Advertisement

ಬಿಜೆಪಿಗೆ ಅಭ್ಯರ್ಥಿ ಕಗ್ಗಂಟು; ಅನರ್ಹರ ಇಕ್ಕಟ್ಟು

11:29 PM Sep 21, 2019 | Lakshmi GovindaRaju |

ಬೆಂಗಳೂರು: ಹದಿನೈದು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಘೋಷಣೆ ಆಗಿರುವುದರಿಂದ ಸಂಘಟನೆಯಲ್ಲಿ ಮುಂದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ. ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಲ್ಲಿ ಅಭ್ಯರ್ಥಿ ಯಾರು? ಎಂಬುದು ಬಿಜೆಪಿಗೆ ತಕ್ಷಣಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ.

Advertisement

ಆದರೂ ಎಲ್ಲಾ ಕ್ಷೇತ್ರಗಳ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಒಂದು ಸುತ್ತಿನ ಸಭೆ ನಡೆಸಿ ಪಕ್ಷ ಸಜ್ಜಾಗಿದೆ. ಸ್ಥಳೀಯವಾಗಿಯೂ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಇರುವುದರಿಂದ ಒಮ್ಮತದ ಆಯ್ಕೆ ಅಷ್ಟು ಸುಲಭವೂ ಅಲ್ಲ. ಆದರೆ, ಬಿಜೆಪಿಗೆ ಅನರ್ಹರನ್ನು ಬಿಟ್ಟು, ಅಭ್ಯರ್ಥಿ ಆಯ್ಕೆ ಮಾಡುವುದು ಕಷ್ಟ. ಅನರ್ಹರು ಈ ಹಿಂದೆ ರಾಜೀನಾಮೆ ನೀಡದೇ ಇದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ.

ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: 15 ಕ್ಷೇತ್ರದಲ್ಲೂ ಬಿಜೆಪಿ ಪ್ರಬಲ ಅಭ್ಯರ್ಥಿಗಳಿದ್ದಾರೆ. ಆದರೆ, ಅವರಿಗೆ ನೇರವಾಗಿ ಟಿಕೆಟ್‌ ನೀಡುವ ಸ್ಥಿತಿಯಲ್ಲಿ ಸದ್ಯದ ಬಿಜೆಪಿ ಇಲ್ಲ. ಕಾರಣ, ಅನರ್ಹರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಬೇಕಾಗುತ್ತದೆ. ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದೇ ಇರಬಹುದು. ಆದರೂ, ಸೂಚಿಸುವ ಅಭ್ಯರ್ಥಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡಿಬೇಕು ಎಂದು ಅನರ್ಹ ಶಾಸಕರು ಪಟ್ಟು ಹಿಡಿದರೆ ಬಿಜೆಪಿಯಿಂದ ಟಿಕೆಟ್‌ ನೀಡಲೇ ಬೇಕಾಗುತ್ತದೆ. ಆಗ ಮೂಲ ಬಿಜೆಪಿಗರಿಗೆ ಅನ್ಯಾಯವಾಗುವ ಸಾಧ್ಯತೆಯೂ ಇದೆ.

ಇಕ್ಕಟ್ಟಿಗೆ ಸಿಲುಕಿದೆ: ಅನರ್ಹ ಶಾಸಕರಿಗಾಗಿ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತರು, ಯಾವ ಕ್ಷೇತ್ರದಲ್ಲೂ ಸಿದ್ಧವಿಲ್ಲ ಎಂಬುದು ಬಿಜೆಪಿ ರಾಜ್ಯ ನಾಯಕರಿಗೆ ತಿಳಿದಿದೆ. ಹೀಗಾಗಿ ಮೂಲ ಬಿಜೆಪಿಯನ್ನು ಕಡೆಗಣಿಸಲಾಗದೆ, ಅನರ್ಹ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರಲಾರದೆ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ.

ಹದಿನೈದು ಕ್ಷೇತ್ರದಲ್ಲೂ ಬಿಜೆಪಿ ಬಲಯುತವಾಗಿದೆ. ಅನರ್ಹ 15 ಶಾಸಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತಗಳಿಸಿದ್ದಾರೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಹದಿನೈದು ಕ್ಷೇತ್ರದಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಅಲ್ಪಮತಗಳ ಅಂತರದಲ್ಲಿ ಸೀಟು ಕಳೆದುಕೊಂಡಿದೆ.

Advertisement

ರಾಜ್ಯಪ್ರವಾಸ: ಉಪಚುನಾವಣೆಗೆ ಬಿಜೆಪಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹಿತವಾಗಿ ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಸಂಘಟನೆ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಜಿಲ್ಲಾ ಪ್ರವಾಸ, ರಾಜ್ಯಪ್ರವಾಸ, ಕಾರ್ಯಕರ್ತರ ಭೇಟಿ ಇತ್ಯಾದಿ ನಿರಂತವಾಗಿ ನಡೆಯುತ್ತಿದೆ.

ಹೆಚ್ಚಿನ ಪ್ರಾಬಲ್ಯ: ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ, 15 ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಅನರ್ಹಗೊಂಡಿರುವ ಶಾಸಕರು ಹೆಚ್ಚಿನ ಪ್ರಾಬಲ್ಯ ಸಾಧಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ಕರೆದು ಹಲವು ರೀತಿಯಲ್ಲಿ ಚರ್ಚೆಯನ್ನೂ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಉಪ ಚುನಾವಣೆ ನಡೆಯಲಿರುವ ಎಲ್ಲಾ ಕ್ಷೇತ್ರದಲ್ಲೂ ಸಂಘಟನಾ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿದೆ. ಬೂತ್‌ ಮಟ್ಟದಲ್ಲಿ ಪಕ್ಷ ಬಲಪಡಿಸಲು ಪೇಜ್‌ ಪ್ರಮುಖರನ್ನು ನೇಮಿಸಿ, ಜವಾಬ್ದಾರಿ ಹಂಚಿಕೆ ಮಾಡಿತ್ತು. ಸಂಘಟನಾತ್ಮಕವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಲು ಏನು ಬೇಕೋ ಅದೆಲ್ಲವನ್ನೂ ಬಿಜೆಪಿ ಕ್ಷೇತ್ರವಾರು ಮಾಡಿಕೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next