Advertisement

ಜಾಲತಾಣದಲ್ಲಿ ಸಿಎಂ ಅಭ್ಯರ್ಥಿಗಳೇ ಬಲು ಹಿಂದೆ!

06:00 AM Sep 25, 2017 | |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಬ್ಬರದ ಸಿದ್ಧತೆಗಳನ್ನು ಆರಂಭಿಸುತ್ತಿದ್ದು, ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿವೆ.

Advertisement

ಆದರೆ, ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಗಳು ಮಾತ್ರ ಸಾಮಾಜಿಕ ಜಾಲತಾಣಗಳನ್ನು ಪರಿಣಾಮ ಕಾರಿಯಾಗಿ ಬಳಸಿಕೊಳ್ಳುವಲ್ಲಿ ಅಷ್ಟೊಂದು ಕ್ರಿಯಾಶೀಲರಾಗಿಲ್ಲ.

ಹೌದು, ರಾಜ್ಯದ ಮೂವರು ಮುಖ್ಯಮಂತ್ರಿ ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ ಬೆಂಬಲಿಗರ ಸಂಖ್ಯೆ ಒಟ್ಟು 3.5 ಲಕ್ಷವನ್ನೂ ತಲುಪುತ್ತಿಲ್ಲ. ಇವುಗಳ ನಿರ್ವಹಣೆಗೆಂದೇ ಪ್ರತ್ಯೇಕ ತಂಡಗಳಿದ್ದರೂ
ಜನಬೆಂಬಲ ಗಳಿಸುವಲ್ಲಿ ಅವರ ಫೇಸ್‌ಬುಕ್‌ ಮತ್ತು ಟ್ವಿಟರ್‌ ಪೇಜ್‌ಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಹಾಗೂ ಮತ್ತೂಬ್ಬ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ನ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಈ ಪೈಕಿ ಮೊದಲ ಸ್ಥಾನದಲ್ಲಿರುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ. ಅವರ ಫೇಸ್‌ಬುಕ್‌ ಪೇಜ್‌ಗೆ 1.36 ಲಕ್ಷ ಮತ್ತು ಟ್ವಿಟರ್‌ ಪೇಜ್‌ಗೆ 1.25 ಲಕ್ಷ ಬೆಂಬಲಿಗರಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೇಸ್‌ಬುಕ್‌ ಪೇಜ್‌ 56,600 ಮತ್ತು ಟ್ವಿಟರ್‌ ಪೇಜ್‌ 13600 ಬೆಂಬಲಿಗರನ್ನು ಹೊಂದಿವೆ. ಇನ್ನು ಎಚ್‌.ಡಿ.ಕುಮಾರಸ್ವಾಮಿ ಅವರ ಫೇಸ್‌ಬುಕ್‌ ಪೇಜ್‌ಗೆ 3664 ಮತ್ತು ಟ್ವಿಟರ್‌ ಪೇಜ್‌ಗೆ 5890 ಬೆಂಬಲಿಗರಿದ್ದಾರೆ.

Advertisement

ಕಾಲೆಳೆಯುವುದರಲ್ಲಿ ಸಿ.ಟಿ.ರವಿ ಖ್ಯಾತಿ: ಮಾಜಿ ಮುಖ್ಯಮಂತ್ರಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಅವರ ಟ್ವಿಟರ್‌ ಪೇಜನ್ನು 30 ಸಾವಿರ ಮತ್ತು ಫೇಸ್‌ ಬುಕ್‌ ಪೇಜನ್ನು 1.25 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಟ್ವಿಟರ್‌ ಬಳಕೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಅವರ ಟ್ವಿಟರ್‌ ಪೇಜನ್ನು 63 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಆದರೆ, ಟ್ವೀಟ್‌ಗಳ ಮೂಲಕ ಬೇರೆಯವರ ಕಾಲೆಳೆಯುವುದು, ಬೇರೆಯವ ರಿಂದ ಕಾಲೆಳೆಸಿಕೊಳ್ಳುವುದು, ಯಾವುದೇ ವಿಚಾರಗಳ ಬಗ್ಗೆ ತಕ್ಷಣ ಪ್ರತಿಕ್ರಿಯಿಸುವುದರಲ್ಲಿ ಸಿ.ಟಿ.ರವಿ ಮೊದಲ ಪಂಕ್ತಿಯಲ್ಲಿದ್ದಾರೆ.

ಎಸ್‌.ಸುರೇಶ್‌ಕುಮಾರ್‌ ಡಾ.ಸಿ.ಎನ್‌. ಅಶ್ವತ್ಥನಾರಾಯಣ ನಂತರದಲ್ಲಿದ್ದಾರೆ. ಕಾಂಗ್ರೆಸ್‌ ನಲ್ಲಿ ದಿನೇಶ್‌ ಗುಂಡೂರಾವ್‌ ಹೊರತುಪಡಿಸಿ ಬೇರೆಯವರು ಅಷ್ಟೊಂದು ಕ್ರಿಯಾಶೀಲರಾಗಿಲ್ಲ. ಇನ್ನು 5.35 ಲಕ್ಷ ಬೆಂಬಲಿಗರನ್ನು ಹೊಂದಿರುವ ಮಾಜಿ ಸಂಸದೆ, ನಟಿ ರಮ್ಯಾ ಟ್ವಿಟರ್‌ಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಟ್ವಿಟರ್‌ನಲ್ಲಿ 18,700, ಫೇಸ್‌ಬುಕ್‌ನಲ್ಲಿ 36 ಸಾವಿರ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಟ್ವಿಟರ್‌ನಲ್ಲಿ 3983 ಮತ್ತು ಫೇಸ್‌ಬುಕ್‌ನಲ್ಲಿ 49 ಸಾವಿರ ಬೆಂಬಲಿಗರನ್ನು ಹೊಂದಿದ್ದಾರೆ. ಬಿಜೆಪಿಯ ಆಧುನಿಕ ಪ್ರಚಾರ (ಸಾಮಾಜಿಕ ಜಾಲತಾಣ, ಟ್ವಿಟರ್‌, ಫೇಸ್‌ ಬುಕ್‌, ಡಿಜಿಟಲ್‌ ಮೀಡಿಯಾ) ತಂಡದ ನೇತೃತ್ವ ವಹಿಸಿರುವ ಸಂಸದ ಪ್ರಹ್ಲಾದ ಜೋಶಿ ಅವರಿಗೆಫೇಸ್‌ಬುಕ್‌ನಲ್ಲಿ 66 ಸಾವಿರ ಮತ್ತು ಟ್ವಿಟರ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಬೆಂಬಲಿಗರಿದ್ದಾರೆ.

ಜೆಡಿಎಸ್‌: ಜೆಡಿಎಸ್‌ನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಹೊರತುಪಡಿಸಿ ಬೇರೆ ಯಾವ ನಾಯಕರೂ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾಗಿಲ್ಲ. ಸಕ್ರಿಯವಾಗುತ್ತಿವೆ ಸಾಮಾಜಿಕ ಜಾಲತಾಣ ಪುಟಗಳು:ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳು ಹೆಚ್ಚು ಕ್ರಿಯಾಶೀಲವಾಗಿಲ್ಲದಿದ್ದರೂ ರಾಜಕೀಯ ಪಕ್ಷಗಳ ಪರ ಮತ್ತು ವಿರೋಧ ಫೇಸ್‌ಬುಕ್‌ ಪುಟಗಳು, ಟ್ವಿಟರ್‌ ಹ್ಯಾಷ್‌ಟ್ಯಾಗ್‌ಗಳು ಇದೀಗ ಹೆಚ್ಚು ಕ್ರಿಯಾಶೀಲವಾಗಿವೆ. ಅದರಲ್ಲೂ ಬಿಜೆಪಿ ಪರ ಫೇಸ್‌ಬುಕ್‌ ಪುಟಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ವಿಶೇಷವೆಂದರೆ ಇವುಗಳಲ್ಲಿ ನಕಲಿ ಖಾತೆಗಳೇ ಹೆಚ್ಚು. ಈ ಪೈಕಿ ಫೇಸ್‌ಬುಕ್‌ನಲ್ಲಿ ಮೊದಲ ಸ್ಥಾನದಲ್ಲಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದಟಛಿದ ನಿದ್ದರಾಮಯ್ಯ (ಎದ್ದೇಳಿ ಸಿದ್ದರಾಮಯ್ಯ) ಪುಟ. ಇದು 1.37 ಲಕ್ಷ ಬೆಂಬಲಿಗರನ್ನು ಹೊಂದಿದೆ. ನಂತರದ ಸ್ಥಾನದಲ್ಲಿರುವ ಜೋಕರ್ಸ್‌ ಆಫ್ ಬಿಜೆಪಿ- 86747, ಬಿಜೆಪಿ ಫಾರ್‌ 2018- 77,953, ಸಿದ್ದರಾಮಯ್ಯ ಸಿಎಂ ಆಫ್ ಕರ್ನಾಟಕ- 56 ಸಾವಿರ, ಕುಮಾರಸ್ವಾಮಿ ವರ್ಲ್ಡ್ವೈಡ್‌ ಫ್ಯಾನ್ಸ್‌ - 46856 ಬೆಂಬಲಿಗರನ್ನು ಹೊಂದಿವೆ. ಅದೇ ರೀತಿ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ, ಹಿಯಾಳಿಸುವ ಹತ್ತಾರು ಫೇಸ್‌ ಬುಕ್‌ ಪೇಜ್‌ಗಳು ಹುಟ್ಟಿಕೊಳ್ಳುತ್ತಿದ್ದು, ಕೆಲವು ಪೇಜ್‌ಗಳಲ್ಲಿ ಅಶ್ಲೀಲ, ತೀರಾ ಕೆಳಮಟ್ಟದ ಭಾಷೆಗಳನ್ನು ಬಳಸಲಾಗುತ್ತಿದೆ. ಟ್ವಿಟರ್‌ಗಳಲ್ಲಿ ಹ್ಯಾಷ್‌ಟ್ಯಾಗ್‌ಗಳ ಮೂಲಕ ಪರಸ್ಪರ ಕೆಸರೆರಚಾಟ ಸಹ ನಡೆಯುತ್ತಿದೆ.

ಸಿಎಂಗಳಲ್ಲಿ ಫ‌ಡ್ನವೀಸ್‌ ಮೊದಲಿಗ
ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 2ನೇ ಸ್ಥಾನದಲ್ಲಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ 3ನೇ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ದೇವೇಂದ್ರ ಫ‌ಡ್ನವೀಸ್‌ ಅವರನ್ನು ಟ್ವಿಟರ್‌ನಲ್ಲಿ 22.7 ಲಕ್ಷ ಮತ್ತು ಫೇಸ್‌ ಬುಕ್‌ನಲ್ಲಿ 38 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ, ಚಂದ್ರಬಾಬು ನಾಯ್ಡು ಅವರನ್ನು ಟ್ವಿಟರ್‌ನಲ್ಲಿ 26.6 ಲಕ್ಷ ಮತ್ತು ಫೇಸ್‌ಬುಕ್‌ನಲ್ಲಿ 10.33 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಪಿಣರಾಯಿ ವಿಜಯನ್‌ ಅವರನ್ನು ಟ್ವಿಟರ್‌ನಲ್ಲಿ 76,700 ಮಂದಿ ಮತ್ತು ಫೇಸ್‌ಬುಕ್‌ನಲ್ಲಿ 56900 ಮಂದಿ ಬೆಂಬಲಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ 56,600 ಮತ್ತು ಟ್ವಿಟರ್‌ನಲ್ಲಿ 13600 ಬೆಂಬಲಿಗರನ್ನು ಹೊಂದಿದ್ದಾರೆ.

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next