಸಲು ಮತದಾರರ ಮನೆ ಮನಗೆಲ್ಲುವಲ್ಲಿ ನಿರತವಾಗಿದ್ದ ಅಭ್ಯರ್ಥಿಗಳು ಬುಧುವಾರ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲ ಒತ್ತಡ, ಜಂಜಾಟಗಳಿಂದ ಹೊರ ಬಂದು ತಮ್ಮ ಕುಟುಂಬದವರ ಜತೆ ಕಾಲಕಳೆಯುವಲ್ಲಿ ನಿರತವಾಗಿದ್ದಾರೆ. ಮನೆಗೆ ಬರುವ ಕಾರ್ಯಕರ್ತರ ಜೊತೆಗೆ ಸೌಜನ್ಯದ ಮಾತುಕತೆ ಹಾಗೂ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವ ಮಾಹಿತಿ ಕೇಳಿ ತಿಳಿದುಕೊಂಡರು. ಜಿಲ್ಲೆಯಲ್ಲಿ ಇರುವ ಪ್ರಮುಖ ಅಭ್ಯರ್ಥಿಗಳು ವಿಶ್ರಾಂತಿಗಾಗಿ ಯಾವುದೇ ಟೂರ್ ಹಮ್ಮಿಕೊಂಡಂತೆ ಕಾಣುತ್ತಿಲ್ಲ. ಆದರೆ ಎಲೆಕ್ಷನ್ ಮುಗಿದ ಬಳಿಕ ಸೋಲು ಗೆಲುವಿನ ಟೆನ್‌ಸನ್ ಮೂಡುತ್ತಿದೆ.
ಜೆಡಿಎಸ್-ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಇಳಕಲ್ಲ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದರು. ಕಳೆದ ಒಂದು ತಿಂಗಳಿನಿಂದ ಟಿಕೆಟ್, ಟಿಕೆಟ್ ಸಿಕ್ಕ ಮೇಲೆ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು. ಆದರೆ ಬುಧವಾರ ಚುನಾವಣೆ ಗದ್ದಲದಿಂದ ಹೊರಬಂದು ಕುಟುಂಬದವರೊಂದಿಗೆ ಕಾಲ ಕಳೆದರು. ಮಕ್ಕಳಾದ ಸಕ್ಷಮ್ ಮತ್ತು ಸಮೀಕ್ಷಾ ಜತೆ ಹರಟೆ ಹೊಡೆಯುತ್ತಾ ಮಕ್ಕಳಿಗೆ ಕೈ ತುತ್ತು ಉಣಬಡಿಸಿದರು. ಮನೆಗೆ ಆಗಮಿಸಿದ ಕಾರ್ಯಕರ್ತರೊಂದಿಗೆ ಮತದಾನದ ಕುರಿತು ಮಾತುಕತೆ ನಡೆಸಿದರು. ರಾಜ್ಯ-ಜಿಲ್ಲಾ ಮುಖಂಡರ ಜತೆ ಸೋಲು ಗೆಲುವಿನ ಲೆಕ್ಕಾಚಾರ ಬಗ್ಗೆ ಚರ್ಚೆ ನಡೆಸಿದರು. ಇದರ ನಡುವೆ ಬರುವ ದೂರವಾಣಿ ಕರೆ ಸ್ವೀಕರಿಸಿ, ಲವಲವಿಕೆಯಿಂದ ಮಾತನಾಡುವುದು ಸಾಮಾನ್ಯವಾಗಿತ್ತು. ಗೆಲುವು ನಿಮ್ಮದೇ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಸಂಜೆ ಕೂಡಲಸಂಗಮನಾಥ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದರು.
ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಕೂಡ ಚುನಾವಣೆ ಗುಂಗಿನಿಂದ ಹೊರ ಬಂದಿದ್ದು, ಬಾದಾಮಿಯ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆಗೆ ಸಮಯ ಕಳೆದರು. ವಿವಿಧೆಡೆಯಿಂದ ಕಾರ್ಯಕರ್ತರ ದಂಡು ಆಗಮಿಸಿತ್ತು. ನಗು ನಗುತ್ತಲೇ ಕಾರ್ಯಕರ್ತರ ಬಳಿ ಮತದಾನದ ಕುರಿತು ಮಾಹಿತಿ ಪಡೆದುಕೊಂಡರು.
Advertisement
ಕಳೆದ ಒಂದು ತಿಂಗಳಿಂದ ಚುನಾವಣೆಯ ಕಾವಿನ ಜತೆಗೆ ಬಿಸಿಲಿಗೂ ಹೆದರದೇ ಪ್ರಚಾರದಲ್ಲಿ ತೊಡಕೊಂಡಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಈಗ ವಿಶ್ರಾಂತಿಯಲ್ಲಿದ್ದಾರೆ. ಪ್ರಚಾರದ ದಿನಗಳಲ್ಲಿ ಅಭ್ಯರ್ಥಿಗಳು ತಿರುಗಾಡದಿರುವ ಬೀದಿಗಳು ಉಳಿದಿಲ್ಲ. ಜನರಿಗೆ ಕೈ ಮುಗಿಯುವುದು ನಿಲ್ಲಿಸಿರಲಿಲ್ಲ.
Related Articles
Advertisement